ಈ ಎಲ್ಲಾ ಸಹಜವಾದ ಅವಾಂತರಗಳ ನಂತರ ಸಕಲೇಶಪುರ ತಲುಪಿದಾಗ ರಾತ್ರಿ ಗಂಟೆ ಎಂಟು. ಎರಡು ಗಂಟೆಗಳ ದೀರ್ಘಕಾಲದ ಪ್ರಯಾಣದ ನಂತರ ಬಸ್ಸ್ಟ್ಯಾಂಡಿನ ಟಾಯ್ಲೆಟ್ಗೆ ಹೋದರೆ ಉಸಿರುಕಟ್ಟಿ ಸಾಯುವಂಥ ಅನುಭವ! ಕೆ.ಎಸ್.ಆರ್.ಟಿ.ಸಿ.ಯವರೋ ಅಥವಾ ಪುರಸಭೆಯವರೋ—ಯಾರದ್ದೋ ಜವಾಬ್ದಾರಿ. ಅವರಂತೂ ಎಚ್ಚರವಾಗಿರಲಿಲ್ಲವೆಂದೆನಿಸುತ್ತೆ. ಅವರು ಎಚ್ಚರವಾಗಿರಲಿಲ್ಲವಾದ್ದರಿಂದ, ನಮ್ಮನ್ನು ಒಳಗೆ ಬಂದೊಡನೆ ಎಚ್ಚರ ತಪ್ಪಿಸುವ ಹುನ್ನಾರವಿದೆ ಎಂದು ಕಾಣಿಸುತ್ತೆ.
ಇದು ಇದೊಂದು ಊರಿನ ಸಮಸ್ಯೆಯಲ್ಲ. ಸಾರ್ವಜನಿಕ ಆಸ್ತಿ, ವ್ಯವಸ್ಥೆ ಎಂದರೆ ಈ ರೀತಿಯ ಅಸಡ್ಡೆ, ಅನಾದರ ಸಹಜವೇನೋ ಎಂಬ ಸಂದೇಹ ಮೂಡುತ್ತದೆ. ಯಾರೋ ಒಬ್ಬ ಒಳಗೆ ಸೇರಿಕೊಂಡಿದ್ದಾನೆ. ಟಾಯ್ಲೆಟ್ ಮೇಲ್ವಿಚಾರಕ, ‘ಅಣ್ಣಾ, ಸ್ವಲ್ಪ ಎಚ್ಚರವಾಗಣ್ಣಾ, ಒಂದ್ ಗಂಟೆಯಾಯ್ತಲ್ಲ ಒಳಗೋಗಿ’ ಎಂದು ಬಾಗಿಲು ತಟ್ಟುತ್ತಾ ಇದ್ದ. ನನಗನ್ನಿಸಿತು—ಈ ವಾಸನೆಗೆ ಒಳಗೇ ಪರಂಧಾಮಗೈದಿರಬಹುದೆಂದು. ಹೊರಗೆ ನಿಂತು ಒಳಗೆ ಹೋಗಲು ಕಾಯುತ್ತಿದ್ದವನೊಬ್ಬ, “ಅವರಿಗಲ್ಲಿ ನೆಮ್ಮದಿ, ನಮಗಿಲ್ಲಿ ಪ್ರಾಣಸಂಕಟ” ಎಂದು ಸ್ಫೋಟಕ್ಕೆ ಸಿದ್ಧವಾಗುತ್ತಿರುವುದನ್ನು ತಡೆಯಲು ನುಲಿಯುತ್ತಾ, ಕಣ್ಣುಗಳನ್ನು ಮೇಲಕ್ಕೆ ಸಿಕ್ಕಿಸಿಕೊಂಡು ಯಮಯಾತನೆ ಪಡುತ್ತಿದ್ದಾನೆ.
ಹಲವು ಶೌಚಾಲಯಗಳನ್ನು ಉದ್ಘಾಟಿಸಿದ ನಂತರ ಬಳಸಿದರೆ ಸ್ವಚ್ಛ ಮಾಡಲೇಬೇಕಾಗುತ್ತದೆ ಎಂದು ಬೀಗ ಹಾಕಿಡುವ ಅತಿಬುದ್ಧಿವಂತಿಕೆಯ ಕೆಲಸವನ್ನು ಮಾಡುತ್ತಾರೆ. ಭಾರೀ ಉತ್ಸಾಹದಲ್ಲಿ ಶೌಚಾಲಯ ನಿರ್ಮಾಣ ಮಾಡುತ್ತಾರೆ. ನಿರ್ಮಾಣದ ಗುತ್ತಿಗೆ ಪಡೆಯಲು ಭಾರೀ ಪೈಪೋಟಿಯ ನಂತರ ವಿದ್ಯುತ್, ನೀರು, ಯುಜಿಡಿ ಸಂಪರ್ಕ ಕಲ್ಪಿಸದೇ ಅಭೂತಪೂರ್ವ ಲೋಕಾರ್ಪಣೆ ಕಾರ್ಯಕ್ರಮವೂ ನಡೆಯುತ್ತದೆ. ಇಂಜಿನಿಯರ್, ಅಧಿಕಾರಿ, ಪ್ರಜಾಪ್ರತಿನಿಧಿಗೆ ಸಲ್ಲಬೇಕಾದ್ದು ಸಲ್ಲಿಸಿದ ನಂತರ ಗುತ್ತಿಗೆದಾರನಿಗೆ ಬಿಲ್ ಹಣ ಪಾವತಿಯೂ ಆಗುತ್ತದೆ.
ಅಲ್ಲಿಗೆ ಮುಗಿಯಿತು. ಮುಖ್ಯದ್ವಾರಕ್ಕೆ ಬೀಗ ಹಾಕಲಾಗುತ್ತೆ. ಜನ ಆ ಕಟ್ಟಡದ ಪಕ್ಕದ ಅಥವಾ ಹಿಂಭಾಗದ ಗೋಡೆಗೆ ಪನ್ನೀರಿಡಲಾರಂಭಿಸುತ್ತಾರೆ. ಕಟ್ಟಡದ ಸುತ್ತಲೂ ಮುಳ್ಳುಕಂಟಿಗಳ ಪೊದೆ, ಸುತ್ತಲೂ ಜನ ಯಾರೂ ಸುಳಿದಾಡದಂಥ ಸನ್ನಿವೇಶ ನಿರ್ಮಾಣವಾಗುತ್ತದೆ. ಕಟ್ಟಡದ ಮೇಲೆ ‘ಸಾರ್ವಜನಿಕ ಶೌಚಾಲಯ’ ಬೋರ್ಡ್, ಮುಂದಿನ ಗೋಡೆಯಲ್ಲಿ ನಿರ್ಮಾಣ ಪ್ರಾರಂಭೋತ್ಸವದ ಅಮೃತಶಿಲೆ!!!! ಯಾಕೋ ಇದ್ದಕ್ಕಿದ್ದಂತೆ ಒಂದು ವಿಶಿಷ್ಟ ಘಟನೆ ನೆನಪಿಗೆ ಬಂತು. ಎಂಬತ್ತರ ದಶಕದಲ್ಲಿ ರೈತ ಚಳುವಳಿ ಉತ್ತುಂಗದಲ್ಲಿದ್ದ ದಿನಗಳವು. ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಲು ನಾಡಿನ ಮೂಲೆಮೂಲೆಗಳಿಂದ ಸಾವಿರಾರು ಮಂದಿ ರಾಜಧಾನಿಯಲ್ಲಿ ಜಮಾಯಿಸಿದ್ದರು.
ರೈತರ ಹಸಿವನ್ನು ತಣಿಸಲೇನೋ ಒಂದಷ್ಟು ಅನ್ನ, ಮುದ್ದೆ ಬೇಯಿಸಲು ವ್ಯವಸ್ಥೆಯಾಗಿತ್ತು. ಆದರೆ, ಹಸಿವನ್ನು ನೀಗಿಸಿಕೊಂಡ ನಂತರ ವಿಸರ್ಜನೆಗೆ ಸೂಕ್ತ ಅನುಕೂಲಗಳಿರಲಿಲ್ಲ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜೇನುಗೂಡಿನಂತೆ ಸೇರಿದ್ದ ಆ ರೈತಸ್ತೋಮದ ಶೌಚಕ್ಕೆ ವ್ಯವಸ್ಥೆ ಮಾಡುವುದು ಸಾಧ್ಯವೂ ಇರಲಿಲ್ಲ ಬಿಡಿ.
ಮೊದಲೇ ಆಡಳಿತ, ಸರ್ಕಾರ, ರಾಜಕಾರಣಿಗಳು ಮತ್ತು ಅಧಿಕಾರಶಾಹಿಯ ಮೇಲಿನ ಕೊನೆಮೊದಲಿಲ್ಲದ ಅಸಹನೆಯಿಂದ ಕುದಿಯುತ್ತಿದ್ದ ಅನ್ನದಾತರು ಒಕ್ಕೊರಲಿನಿಂದ ಘೋಷಿಸಿದ್ದೇ ‘ಕಕ್ಕಸ್ ಚಳುವಳಿ’. ಭದ್ರತಾ ಸಿಬ್ಬಂದಿಯ ಪ್ರತಿರೋಧವನ್ನೂ ಲೆಕ್ಕಿಸದೇ ವಿಧಾನಸೌಧದ ಆವರಣದ ಮೂಲೆಮೂಲೆಗಳಲ್ಲಿ, ಸುತ್ತಮುತ್ತಲಿನ ಉದ್ಯಾನಗಳಲ್ಲಿ, ಆಡಳಿತ ಪಡಸಾಲೆಯ ಕಂಬಕಂಬಗಳ ಮರೆಯಲ್ಲಿ ಅಸಹನೆಯ ಇಂಧನ ಚೆಲ್ಲಿ, ಸೇಡಿನ ಬೆಂಕಿಯನ್ನು ಹಚ್ಚಿದ ರೈತರು ವಾರದ ನಂತರ ತಮ್ಮೂರಿಗೆ ಹಿಂದಿರುಗಿದರೂ ಆ ಬೆಂಕಿ ಆರಲು ಒಂದು ತಿಂಗಳೇ ಹಿಡಿದಿತ್ತು. ಹಲವಾರು ವರ್ಷಗಳಿಂದ ರಜೆಯನ್ನೇ ಹಾಕದಿದ್ದ ನೌಕರಶಾಹಿ ದೀರ್ಘ ರಜೆಗೆ ಶರಣಾಗಿದ್ದೂ ಇತಿಹಾಸ.
ಎನ್.ವೈ.ಎ.ಸಿ.ಯವರು ರಾತ್ರಿಯ ಟ್ರೇನ್ನಲ್ಲಿ ಬೆಂಗಳೂರಿನಿಂದ ಸಕಲೇಶಪುರಕ್ಕೆ ಬೆಳಗಿನ ಜಾವ ನಾಲ್ಕಕ್ಕೆ ಬರುವರೆಂದು ತಿಳಿದುಕೊಂಡಿದ್ದೆ. ಅಲ್ಲಿ ಅವರನ್ನು ಕೂಡಿಕೊಂಡು ಮರುದಿನದ ಚಾರಣಕ್ಕೆ ಮುಂದುವರಿಯುವುದೆಂದು ಯೋಜಿಸಿದ್ದೆ. ಸಕಲೇಶಪುರದ ಬಸ್ಸ್ಟ್ಯಾಂಡಿನ ಹಿಂಭಾಗದ ವಸತಿಗೃಹವೊಂದರಲ್ಲಿ ವಾಸ್ತವ್ಯ ಹೂಡಿದ್ದ ನಾನು, ರಾತ್ರಿ ಊಟಕ್ಕೆ ಹೋದಾಗ ಹೋಟೆಲಿನ ಹುಡುಗರನ್ನು ರೈಲ್ವೆ ಟ್ರ್ಯಾಕ್ ಬಗ್ಗೆ ವಿಚಾರಿಸಿದೆ. ಅವನು ನನ್ನನ್ನೊಮ್ಮೆ ಮೇಲಿಂದ ಕೆಳಗೆ ನೋಡಿ, “ಈಗ ಯಾಕೆ ಹೋಗ್ತಿರಿ ಸಾರ್? ಅಲ್ಲಿ ಟ್ರ್ಯಾಕ್ ಇತ್ತು ಅನ್ನೋದೇ ಮರೆತುಹೋದಂತಾಗಿದೆ. ವಿಪರೀತ ಕಾಡು ಬೆಳೆದಿದೆ. ನಿಮಗೆ ಹೋಗಲೇಬೇಕೆಂದಿದ್ದರೆ ನಾನೊಂದು ಐಡಿಯಾ ಕೊಡ್ತೀನಿ, ಹಾಗೇ ಮಾಡಿ. ಇಲ್ಲಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿ ಮಾರನಹಳ್ಳಿ ಎಂಬ ಸ್ಟಾಪ್ ಇದೆ. ನಾನೂ ಅದೇ ಊರಿನವ. ಅಲ್ಲಿಳಿದು ನಡೆದರೆ ಒಂದು ಕಿಲೋಮೀಟರ್ಗೆ ರೈಲ್ವೆ ಕಂಬಿ ಸಿಗುತ್ತೆ” ಎಂದ.
ಸರಿ, ಊಟ ಮುಗಿಸಿಕೊಂಡು ಲಾಜ್ಗೆ ಹೋದ ನಾನು, ರೂಂ ಬಾಯ್ಗಳನ್ನು ವಿಚಾರಿಸಿಕೊಂಡು ಅವರ ಸಲಹೆಯಂತೆ ನನ್ನ ಪ್ರಯಾಣದ ಪ್ಲಾನನ್ನು ಬದಲಾಯಿಸಿಕೊಂಡೆ. ಬೆಳಿಗ್ಗೆ ಬೇಗನೆದ್ದು ಯಾವುದಾದರೂ ವೆಹಿಕಲ್ನಲ್ಲಿ ಮಾರನಹಳ್ಳಿಯವರೆಗೆ ಡ್ರಾಪ್ ತೆಗೆದುಕೊಂಡು, ಎನ್.ವೈ.ಎ.ಸಿ.ಯವರನ್ನು ಕಾಡಿನ ನಡುವೆ ಎದುರಾಗಿ ಸರ್ಪ್ರೈಸ್ ಮಾಡುವುದೆಂದು ಅಂದುಕೊಳ್ಳುತ್ತಾ ವಾಪಸ್ ಬರುವಾಗ ಸ್ವಲ್ಪ ಹಣ್ಣು, ಬ್ರೆಡ್, ಚಿಪ್ಸ್ ಮುಂತಾದುವನ್ನು ತೆಗೆದುಕೊಂಡು, ಬೇಗ ಮಲಗಿ ಬೆಳಿಗ್ಗೆ ಆದಷ್ಟು ಬೇಗ ಏಳಬೇಕೆಂದುಕೊಂಡು ವಸತಿಗೃಹಕ್ಕೆ ಬಂದವನೇ ಇನ್ನೊಮ್ಮೆ ಅಲ್ಲಿಯ ಮ್ಯಾನೇಜರ್ನನ್ನು ಕಂಡು ರೈಲ್ವೆ ದಾರಿಯ ಬಗ್ಗೆ ತಿಳಿದುಕೊಂಡೆ.
ಏನಾದರಾಗಲೀ, ಇದೂ ಒಂದು ಪ್ರಯೋಗ ನಡೆಯಲೆಂದು ನಿರ್ಧರಿಸಿದೆ. ನಾನಲ್ಲಿಯವರೆಗೂ ಎನ್.ವೈ.ಎ.ಸಿ.ಯವರನ್ನು ಭೇಟಿಯಾದದ್ದಿರಲಿ, ನೋಡಿಯೂ ಇರಲಿಲ್ಲ. ಇದಕ್ಕಿಂತ ಮುಖ್ಯವಾಗಿ ಸಕಲೇಶಪುರದಿಂದ ಮಂಗಳೂರಿನ ರಸ್ತೆಯಲ್ಲಿ ಬಸ್ನಲ್ಲಿ ಹಗಲಿನಲ್ಲಿ ಬಿಟ್ಟರೆ ಎಂದೂ ಒಂಟಿಯಾಗಿ ಪ್ರಯಾಣಿಸಿಯೂ ಇರಲಿಲ್ಲ. ಹೇಗೋ ಆಗುತ್ತೆ ಎಂದುಕೊಂಡು ಬೆಳ್ಳಂಬೆಳಿಗ್ಗೆಯೇ ಸ್ಪೆಷಲ್ ಅಪೀಯರೆನ್ಸ್ ಕೊಡೋಣವೆಂದು ನಿದ್ರೆಗಾಗಿ ಹಾಸಿಗೆಯಲ್ಲಿ ಉರುಳಿದೆ. ಬೆಳಿಗ್ಗೆ ಮೂರೂವರೆಗೆ ಎದ್ದು, ನಾಲ್ಕೂವರೆಗೆ ಮಾರನಹಳ್ಳಿ ತಲುಪಿ, ಐದೂವರೆಗೆ ಬರುವ ಎನ್.ವೈ.ಎ.ಸಿ.ಯವರನ್ನು ರೈಲ್ವೆ ಹಳಿಗಳ ಮೇಲೆ ಭೇಟಿಮಾಡುವುದೆಂದು ನಿರ್ಧರಿಸಿದೆ.
ಬೆಳಿಗ್ಗೆ ಯಾವುದಾದರೂ ಮುಖ್ಯವಾದ ಕೆಲಸ ಅಥವಾ ವಿಶೇಷ ಸ್ಥಳಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿದ್ದರೆ, ರಾತ್ರಿ ಎಷ್ಟರ ಮಟ್ಟಿಗೆ ನಿದ್ರೆ ಬರುವುದೆಂದು ನಿಮಗೇ ಗೊತ್ತು. ಎಷ್ಟೊತ್ತಿಗೆ ಬೆಳಗಾಗುತ್ತೆ, ಹೋಟೆಲಿನವನು, ಲಾಜ್ನವನು ನೀಡಿದ ಮಾಹಿತಿ ಎಷ್ಟರಮಟ್ಟಿಗೆ ಸರಿ ಎಂದುಕೊಳ್ಳುತ್ತಾ ಎದೆಯೊಳಗೆ ರೈಲು ಓಡಿಸಿಕೊಳ್ಳುತ್ತಿದ್ದೆ. ಈ ಕುತೂಹಲ, ಉತ್ಸಾಹ, ಆತಂಕಗಳು ಮನುಷ್ಯನನ್ನು ಕುಂತಲ್ಲಿ ಕೂರಿಸದೇ ಸದಾ ಎಚ್ಚರ, ಜಾಗೃತಿಯಲ್ಲಿಡುತ್ತವೆ. ನಾಳೆ ಬೆಳಿಗ್ಗೆ ಸ್ವಲ್ಪ ದೂರ ಒಬ್ಬಂಟಿಯಾಗಿ ಅಪರಿಚಿತ ಜಾಗದಲ್ಲಿ ನಡೆಯಬೇಕಾಗುತ್ತದೆಯೆಂಬ ಕಲ್ಪನೆಯೇ ನನ್ನನ್ನು ಪುಳಕಗೊಳಿಸಿತ್ತು.
ರಾತ್ರಿಯಿಡೀ ಬೆಳಗಿನ ನಿರೀಕ್ಷೆಯಲ್ಲೇ ನಿದ್ದೆ ಬರಲಿಲ್ಲ. ಎಷ್ಟೊತ್ತಿಗೆ ಏಳ್ತೀನಿ, ತಡವಾದರೆ ನಮ್ಮ ತಂಡದವರು ನನಗಿಂತ ಮುಂಚೆಯೇ ಪಾಸ್ ಆಗಿ ಹೋದರೆ, ನಾನು ತ್ರಿಶಂಕು ಸ್ಥಿತಿಗೆ ಸಿಕ್ಕಿಹಾಕಿಕೊಳ್ಳುತ್ತೇನೆ. ಹೇಗಾದರೂ ಅವರಿಂದ ತಪ್ಪಿಸಿಕೊಳ್ಳದಂತೆ, ಮುಂಚೆಯೇ ಕೀ ಪಾಯಿಂಟ್ ತಲುಪಬೇಕೆಂದು ಹೊರಳಿ ಹೊರಳಿ ಕಡೆಗೂ ಎದ್ದೆ. ಇದು ನಿದ್ದೆ ಬರುವ ಲಕ್ಷಣವಲ್ಲ ಎಂದೆನಿಸಿ ಎದ್ದವನು ಸ್ನಾನ ಮುಗಿಸಿದೆ. ಆತಂಕದಿಂದ ಹಸಿವಾಗಿ ಸ್ವಲ್ಪ ಹಣ್ಣು, ಬ್ರೆಡ್ ತಿಂದು ನೀರು ಕುಡಿದೆ.

