ಶ್ಲೋಕ – 08
ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್ ।
ಅಪರಸ್ಪರಸಂಭೂತಂ ಕಿಮನ್ಯತ್ ಕಾಮಹೈತುಕಮ್ ॥೮॥
ಅಸತ್ಯಮ್ ಅಪ್ರತಿಷ್ಠಮ್ ತೇ ಜಗತ್ ಆಹುಃ ಅನೀಶ್ವರಮ್ ।
ಅಪರಸ್ಪರ ಸಂಭೂತಂ ಕಿಮ್ ಅನ್ಯತ್ ಕಾಮಹೈತುಕಮ್ – ಅವರು ಈ ವಿಶ್ವ ಸತ್ಯ ಸ್ವರೂಪನಾದ ಭಗವಂತನ ಕೊಡುಗೆಯಲ್ಲ [ಇದೊಂದು ಸುಳ್ಳಿನ ಕಂತೆ] ಎನ್ನುತ್ತಾರೆ. ಇದು ಭಗವಂತನಲ್ಲಿ ನೆಲೆಗೊಂಡದ್ದಲ್ಲ [ಇದಕ್ಕೆ ಇರವೇ ಇಲ್ಲ] ಎನ್ನುತ್ತಾರೆ. ಇದನ್ನು ನಿಯಮಿಸುವ ಸರ್ವಶಕ್ತನೊಬ್ಬನಿಲ್ಲ ಎನ್ನುತ್ತಾರೆ. ಒಂದರಿಂದ ಇನ್ನೊಂದು ಕ್ರಮವಾಗಿ ಹುಟ್ಟಿತು ಎನ್ನುವುದನ್ನೂ ಒಪ್ಪುವುದಿಲ್ಲ. ಮತ್ತೇನು? ಅವರ ದೃಷ್ಟಿಯಲ್ಲಿ ಇದೊಂದು ಬೇರೆಯ ತರ. ಇದೊಂದು ಕಾಮದ ಕೂಸು-ಮಾಯಾಸೃಷ್ಟಿ.
ಅಸುರರಲ್ಲಿ ಎರಡು ವಿಧ. ಜಗತ್ತಿಗೆ ಇನ್ನೊಂದು ಸತ್ಯವಿಲ್ಲ, ಜಗತ್ತಿಗೆ ಇನ್ನೊಂದು ಪ್ರತಿಷ್ಠೆ ಇಲ್ಲ, ಜಗತ್ತಿಗೆ ಇನ್ನೊಬ್ಬ ಈಶ್ವರನಿಲ್ಲ ಎನ್ನುವ ನಾಸ್ತಿಕ ತಿಳುವಳಿಕೆ ಇವರಿಗಿರುತ್ತದೆ. ಜಗತ್ತನ್ನು ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಒಳಪಡಿಸುವ ಶಕ್ತಿ(ಸತ್ಯ) ಇಲ್ಲ ಎಂದು ಇವರು ತಿಳಿದಿರುತ್ತಾರೆ. ಇವರು ಈ ಜಗತ್ತಿಗೆ ಆಧಾರನಾಗಿ ಒಬ್ಬ ದೇವರಿಲ್ಲ, ಆದ್ದರಿಂದ ಈ ಜಗತ್ತನ್ನು ನಿಯಂತ್ರಿಸುವ ಸ್ವಾಮಿ ಇಲ್ಲ, ಎಲ್ಲವೂ ಭ್ರಮೆ ಎಂದು ವಾದ ಮಾಡುತ್ತಾರೆ. ಸೃಷ್ಟಿಚಕ್ರ ಒಂದು ಮೂರ್ಖತನದ ಸಿದ್ಧಾಂತ ಎನ್ನುವುದು ಇವರ ನಂಬಿಕೆ.
ಇನ್ನೊಂದು ವಿಧದ ಅಸುರರು ಈ ಜಗತ್ತಿನಲ್ಲಿ ನಮಗೆ ಏನು ಕಾಣುತ್ತದೋ ಅದು ಕೇವಲ ನಮ್ಮ ಭ್ರಮೆ ಎಂದು ಶೂನ್ಯವಾದ ಮಾಡುವವರು. ಇವರು ಈ ಪ್ರಪಂಚ ನಮ್ಮ ಬಯಕೆಗಳಿಂದ ಬೆಳೆಯುತ್ತಿದೆ ಹೊರತು ಇನ್ನೊಂದು ಶಕ್ತಿಯಿಂದಲ್ಲ ಎಂದು ನಂಬಿರುತ್ತಾರೆ.
