ಶ್ಲೋಕ – 10
ಉತ್ ಕ್ರಾಮಂತಂ ಸ್ಥಿತಂ ವಾSಪಿ ಭುಂಜಾನಂ ವಾ ಗುಣಾನ್ವಿತಮ್ ।
ವಿಮೂಢಾ ನಾನುಪಶ್ಯಂತಿ ಪಶ್ಯಂತಿ ಜ್ಞಾನಚಕ್ಷುಷಃ ॥೧೦॥
ಉತ್ ಕ್ರಾಮಂತಮ್ ಸ್ಥಿತಮ್ ವಾ ಅಪಿ ಭುಂಜಾನಮ್ ವಾ ಗುಣ ಅನ್ವಿತಮ್ ।
ವಿಮೂಢಾಃ ನ ಅನುಪಶ್ಯಂತಿ ಪಶ್ಯಂತಿ ಜ್ಞಾನ ಚಕ್ಷುಷಃ –ದೇಹ ತೊರೆದು ತೆರಳುವ, ದೇಹದಲ್ಲಿರುವ, ಅಥವಾ ಒಳಿತಿನ ಸಾರವನ್ನು ಸವಿಯುವ ಇವನನ್ನು ತಿಳಿಗೇಡಿಗಳು ತಿಳಿಯಲಾರರು. ತಿಳಿಗಣ್ಣು ತೆರೆದವರು ತಿಳಿಯಬಲ್ಲರು.
ಈ ಶ್ಲೋಕದಲ್ಲಿ ಬಳಸಿರುವ ‘ಗುಣಾನ್ವಿತಮ್’ ಎನ್ನುವ ಪದ ಸ್ಪಷ್ಟವಾಗಿ ನಮಗೆ ತಿಳಿಸುತ್ತದೆ-ಇದು ಭಗವಂತನನ್ನು ಹೇಳುವ ಶ್ಲೋಕ ಎಂದು. ಜೀವನನ್ನು ದೇಹಕ್ಕೆ ತರುವ, ಎಚ್ಚರ ಕನಸು ನಿದ್ದೆ ಎನ್ನುವ ಮೂರು ಅವಸ್ಥೆಗಳಲ್ಲಿ ಜೀವನಿಗೆ ವಿಷಯ ಭೋಗವನ್ನು ಕೊಡುವ ಭಗವಂತ-ತಾನು ಸದಾ ಶುಭ ಭೋಗವನ್ನುಣ್ಣುವವ. ದೇಹದಿಂದ ಹೊರ ಹೋಗುವಾಗ, ದೇಹದಲ್ಲಿರುವಾಗ-ಎಲ್ಲವನ್ನು ಮಾಡಿಸುವವ ಆ ಭಗವಂತ. ಆತ ನಮ್ಮೊಳಗೇ ಇದ್ದರು ಕೂಡ ವಿಮೂಢರಿಗೆ ಇದು ತಿಳಿಯುವುದಿಲ್ಲ. ಜ್ಞಾನದ ಕಣ್ಣುತೆರೆದವರು ಮಾತ್ರ ಇದನ್ನು ತಿಳಿಯಬಲ್ಲರು. ಇಲ್ಲಿ ಕೃಷ್ಣ ‘ವಿಮೂಢ’ ಮತ್ತು ‘ಜ್ಞಾನಚಕ್ಷುಷಃ’ ಎನ್ನುವ ಎರಡು ವಿಶೇಷ ಪದಗಳನ್ನು ಬಳಸಿದ್ದಾನೆ. ‘ಮೂಢರು’ ಎಂದರೆ ಸತ್ಯವನ್ನು ತಪ್ಪಾಗಿ ತಿಳಿದವರು. ಇವರು ಯಥಾರ್ಥಜ್ಞಾನ ಮರೆಯಾಗಿ ವಿಪರೀತಜ್ಞಾನದಲ್ಲೇ ಬದುಕುತ್ತಿರುತ್ತಾರೆ. ‘ವಿ-ಮೂಢ’ ಎಂದರೆ ಎಂದೂ ತಮ್ಮ ತಪ್ಪನ್ನು ತಿಳಿಯದೆ, ತಪ್ಪನ್ನೇ ಸರಿಯೆಂದು ಸದಾ ವಿಪರೀತ ಜ್ಞಾನದಲ್ಲೇ ಬದುಕುವವರು. ಇವರಿಗೆ ಭಗವಂತನನ್ನು ಎಂದೆಂದಿಗೂ ತಿಳಿಯಲು ಸಾಧ್ಯವಿಲ್ಲ. ಭಗವಂತನನ್ನು ಕಾಣುವ ಕ್ಷಮತೆ ಉಳ್ಳವರು ಜ್ಞಾನಚಕ್ಷುಷರು. ಅಂದರೆ ಶಾಸ್ತ್ರವನ್ನು ಓದಿ ಅದರಿಂದ ಅರಿವಿನ ಒಳಗಣ್ಣು ತೆರೆದವರು. ಇವರು ಭಗವಂತನನ್ನು ತಿಳಿಯಬಲ್ಲರು ಮತ್ತು ತಮ್ಮ ಸ್ವರೂಪಭೂತವಾದ ಕಣ್ಣಿನಿಂದ ಭಗವಂತನನ್ನು ಕಾಣಬಲ್ಲರು.
