ರಾಮನಾಥಪುರ: ಆಗಸ್ಟ್ ತಿಂಗಳು ಹಾಗೂ ಆಶ್ಲೇಷಾ ಮಳೆ ಎಂದರೆ ಕಾವೇರಿ ನದಿ ತೀರದ ತಗ್ಗು ಪ್ರದೇಶಗಳ ಜನರಲ್ಲಿ ಪ್ರತಿವರ್ಷವೂ ಆತಂಕ ಮನೆಮಾಡುತ್ತಿತ್ತು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ನದಿ ತೀರದ ಜನರು ಕೊಂಚ ನಿರಾಳರಾಗಿದ್ದಾರೆ. ಮತ್ತೊಂದೆಡೆ, ಎತ್ತರದ ಪ್ರದೇಶಗಳಲ್ಲಿ ಕೃಷಿ ಮಾಡಿರುವ ರೈತರು ಮಳೆಯ ಕೊರತೆಯಿಂದ ಆತಂಕಕ್ಕೊಳಗಾಗಿದ್ದಾರೆ.
ಕೊಡಗಿನ ತಲಕಾವೇರಿಯಿಂದ ಹರಿದು ಬರುವ ಕಾವೇರಿ ಹಾಗೂ ಹಾರಂಗಿ ನದಿಗಳು ಭಾಗಮಂಡಲ, ಮಡಿಕೇರಿ, ಕುಶಾಲನಗರ, ರಾಮನಾಥಪುರ, ಶ್ರೀರಂಗಪಟ್ಟಣ, ಮಂಡ್ಯ ಸೇರಿದಂತೆ ಹಲವು ಪ್ರದೇಶಗಳ ಮೂಲಕ ಹರಿಯುತ್ತವೆ. ಆಗಸ್ಟ್ ತಿಂಗಳಲ್ಲಿ ಭಾರಿ ಮಳೆಯಾದರೆ ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತವಾಗುವ ಆತಂಕ ಪ್ರತಿವರ್ಷವೂ ಇರುತ್ತದೆ.
ಕಾವೇರಿ, ಹೇಮಾವತಿ, ಹಾರಂಗಿ ಹಾಗೂ ಕೃಷ್ಣರಾಜಸಾಗರ ಜಲಾಶಯಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾದ ಸಂದರ್ಭಗಳಲ್ಲಿ ನದಿಗಳು ಉಕ್ಕಿ ಹರಿದು ನದಿ ಪಾತ್ರದ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ ಘಟನೆಗಳು ನಡೆದಿವೆ. ಇದರಿಂದ ರೈತರ ಬೆಳೆಗಳು ನಾಶವಾಗುವುದರ ಜೊತೆಗೆ ಮನೆ-ಮಠಗಳಿಗೂ ಹಾನಿಯಾಗಿರುವ ನೆನಪುಗಳು ಇನ್ನೂ ಜನರ ಮನಸ್ಸಿನಲ್ಲಿ ಉಳಿದಿವೆ.

2017ರ ಪ್ರವಾಹದ ಕರಾಳ ನೆನಪು
ರಾಮನಾಥಪುರ ಭಾಗದ ಜನರಿಗೆ 2017ರ ಆಗಸ್ಟ್ ತಿಂಗಳ ಪ್ರವಾಹದ ನೆನಪು ಇಂದಿಗೂ ಮಾಸಿಲ್ಲ. ಆಗಸ್ಟ್ 15ರಿಂದ 18ರವರೆಗೆ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ನದಿ ಪಾತ್ರದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ತಮ್ಮ ಜೀವನದ ಉಳಿತಾಯದ ಹಣದಲ್ಲಿ ನದಿ ತಗ್ಗು ಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಂಡಿದ್ದ ಅನೇಕ ಕುಟುಂಬಗಳು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದವು. ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿತ್ತು. ಪ್ರವಾಹದಿಂದ ತತ್ತರಿಸಿದ ಕುಟುಂಬಗಳಿಗೆ ಅಂದಿನ ಸರ್ಕಾರ ಪರಿಹಾರ ನೀಡಿದ್ದ ಘಟನೆ ಕೂಡ ಜನರ ನೆನಪಿನಲ್ಲಿದೆ.

2018, 2019ರಲ್ಲೂ ಪ್ರವಾಹ
2017ರ ನಂತರ 2018 ಹಾಗೂ 2019ರಲ್ಲಿಯೂ ಆಗಸ್ಟ್ ತಿಂಗಳಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಶೇಷವಾಗಿ 2018ರಲ್ಲಿ ಹಾರಂಗಿ ಜಲಾನಯನ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬಂದಿತ್ತು.
ಹಾರಂಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಿಟ್ಟ ಸಂದರ್ಭದಲ್ಲಿ ರಾಮನಾಥಪುರ, ಬಸವಪಟ್ಟಣ, ಕೇರಳಾಪುರ ಸೇರಿದಂತೆ ಕಾವೇರಿ ನದಿ ಪಾತ್ರದ ಹಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿತ್ತು. ದೊಡ್ಡಹಳ್ಳಿ ಸೇರಿದಂತೆ ನದಿ ತಗ್ಗು ಪ್ರದೇಶಗಳ ಹಲವು ಗ್ರಾಮಗಳ ಜನರು ಹಾಗೂ ರೈತರು ಸಂಕಷ್ಟ ಅನುಭವಿಸಿದ್ದರು.
ಪ್ರವಾಹದಿಂದಾಗಿ ಕೆಲವರು ತಮ್ಮ ಮನೆಗಳನ್ನು ತೊರೆದು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದರು. ಆರ್ಥಿಕವಾಗಿ ಸಬಲರಾಗಿದ್ದ ಕೆಲವರು ಮಳೆಗಾಲದಲ್ಲಿ ವಾಸಿಸಲು ಪರ್ಯಾಯ ಮನೆಗಳನ್ನು ನಿರ್ಮಿಸಿಕೊಂಡಿದ್ದರು.

ಈ ಬಾರಿ ನಿರಾಳತೆ
2026ರ ಆಗಸ್ಟ್ ತಿಂಗಳಲ್ಲೂ ಆಶ್ಲೇಷಾ ಮಳೆಯ ಅವಧಿ ಬಂದರೂ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಭಾರಿ ಮಳೆ ಸುರಿಯದ ಕಾರಣ ಕಾವೇರಿ ನದಿ ತೀರದ ತಗ್ಗು ಪ್ರದೇಶಗಳ ಜನರು ನಿರಾಳರಾಗಿದ್ದಾರೆ.
ಆಗಸ್ಟ್ 3ರಿಂದ 16ರವರೆಗೆ ಆಶ್ಲೇಷಾ ಮಳೆಯ ಅವಧಿ ಎಂದು ಪರಿಗಣಿಸಲಾಗಿದ್ದು, ಈ ಅವಧಿಯಲ್ಲಿ ದೊಡ್ಡ ಪ್ರಮಾಣದ ಮಳೆ ಸುರಿಯದ ಹಿನ್ನೆಲೆಯಲ್ಲಿ ನದಿ ಪ್ರವಾಹದ ಆತಂಕ ಎದುರಾಗಲಿಲ್ಲ. ಪರಿಣಾಮವಾಗಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವವನ್ನು ಯಾವುದೇ ಪ್ರವಾಹದ ಭೀತಿಯಿಲ್ಲದೆ ಆಚರಿಸಲು ಸಾಧ್ಯವಾಯಿತು.
ಇದೀಗ ಆಗಸ್ಟ್ 17ರಿಂದ 31ರವರೆಗೆ ಮಾಘೆ ಮಳೆಯ ಅವಧಿ ಆರಂಭವಾಗಿದ್ದು, ಈ ಅವಧಿಯಲ್ಲಿ ಹಿಂದೆ ದೊಡ್ಡ ಪ್ರಮಾಣದ ಪ್ರವಾಹ ಉಂಟುಮಾಡುವಷ್ಟು ಮಳೆಯಾದ ಉದಾಹರಣೆ ಕಡಿಮೆ ಎಂಬುದು ನದಿ ತೀರದ ಜನರ ನಿರಾಳತೆಗೆ ಕಾರಣವಾಗಿದೆ.
ಆದರೆ ತಗ್ಗು ಪ್ರದೇಶದ ಜನರು ಪ್ರವಾಹದ ಭೀತಿಯಿಂದ ನಿರಾಳರಾಗಿದ್ದರೆ, ಎತ್ತರದ ಪ್ರದೇಶದ ರೈತರು ಮಳೆಯ ಕೊರತೆಯಿಂದ ಬೆಳೆಗಳ ಬಗ್ಗೆ ಆತಂಕದಲ್ಲಿದ್ದಾರೆ. ಉತ್ತಮ ಮಳೆಯ ನಿರೀಕ್ಷೆಯಲ್ಲಿರುವ ರೈತರು ಆಕಾಶದತ್ತ ನೋಡುವಂತಾಗಿದೆ.
ಈ ಬಾರಿ ಕಾವೇರಿ ತೀರದ ಜನರನ್ನು ಭಯಭೀತಿಗೊಳಿಸದೇ ಹಾದುಹೋದ ಆಶ್ಲೇಷಾ ಮಳೆಗೆ ನದಿ ತೀರದ ಜನರ ಒಂದೇ ಮಾತು—“ಎನಿವೇ… ಹೋಗಿ ಬಾ ಆಶ್ಲೇಷಾ!”
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
