ಬೆಂಗಳೂರು: ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಮತ್ತು ನಾಗರತ್ನ ಅವರ ನಡುವಿನ ಸುದೀರ್ಘ ವೈವಾಹಿಕ ವಿವಾದಕ್ಕೆ ಕರ್ನಾಟಕ ಹೈಕೋರ್ಟ್ ತೆರೆ ಎಳೆದಿದೆ. ಇಬ್ಬರಿಗೂ ವಿಚ್ಛೇದನ ಮಂಜೂರು ಮಾಡಿರುವ ಹೈಕೋರ್ಟ್ ವಿಭಾಗೀಯ ಪೀಠ, ನಾಗರತ್ನ ಅವರಿಗೆ ₹2 ಕೋಟಿ ಜೀವನಾಂಶ ಪಾವತಿಸುವಂತೆ ದುನಿಯಾ ವಿಜಯ್ ಅವರಿಗೆ ನಿರ್ದೇಶನ ನೀಡಿದೆ.
ವಿಚ್ಛೇದನಕ್ಕೆ ಸಂಬಂಧಿಸಿದಂತೆ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ದಂಪತಿಯ ವೈವಾಹಿಕ ಸಂಬಂಧವನ್ನು ಕಾನೂನುಬದ್ಧವಾಗಿ ಅಂತ್ಯಗೊಳಿಸಿದೆ. ಜೀವನಾಂಶ ನಿಗದಿಪಡಿಸುವ ವೇಳೆ ಇಬ್ಬರ ಆರ್ಥಿಕ ಸ್ಥಿತಿ, ದುನಿಯಾ ವಿಜಯ್ ಅವರ ವೃತ್ತಿಪರ ಹಾಗೂ ಸಾಮಾಜಿಕ ಸ್ಥಾನಮಾನ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ.
ಇದಲ್ಲದೆ, ದಂಪತಿಗೆ ಇರುವ ಮೂವರು ಮಕ್ಕಳ ಜವಾಬ್ದಾರಿಯನ್ನೂ ನ್ಯಾಯಪೀಠ ಗಮನದಲ್ಲಿಟ್ಟುಕೊಂಡಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ನಾಗರತ್ನ ಅವರಿಗೆ ₹2 ಕೋಟಿ ಜೀವನಾಂಶ ನೀಡುವಂತೆ ಆದೇಶಿಸಲಾಗಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿಜಯ್
ದುನಿಯಾ ವಿಜಯ್ ಮತ್ತು ನಾಗರತ್ನ ಅವರ ದಾಂಪತ್ಯದಲ್ಲಿ ಹಲವು ವರ್ಷಗಳಿಂದ ಭಿನ್ನಾಭಿಪ್ರಾಯಗಳು ಮುಂದುವರಿದಿದ್ದವು. ಈ ಹಿನ್ನೆಲೆಯಲ್ಲಿ ವಿಜಯ್ 2024ರಲ್ಲಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಕೌಟುಂಬಿಕ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಇದೀಗ ವಿಚ್ಛೇದನ ಮಂಜೂರು ಮಾಡುವುದರ ಜೊತೆಗೆ ₹2 ಕೋಟಿ ಜೀವನಾಂಶ ಪಾವತಿಸುವಂತೆ ಆದೇಶಿಸಿದೆ.
ಈ ತೀರ್ಪಿನೊಂದಿಗೆ ದುನಿಯಾ ವಿಜಯ್ ಮತ್ತು ನಾಗರತ್ನ ಅವರ ನಡುವಿನ ಹಲವು ವರ್ಷಗಳ ವೈವಾಹಿಕ ಹಾಗೂ ಕಾನೂನು ಹೋರಾಟಕ್ಕೆ ಅಧಿಕೃತ ಅಂತ್ಯ ದೊರೆತಿದೆ.
