ಆಲೂರು : ಸಹಸ್ರಾರು ದೇಶಭಕ್ತರ ನಿರಂತರ ಹೋರಾಟ ಹಾಗೂ ಬಲಿದಾನದ ಪ್ರತಿಫಲವೇ ಸ್ವಾತಂತ್ರ್ಯ. ಸುಮಾರು ಮೂರುವರೆ ಶತಮಾನಗಳ ಆಂಗ್ಲರ ದಾಸ್ಯದಿಂದ ಬಿಡುಗಡೆ ಹೊಂದಲು ಸಹಸ್ರಾರು ತ್ಯಾಗ, ಬಲಿದಾನಗಳಾಗಿವೆ ಎಂದು ಕವಯಿತ್ರಿ ಸಿ. ಎನ್. ನೀಲಾವತಿ ಅಭಿಪ್ರಾಯಪಟ್ಟರು .

ಅವರು ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 8ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಾಯಿ ಪಟೇಲ್, ಬಾಲಗಂಗಾಧರ ತಿಲಕ್, ಲಾಲಾ ಲಜಪತರಾಯ, ಬಿಪಿನ್ ಚಂದ್ರ ಪಾಲ್, ಮಹಾತ್ಮ ಗಾಂಧೀಜಿ, ಭಗತ್ ಸಿಂಗ್, ಮಂಗಲ್ ಪಾಂಡೆ, ಸುಖದೇವ್ ಮುಂತಾದ ರಾಷ್ಟ್ರ ನಾಯಕರ ನಿರಂತರ ಹೋರಾಟ ಚಳುವಳಿ ತ್ಯಾಗ ಹಾಗೂ ಬಲಿದಾನಗಳ ಪ್ರತಿಫಲವಾಗಿ ಭಾರತ ದೇಶಕ್ಕೆ ಭಾರತ ದೇಶಕ್ಕೆ 1947 ಆಗಸ್ಟ್ 15ರಂದು ಸ್ವಾತಂತ್ರ ಸ್ವಾತಂತ್ರ ಲಭಿಸಿತು.
ಸ್ವಾತಂತ್ರ್ಯ ಬದುಕನ್ನು ಜಾತ್ಯಾತೀತವಾಗಿ, ಧರ್ಮಾತೀತವಾಗಿ, ಲಿಂಗತೀತವಾಗಿ, ಸುಸ್ಥಿರವಾಗಿ, ಸುಗಮವಾಗಿ ಸಾಗಿಸಿಕೊಂಡು ಹೋಗಲು ಕಾನೂನು ಕಟ್ಟಳೆಗಳ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದ ಆಡಳಿತ ವ್ಯವಸ್ಥೆಯನ್ನು ಸುಭಿಕ್ಷವಾಗಿ ನಡೆಸಲು ಅನುಕೂಲವಾಗುವಂತೆ ಡಾ. ಬಿಆರ್ ಅಂಬೇಡ್ಕರ್ ರವರು ಕೊಟ್ಟಂತಹ ಸಂವಿಧಾನ ಮಹತ್ತರ ಕೊಡುಗೆಯಾಗಿದೆ.

ಭಾರತೀಯ ಸಂವಿಧಾನ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತನ್ನದೇ ಆದಂತ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಕೊಟ್ಟಿದೆ. ನಾನು, ನನ್ನದು ಎನ್ನುವ ಏಕಮುಖ ಭಾವವನ್ನು ಬಿಟ್ಟು ನಾವು, ನಮ್ಮದು ಎಂಬ ಹೃದಯ ವೈಶಾಲ್ಯತೆಯನ್ನು, ರಾಷ್ಟ್ರಾಭಿಮಾನವನ್ನು, ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕಿದೆ. ದೇಶ ನನಗೇನು ಕೊಟ್ಟಿದೆ ಎನ್ನುವ ಬದಲು ದೇಶಕ್ಕಾಗಿ ನಾನೇನು ಕೊಟ್ಟಿದ್ದೇನೆ ಎನ್ನುವ ಮನೋ ಧೋರಣೆಯನ್ನು ನಾವಿಂದು ರೂಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ರೂಪಿಸಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಲೂರು ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು ಮಾತನಾಡಿ ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ದೇಶಪ್ರೇಮ ರಾಷ್ಟ್ರಾಭಿಮಾನವನ್ನು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ಕಳಲ್ಲಿ ಸಾಮಾಜಿಕ ಮೌಲ್ಯಗಳು, ನೈತಿಕ ಮೌಲ್ಯಗಳು, ಕೌಟುಂಬಿಕ ಮೌಲ್ಯಗಳು ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಿ ಅವರ ಸರ್ವಾಂಗಣ ವಿಕಸನಕ್ಕೆ ಸಾಕ್ಷಿಯಾಗಬೇಕಿದೆ. ನಮ್ಮ ರಾಷ್ಟ್ರ ನಾಯಕರ ಜೀವನ ಗಾಥೆ, ಹೋರಾಟದ ಬದುಕನ್ನು ಮಕ್ಕಳಿಗೆ ತಿಳಿಸಿ ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕಿದೆ ಎಂದರು.

ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಟಿ.ಬಿ. ರಾಜಶೇಖರ್ ಮಾತನಾಡಿ ಇಂದಿನ ಯುವ ಪೀಳಿಗೆಗೆ ದೇಶ ಅಭಿಮಾನ ಹಾಗೂ ರಾಷ್ಟ್ರ ಭಕ್ತಿಯ ಬಗ್ಗೆ ತಿಳಿಸುವುದು ಅನಿವಾರ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿ ದೇಶಕ್ಕಾಗಿ ಹೋರಾಡಿ ಗಲ್ಲಿಗೆ ಏರಿಸಲ್ಪಟ್ಟ ಮಹಾನ್ ದೇಶಭಕ್ತ, ಸೇನಾನಿ ಯುವಕರ ಚೇತನ ಭಗತ್ ಸಿಂಗ್ ಅವರ ಆದರ್ಶಗಳು ಹಾಗೂ ತನ್ನದೇ ಆದ ಮಿಲಿಟರಿ ಕಟ್ಟಿಕೊಂಡು ನಿರಂತರವಾಗಿ ಹೋರಾಡಿದ ಸುಭಾಷ್ ಚಂದ್ರ ಬೋಸ್ ಅವರ ಆದರ್ಶಗಳು ಇಂದಿನ ಮಕ್ಕಳಿಗೆ, ಯುವಕರಿಗೆ, ಪ್ರಜೆಗಳಿಗೆ ಅನಿವಾರ್ಯವಾಗಿವೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್, ಸಹ ಶಿಕ್ಷಕರಾದ ವಿ.ರವಿತ, ಎ.ಎಸ್. ರೇಖಾ, ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಟಿ.ಇ. ಧರ್ಮ, ಚಿದಾನಂದ, ಬೆಂಗಳೂರಿನ ಭಗತ್ ಸಿಂಗ್ ಸಂಘದ ಅಧ್ಯಕ್ಷ ಸಂಪತ್, ಗ್ರಾಮಸ್ಥರಾದ ರಾಜಯ್ಯ, ಪೋಷಕರಾದ ಆಶಾ ವೆಂಕಟೇಶ್, ನೀಲಮ್ಮ, ಆಶಾ ಅಶೋಕ್, ಅಕ್ಷರ ದಾಸೋಹ ಸಿಬ್ಬಂದಿ ಚಂದ್ರಮ್ಮ ಸೇರಿದಂತೆ ಮಕ್ಕಳು, ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.
