ಬೀಳಗಿ: ಪಟ್ಟಣದ ಸಾಹಿತಿ ಹಾಗೂ ಶಿಕ್ಷಕ ದಂಪತಿ ಸದಾನಂದ ಏಳಗಂಟಿ ಮತ್ತು ಗುರುಮಾತೆ ಮಂಜುಳಾ ಎಸ್. ಏಳಗಂಟಿ ಅವರ ನಿವಾಸದಲ್ಲಿ ನಡೆದ ಸತ್ಯನಾರಾಯಣ ಪೂಜೆ ಹಾಗೂ ‘ಮನೆ ಮನೆಗೆ ಗ್ರಂಥಾಲಯ ಭೇಟಿ’ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಆರ್.ಎಸ್. ಸೀತಾರಾಂ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಹಾಗೂ ಶಿಕ್ಷಕ ದಂಪತಿಗಳು ನೀಡಿದ ಅಭಿನಂದನೆಯನ್ನು ಸ್ವೀಕರಿಸಿದ ಆರ್.ಎಸ್. ಸೀತಾರಾಂ ಅವರು ಮನೆಯಲ್ಲಿರುವ ಪುಟ್ಟ ಗ್ರಂಥಾಲಯಕ್ಕೆ ಭೇಟಿ ನೀಡಿ, ಸದಾನಂದ ಏಳಗಂಟಿ ಅವರ ಪುಸ್ತಕ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ಬೀಳಗಿ ಪಟ್ಟಣದ ಸದಾನಂದ ಏಳಗಂಟಿ ಅವರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿದ್ದು, ಸಾಹಿತಿ, ಪರಿಸರ ಪ್ರೇಮಿ ಹಾಗೂ ಸಮಾಜ ಸೇವಕರಾಗಿ ಈ ಭಾಗದಲ್ಲಿ ಚಿರಪರಿಚಿತರಾಗಿದ್ದಾರೆ. ಕಳೆದ ಸುಮಾರು 30 ವರ್ಷಗಳಿಂದ ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಸತ್ಯನಾರಾಯಣ ಪೂಜೆಯ ಜೊತೆಗೆ ಪುಸ್ತಕ ಪ್ರದರ್ಶನ ಆಯೋಜಿಸಿ, ಪೂಜೆಗೆ ಆಗಮಿಸುವ ಭಕ್ತರಿಗೆ ಪುಸ್ತಕಗಳನ್ನು ಪರಿಚಯಿಸಿ ಹಾಗೂ ನೀಡುವ ಮೂಲಕ ಓದುವ ಹವ್ಯಾಸ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಅವರ ಆಧ್ಯಾತ್ಮಿಕತೆ ಮತ್ತು ಪುಸ್ತಕ ಪ್ರೀತಿಯ ಜೊತೆಗೆ ಸಮಾಜದಲ್ಲಿ ಓದುವ ಸಂಸ್ಕೃತಿ ಬೆಳೆಸುವ ಪ್ರಯತ್ನವೂ ಶ್ಲಾಘನೀಯವಾಗಿದೆ ಎಂದು ಸೀತಾರಾಂ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಡಿವೈಪಿಸಿ ಪಿ.ಎಸ್. ಬಳೂಲಮಟ್ಟಿ, ತಾಲ್ಲೂಕು ಪಂಚಾಯಿತಿ ಇಒ ಎನ್.ಎಸ್. ನ್ಯಾಮಗೌಡ, ಗುರುಮಾತೆ ಮಂಜುಳಾ ಏಳಗಂಟಿ, ಕುಮಾರ್, ವಿಜಯಕುಮಾರಿ, ರಶ್ಮಿ, ಬಿ.ಆರ್.ಪಿ. ಎನ್.ಎಸ್. ಪಾಟೀಲ್, ಎಸ್.ಎಚ್. ಲಮಾಣಿ, ಬಸವರಾಜ ಮಂಟೂರ, ಬೆಳಗಲಿ, ಶುಭೋಳರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
