ಕೊರಟಗೆರೆ:- ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸುವ ಮೂಲಕ ರೈತರು ಹಾಗೂ ಭೂಮಿಯಲ್ಲಿ ದುಡಿಯುತ್ತಿದ್ದ ಕೃಷಿ ಕಾರ್ಮಿಕರಿಗೆ ಭೂಮಿಯ ಹಕ್ಕು ಕಲ್ಪಿಸಿ, ಉಳುವವನೇ ಭೂಮಿ ಒಡೆಯ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ದೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಎಂದು ಕೊರಟಗೆರೆ ತಹಸೀಲ್ದಾರ್ ಕೆ. ಮಂಜುನಾಥ್ ಹೇಳಿದರು.
ಕೊರಟಗೆರೆ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಪರಿವರ್ತನೆಯ ಹರಿಕಾರ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ದೇವರಾಜ ಅರಸು ಅವರು ತಮ್ಮ ಹೊಲದಲ್ಲಿ ದುಡಿಯುತ್ತಿದ್ದವರಿಗೆ ಭೂಮಿಯ ಹಕ್ಕು ನೀಡುವುದರೊಂದಿಗೆ ನಿಲ್ಲದೆ, ರಾಜ್ಯದಾದ್ಯಂತ ಭೂ ಸುಧಾರಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಶೋಷಿತರು ಮತ್ತು ದುಡಿಯುವ ವರ್ಗದವರ ಬದುಕಿನಲ್ಲಿ ಮಹತ್ವದ ಬದಲಾವಣೆಗೆ ಕಾರಣರಾದರು. ಭೂಮಿಯ ಮೇಲೆ ದುಡಿಯುವವರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕು ಇರಬೇಕು ಎಂಬ ಆಶಯವನ್ನು ಕಾರ್ಯರೂಪಕ್ಕೆ ತಂದರು ಎಂದು ಹೇಳಿದರು.
ಸಾಮಾಜಿಕ ಪರಿವರ್ತನೆಯ ಹರಿಕಾರ
ದೇವರಾಜ ಅರಸು ಅವರು ಕೇವಲ ಮುಖ್ಯಮಂತ್ರಿಯಾಗಿರದೆ, ಸಾಮಾಜಿಕ ಪರಿವರ್ತನೆಯ ದೂರದೃಷ್ಟಿಯ ನಾಯಕನಾಗಿದ್ದರು. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಸಮಾಜದಲ್ಲಿ ಬೇರೂರಿದ್ದ ಹಲವು ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ದಿಟ್ಟ ನಿರ್ಧಾರಗಳನ್ನು ಕೈಗೊಂಡರು ಎಂದು ಮಂಜುನಾಥ್ ತಿಳಿಸಿದರು.
ಸಾಮಾಜಿಕ ಸಮಾನತೆ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ದುರ್ಬಲ ವರ್ಗಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅರಸು ಅವರು ಕೈಗೊಂಡ ಕ್ರಮಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಚಿಂತನೆಗಳು ಹಾಗೂ ಜನಪರ ಆಡಳಿತದ ಮಾದರಿಯನ್ನು ಇಂದಿನ ಯುವಜನತೆ ಅರಿತುಕೊಳ್ಳಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಉಮೇಶ್ ಮಾತನಾಡಿ, ನಾಡಿನ ಅಭಿವೃದ್ಧಿ ಹಾಗೂ ಸಾಮಾಜಿಕ ಸುಧಾರಣೆಯಲ್ಲಿ ದೇವರಾಜ ಅರಸು ಅವರ ಕೊಡುಗೆ ಅಪಾರವಾಗಿದೆ. ಅಂದಿನ ಮೈಸೂರು ರಾಜ್ಯಕ್ಕೆ 1973ರ ನವೆಂಬರ್ 1ರಂದು ‘ಕರ್ನಾಟಕ’ ಎಂದು ಮರುನಾಮಕರಣ ಮಾಡುವ ಐತಿಹಾಸಿಕ ನಿರ್ಧಾರದಲ್ಲಿ ದೇವರಾಜ ಅರಸು ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮುಖ್ಯ ಅಧಿಕಾರಿ ಅಪೂರ್ವ ಅನಂತ ರಾಮು ಮಾತನಾಡಿ ಕನ್ನಡ ನಾಡಿನ ಏಕೀಕರಣದ ಆಶಯ, ಸಾಮಾಜಿಕ ಕ್ರಾಂತಿ, ಹಿಂದುಳಿದ ವರ್ಗಗಳ ಸಬಲೀಕರಣ ಹಾಗೂ ನಾಡಿನ ಅಸ್ಮಿತೆಯನ್ನು ಬಲಪಡಿಸುವಲ್ಲಿ ಅರಸು ಅವರು ನೀಡಿದ ಕೊಡುಗೆ ಚಿರಸ್ಮರಣೀಯ. ಅವರ ಆಡಳಿತದ ಅವಧಿಯಲ್ಲಿ ಜಾರಿಯಾದ ಹಲವು ಜನಪರ ಕಾರ್ಯಕ್ರಮಗಳು ರಾಜ್ಯದ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದವು ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಯಿತು. ಕೆಲ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಗೌರವಿಸಿದರೆ, ಇತರರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರಲ್ಲಿ ಇನ್ನಷ್ಟು ಸಾಧಿಸುವ ಉತ್ಸಾಹ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪೂರ್ವ, ಸಮಾಜ ಕಲ್ಯಾಣಾಧಿಕಾರಿ ಅನಂತರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಈರಪ್ಪ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಪೈರೋಜ್ಬೇಗಂ, ತಾಲೂಕು ವೈದ್ಯಾಧಿಕಾರಿ ಡಾ. ಜೋಸ್ನಾರೆಡ್ಡಿ, ಉಪನ್ಯಾಸಕ ಹನುಮಂತನಾಯಕ್, ಅಧಿಕಾರಿಗಳಾದ ಸುಧಾಕರ್, ರುದ್ರೇಶ್, ತಾಲೂಕು ಪಂಚಾಯಿತಿ ಮಧುಸೂಧನ್, ದಾಡಿ ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಸರ್ಕಾರಿ ಕಾರ್ಯಕ್ರಮದಲ್ಲಿ ದುಂದು ವೆಚ್ಚ ಬೇಡ: ತಹಸೀಲ್ದಾರ್
ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಹಾಗೂ ಗಣ್ಯರಿಗೆ ಹಾರ, ಶಾಲು ಸೇರಿದಂತೆ ದುಬಾರಿ ಸನ್ಮಾನ ಸಾಮಗ್ರಿಗಳನ್ನು ಖರೀದಿಸಿ ದುಂದು ವೆಚ್ಚ ಮಾಡುವ ಬದಲು, ಅದೇ ಹಣದಲ್ಲಿ ಪುಸ್ತಕಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸಿದರೆ ಅವರ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ ಎಂದು ತಹಸೀಲ್ದಾರ್ ಕೆ. ಮಂಜುನಾಥ್ ಹೇಳಿದರು.
ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳಿಗೆ ಸನ್ಮಾನ ಮಾಡುವ ಪದ್ಧತಿಯನ್ನು ಕೈಬಿಟ್ಟು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಹಣವನ್ನು ಮಿತವ್ಯಯದಿಂದ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಬಳಸುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ. ಹಾರ-ತುರಾಯಿ ಹಾಗೂ ಸನ್ಮಾನಕ್ಕೆ ಮಾಡುವ ವೆಚ್ಚಕ್ಕಿಂತ ಪುಸ್ತಕ, ಶೈಕ್ಷಣಿಕ ಸಾಮಗ್ರಿ ಅಥವಾ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಹಣ ಬಳಸಿದರೆ ಅದರ ಪ್ರಯೋಜನ ಸಮಾಜಕ್ಕೆ ದೀರ್ಘಕಾಲ ದೊರೆಯಲಿದೆ ಎಂದು ಅವರು ತಿಳಿಸಿದರು.
– ಶ್ರೀನಿವಾಸ್ ಕೊರಟಗೆರೆ
