ಶ್ಲೋಕ – 16
ಮುಂದಿನ ಮೂರು ಶ್ಲೋಕಗಳು ಭಾರತೀಯ ತತ್ವಶಾಸ್ತ್ರದ ಚಿಂತನಾಕ್ರಮದ ಸಾರ. ಇವು ವಿಶ್ವ ಮತ್ತು ವಿಶ್ವಾತ್ಮನ ಅನುಸಂಧಾನವನ್ನು ವಿವರಿಸುವ ಶ್ಲೋಕಗಳು.
ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ ।
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋSಕ್ಷರ ಉಚ್ಯತೇ ॥೧೬॥
ದ್ವಾವಿಮೌ ಪುರುಷೌ ಲೋಕೇ ಕ್ಷರಃ ಚ ಅಕ್ಷರಃ ಏವ ಚ ।
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥಃ ಅಕ್ಷರಃ ಉಚ್ಯತೇ—ಲೋಕದಲ್ಲಿ ಈ ಎರಡು ಬಗೆಯ ಪುರುಷರು: ಕ್ಷರಪುರುಷ ಮತ್ತು ಅಕ್ಷರಪುರುಷ. ಬ್ರಹ್ಮಾದಿ ಸಮಸ್ತ ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್ ಪ್ರಕೃತಿಯೆ ಅಕ್ಷರ ಪುರುಷಳೆನ್ನಿಸಿದ್ದಾಳೆ.
ಈ ಚೇತನಾ ಪ್ರಪಂಚದಲ್ಲಿ ಎರಡು ಬಗೆಯ ಪುರುಷರಿದ್ದಾರೆ. ಒಂದು ಕ್ಷರಪುರುಷ ಮತ್ತು ಇನ್ನೊಂದು ಅಕ್ಷರಪುರುಷ. [ಇಲ್ಲಿ ಪುರುಷ ಎಂದರೆ ಗಂಡಸು ಎನ್ನುವ ಅರ್ಥವಲ್ಲ. ಈ ಬಗ್ಗೆ ವಿಶೇಷವಾಗಿ ಹಿಂದೆ ಅನೇಕ ಬಾರಿ ಚರ್ಚಿಸಿದ್ದೇವೆ]. ಒಂದು ದಿನ ಬಿದ್ದುಹೋಗುವ ಶರೀರ ಉಳ್ಳವರು ಕ್ಷರಪುರುಷರು. ಬ್ರಹ್ಮಾದಿ ಸಮಸ್ತ ಜೀವರೂ ಕೂಡ ಕ್ಷರಪುರುಷರು. ಬ್ರಹ್ಮಾದಿ ಸಮಸ್ತ ದೇವತೆಗಳೂ ಕೂಡ ಮೋಕ್ಷವನ್ನು ಸೇರುವಾಗ ತಮ್ಮ ಶರೀರ ಸಮೇತರಾಗಿ ಹೋಗುವಂತಿಲ್ಲ. ಚತುರ್ಮುಖ ಬ್ರಹ್ಮನ ಆಯಸ್ಸು ಒಂದು ಬ್ರಹ್ಮಕಲ್ಪ(೩೧,೧೦೪ ಸಾವಿರ ಕೋಟಿ ಮಾನವ ವರ್ಷ=ಚತುರ್ಮುಖನ ನೂರು ವರ್ಷ). ಆ ನಂತರ ಆತನ ಶರೀರ ಕೂಡ ಬಸ್ಮವಾಗುತ್ತದೆ. ಇದನ್ನು ಈಶೋಪನಿಷತ್ತಿನಲ್ಲಿ ಹೀಗೆ ವಿವರಿಸಿದ್ದಾರೆ: “ವಾಯುರನಿಲಮ್ ಅಮೃತಮ್ ಅಥೇದಂ ಭಸ್ಮಾಂತಂ ಶರೀರಂ || ೧೭||”. “ಭಗವಂತನಿಗೆ ಅಧಿಷ್ಠಾನವಾಗಿ ನಿಂತಿರುವ ಪ್ರಾಣ ದೇವರು ಅಮೃತರು. ಆದರೂ ಕೂಡ, ಒಂದು ದಿನ ಅವರ ದೇಹ ಬಸ್ಮವಾಗಲೇ ಬೇಕು” ಎಂದು. ಹೀಗೆ ಸಮಸ್ತ ದೇವತೆಗಳು, ಜೀವಜಾತಗಳು-ಕ್ಷರಪುರುಷರು.
ನಾಶವಿಲ್ಲದ ಜ್ಞಾನಾನಂದಮಯ ಸ್ವರೂಪಭೂತವಾದ ದೇಹವುಳ್ಳ ಶ್ರೀಲಕ್ಷ್ಮಿ ಅಕ್ಷರಪುರುಷಳು. ಸಮಸ್ತ ಕ್ಷರಪುರುಷರೂ ಮೋಕ್ಷದಲ್ಲಿ ಅಕ್ಷರರಾಗುತ್ತಾರೆ. ಆದರೆ ಲಕ್ಷ್ಮಿ ಸದಾ ಅಕ್ಷರಳು. ಇಲ್ಲಿ ಲಕ್ಷ್ಮಿಯನ್ನು ಕೂಟಸ್ಥಳು ಎಂದು ವರ್ಣಿಸಿದ್ದಾರೆ. ಕೂಟ ಎಂದರೆ ‘ಕೂಡುವುದು’. ಜೀವ ಮತ್ತು ಶರೀರದ ಕೂಡುವಿಕೆಗೆ ಕಾರಣಳಾದವಳು ತಾಯಿ-ಶ್ರೀಲಕ್ಷ್ಮಿ. ಸದಾ ನಿರ್ಲಿಪ್ತಳಾಗಿ, ಯಾವುದೇ ಲೇಪವಿಲ್ಲದೆ, ಪ್ರಪಂಚವನ್ನು ವ್ಯವಸ್ಥೆಗೊಳಿಸಿದ ಶಕ್ತಿ –ಜಗನ್ಮಾತೆ ಶ್ರೀಲಕ್ಷ್ಮಿ. ಇವಳು ಅಕ್ಷರಪುರುಷಳು.
