ಹಾಸನ: ಪುಸ್ತಕ ಮೌನ ಶಿಕ್ಷಕ. ಮಾತನಾಡುವುದಿಲ್ಲ ಅಂತಃಕರಣವನ್ನು ಸೃಷ್ಟಿಸುತ್ತವೆ. ನಡೆಯುವುದಿಲ್ಲ ಮಾರ್ಗದರ್ಶನ ಮಾಡುತ್ತವೆ. ನೋಡುವುದಿಲ್ಲ ಜಗತ್ತನ್ನು ತೋರಿಸುತ್ತವೆ ಎಂದು ಹಾಸನ ವಿಶ್ವವಿದ್ಯಾಲಯ ಹೇಮಗಂಗೋತ್ರಿ ಕುಲ ಸಚಿವರು ( ಮೌಲ್ಯಮಾಪನ) ಡಾ. ನಾಗರಾಜು ಎನ್. ತಿಳಿಸಿದರು.
ಹಾಸನದ ಗಂಧದಕೋಠಿ ಅವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಾಗರೀಕರ ಹಕ್ಕುಗಳ ಸಂರಕ್ಷಣಾ ವೇದಿಕೆ,ಹಾಸನ ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು ಇವರ ಸಂಯುಕ್ತಶ್ರಾಯದಲ್ಲಿ ಆಗಸ್ಟ್ 20ರಂದು ನಡೆದ ರಾಜಣ್ಣ ರಾಶಿ ಅವರ 1857 ಸ್ವಾತಂತ್ರ್ಯ ಸಂಗ್ರಾಮದಿಂದುದಯಿಸಿದ ಭಾರತ ಪುಸ್ತಕ ಬಿಡುಗಡೆ ಮತ್ತು ವಿಮರ್ಶೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃತಿ ಬಿಡುಗಡೆ ಮಾಡಿದ ಲೇಖಕ ಗೊರೂರು ಶಿವೇಶ್ ಇತಿಹಾಸ ಮತ್ತು ಸಾಹಿತ್ಯ ಕಾಲಯಾನದ ಎರಡು ಕಣ್ಣುಗಳಾಗಿವೆ. ಇತಿಹಾಸದ ಜೊತೆ ಜೊತೆಗೆ ಆ ಕಾಲಘಟ್ಟದ ಜನಸಾಮಾನ್ಯರ ಮತ್ತು ಸೈನಿಕರ ವೃತ್ತಾಂತಗಳನ್ನು ಚಿತ್ರಸಿರುವ ಲೇಖಕರ ಕೃತಿಗಳನ್ನು ಓದಿದಾಗ ಒಂದು ಸಮಗ್ರ ಅನುಭವ ದೊರಕುತ್ತದೆ. 1857ರ ಬ್ರಿಟಿಷರಿಂದ ಸಿಪಾಯಿ ದಂಗೆ ಎಂದು ಕರೆಯಲ್ಪಟ್ಟ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, 1861–1865ರ ಅಮೆರಿಕದ ಅಂತರ್ಯುದ್ಧ ಅಥವಾ ಸಿವಿಲ್ ವಾರ್ ಹಾಗೂ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರ ಮಾಂತ್ರಿಕ ವಾಸ್ತವವಾದಿ ಕಾದಂಬರಿ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ನೂರು ವರ್ಷಗಳ ಏಕಾಂತ ಈ ಮೂರೂ ಮಾನವನ ಸ್ವಾತಂತ್ರ್ಯದ ಹಂಬಲ, ಅಧಿಕಾರದ ಅಂಧತೆ ಮತ್ತು ಯುದ್ಧದ ನಂತರ ಉಳಿಯುವ ಶೂನ್ಯತೆಯನ್ನು ವಿಭಿನ್ನ ನೆಲೆಗಳಲ್ಲಿ ಮುಖಾಮುಖಿಯಾಗಿಸುತ್ತವೆ. ಸಾಹಿತಿಯು ಆಗಿರುವ ರಾಜಣ್ಣ ರಾಶಿಯವರು ಭಾರತದ ಇತಿಹಾಸವನ್ನು ಸಾಹಿತ್ಯ ಅಂತಃಕರಣದಿಂದ ಚಿತ್ರಿಸಿರುವುದರಿಂದ ಕೃತಿಗೆ ಹೊಸ ನೆಲೆ ಪ್ರಾಪ್ತವಾಗಿದೆ ಎಂದು ವಿವರಿಸಿದರು.

ಕೃತಿ ಕುರಿತು ಮಾತನಾಡಿದ ಡಾ. ಬರಾಳು ಶಿವರಾಮ್ 32 ವಿಮರ್ಶಾ ಗ್ರಂಥಗಳನ್ನು ಅಧ್ಯಯನ ಮಾಡಿ ಘಟನೆ ನಡೆದ ಸ್ಥಳಗಳನ್ನು ಸಂದರ್ಶಿಸಿ ಕೃತಿಯನ್ನು ರಚಿಸಿರುವುದರಿಂದ ಕೃತಿಯು ಅನನ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಗೊರೂರು ಅನಂತರಾಜು ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ರಾಜಣ್ಣ ರಾಶಿ ತಮ್ಮ ವೃತ್ತಿ ಜಗತ್ತಿನಲ್ಲಿ ಅಣೆಕಟ್ಟುಗಳು ಬ್ಯಾರೇಜುಗಳು ಫ್ಲೈ ಓವರ್ ಗಳನ್ನು ದಕ್ಷತೆಯಿಂದ ನಿರ್ಮಿಸಿ, ನಿವೃತ್ತಿಯ ನಂತರ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರಚಿಸಿರುವ ಈ ಕೃತಿ ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಆಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಪ್ರೊ. ಮಂಜಯ್ಯ ಡಿ.ಕೆ ಮಾತನಾಡಿ ಇತಿಹಾಸ ಅರಿಯದವನು ಇತಿಹಾಸ ನಿರ್ಮಿಸಲಾರರು. ಪುಸ್ತಕ ಭಂಡಾರದ ಮೂಲಕ ಅಪಾರ ಜ್ಞಾನವನ್ನು ಗಳಿಸಿ ಸರ್ವರಿಗೂ ಸಮಬಾಳು ಸಮಪಾಲು ದ್ಯೇಯದಡಿಯಲ್ಲಿ ರೂಪಿಸಿದ ಭಾರತದ ಸಂವಿಧಾನ ಪ್ರಧಾನವಾಗಿದೆ. ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳ ಮಾತು ಉಪನ್ಯಾಸ ವಿದ್ಯಾರ್ಥಿನಿಯರ ಜ್ಞಾನರ್ಜನೆಗೆ ಉಪಯುಕ್ತ ಮಾಹಿತಿ ಒದಗಿಸಿದೆ. ನಾವು ಓದುವಾಗ ಇಷ್ಟೆಲ್ಲಾ ಅವಕಾಶ ದೊರಕಿರಲಿಲ್ಲ. ನೀವು ವಿದ್ಯಾರ್ಥಿನಿಯರು ಅದೃಷ್ಟವಂತರು. ನೀವೂ ಕೂಡ ಓದು ಅಧ್ಯಯನದಿಂದ ವೇದಿಕೆಯಲ್ಲಿ ಕುಳಿತ ಸಾಧಕರಂತೆ ಈ ಸ್ಥಾನಕ್ಕೆ ಬರಬಹುದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣಾ ವೇದಿಕೆಯ ಅಧ್ಯಕ್ಷರು ಶ್ರೀಮತಿ ಸತ್ಯವತಿ ಮತ್ತು ಕೃತಿಯ ಲೇಖಕರು ರಾಜಣ್ಣ ರಾಶಿ ಮುಖ್ಯ ಅತಿತಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್ ಎ. ವಿ. ರುದ್ರಪ್ಪಾಜಿರಾವ್, ಕಾಲೇಜಿನ ಉಪನ್ಯಾಸಕರು, ನಾಗರಿಕ ಹಕ್ಕುಗಳ ಸಂರಕ್ಷಣಾ ವೇದಿಕೆಯ ಸದಸ್ಯರು ಹಾಜರಿದ್ದರು.
ಗಾಯಕ ಜಿ.ಆರ್.ಶ್ರೀಕಾಂತ್ ಪ್ರಾರ್ಥಿಸಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕರು ಮೋಹನ್ ಕುಮಾರ್ ಜಿ.ಆರ್. ಸ್ವಾಗತಿಸಿದರು. ನಾಗರಿಕ ಹಕ್ಕುಗಳ ಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ಸುಧಾಕರ ಆರ್ ವಂದಿಸಿದರು. ವೇದಿಕೆಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.
