ರಾಮನಾಥಪುರ, ಸೆ. 3: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ರಾಮನಾಥಪುರದ ಶ್ರೀ ಉತ್ತರಾದಿ ಮಠದಲ್ಲಿ ಐದು ದಿನಗಳ ಕಾಲ ನಡೆದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಶ್ರೀ ಉತ್ತರಾದಿ ಮಠದ ವ್ಯವಸ್ಥಾಪಕ ವೇ. ಕನಕಾಚಾರ್ಯ ಅವರ ನೇತೃತ್ವದಲ್ಲಿ ನಡೆದ ಮಹೋತ್ಸವದಲ್ಲಿ ಐದು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು, ಉತ್ಸವಗಳು, ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಹಾಸನ, ಮೈಸೂರು, ಬೆಂಗಳೂರು, ಕುಶಾಲನಗರ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಮಹೋತ್ಸವದ ಮುಕ್ತಾಯದ ಮಹಾಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದ ಮಾಜಿ ಕನ್ವೀನರ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎಸ್. ನರಸಿಂಹಮೂರ್ತಿ, “ನಮ್ಮ ಪರಂಪರೆಯನ್ನು ಸಾರುವ ಇಂತಹ ಮಹನೀಯರು ಹಾಗೂ ದಾರ್ಶನಿಕರ ಆಚರಣೆ ಕೇವಲ ಒಂದು ದಿನಕ್ಕೆ ಅಥವಾ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕೆಟ್ಟದ್ದನ್ನು ದೂರ ಮಾಡಿ ಒಳಿತಿನ ಹಾದಿಯಲ್ಲಿ ಸಾಗಲು ಪ್ರೇರಣೆಯಾಗಬೇಕು. ಕಷ್ಟ-ಕಾರ್ಪಣ್ಯಗಳು ನಿವಾರಣೆಯಾಗಲು ದೈವಭಕ್ತಿಯ ಮೇಲಿನ ನಂಬಿಕೆ ಅಗತ್ಯ” ಎಂದು ಹೇಳಿದರು.

ಶ್ರೀಮಠಕ್ಕೆ ದಿನದಿಂದ ದಿನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಐದು ದಿನಗಳ ಕಾಲ ಕನಕಾಚಾರ್ಯ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಹಾಗೂ ಉತ್ಸವಗಳು ಅದ್ದೂರಿಯಾಗಿ ನಡೆದಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಉತ್ತರಾದಿ ಮಠದ ವ್ಯವಸ್ಥಾಪಕ ವೇ. ಕನಕಾಚಾರ್ಯ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದಲೂ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಶ್ರೀಮಠದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನೂ ನಡೆಸಲಾಗುತ್ತಿದೆ. ದಾಸೋಹ ಕಾರ್ಯಕ್ರಮಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಇದರಿಂದ ಶ್ರೀಮಠಕ್ಕೆ ಆಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ತಿಳಿಸಿದರು.
ಮಹೋತ್ಸವದ ಅಂಗವಾಗಿ ರಾಮನಾಥಪುರ ಪೇಟೆ ಬೀದಿಯ ಮಕ್ಕಳು, ಶ್ರೀ ವಿದ್ಯಾಮಿಕೇತನ ಶಾಲೆಯ ವಿದ್ಯಾರ್ಥಿಗಳು ಹಾಗೂ ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು. ವಿವಿಧ ಭಕ್ತರು ಸಮರ್ಪಿಸಿದ ದವಸ-ಧಾನ್ಯಗಳನ್ನು ಪೂಜಾ ಕಾರ್ಯಕ್ರಮದಲ್ಲಿ ಅರ್ಪಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಭಕ್ತರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ವೇ. ಕನಕಾಚಾರ್ಯ ಅಭಿನಂದನೆ ಸಲ್ಲಿಸಿದರು.
ಶ್ರೀ ರಾಘವೇಂದ್ರಸ್ವಾಮಿ ಭಕ್ತ ಬಳಗದ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಐದು ದಿನಗಳ ಕಾಲ ನಡೆದ ಆರಾಧನಾ ಮಹೋತ್ಸವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಉತ್ಸವಗಳು ನೆರವೇರಿದವು. ಮಹಾಮಂಗಳಾರತಿಯ ಬಳಿಕ ಸಾವಿರಾರು ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ವರದಿ : ಕುಮಾರಸ್ವಾಮಿ, ರಾಮನಾಥಪುರ
