ಹಾಸನ : ಹಾಸನ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾ ಸಿಬ್ಬಂದಿಗಳಿಗೆ ಕೆಆರ್ಎಸ್ ಪಕ್ಷದ ಮುಖಂಡರಿಂದ ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿ HIMS ಆವರಣದಲ್ಲಿ ಸಿಬ್ಬಂದಿಗಳು ಮೌನ ಪ್ರಭಟನೆ ನಡೆಸಿದರು.
ಈ ವೇಳೆ ಸ್ವಚ್ಚತಾ ಸಿಬ್ಬಂದಿ ಲಲಿತಾ ಮಾತನಾಡಿ, ನಮಗೆ ಕೆ.ಆರ್.ಎಸ್ ಪಕ್ಷದ ಮುಖಂಡರು ದಿನನಿತ್ಯ ನಮಗೆ ಕೆಲಸ ಮಾಡಲು ಅಡ್ಡಿ ಪಡಿಸುತ್ತಿದ್ದಾರೆ, ಕೆಲಸ ಮಾಡುವ ಸ್ಥಳಕ್ಕೆ ಏಕಾಏಕಿ ಬಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಹಿಂಸೆ ನೀಡುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ನಮ್ಮ ತಪ್ಪಿದ್ದರೆ ಕಾನೂನುಬದ್ಧವಾಗಿ ಹೋರಾಟ ಮಾಡಲಿ ಮೇಲಾಧಿಕಾರಿಗಳಿಗೆ ಮನವಿ ನೀಡಲಿ ಅದನ್ನು ಬಿಟ್ಟು ಶೌಚಾಲಯ, ಹಾಗೂ ಇನ್ನಿತರ ಸ್ಥಳಗಳಲ್ಲಿ ಸ್ವಚ್ಛತೆ ಮಾಡುವಾಗ ನಮ್ಮ ವಸ್ತ್ರಗಳು ಯಾವ ರೀತಿ ಇದೆ ಎಂಬುದನ್ನು ಲೆಕ್ಕಿಸದೆ ವೀಡಿಯೋ ಮಾಡಿ ನಮ್ಮ ಮರ್ಯಾದೆ ಕಳೆಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ನಾವು ತಲೆ ಎತ್ತಿ ಓಡಾಡದಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಳಗ್ಗೆ ಕೆಲಸಕ್ಕೆ ಬೇಗ ಬರುವ ಸಲುವಾಗಿ ಕೆಲವೊಮ್ಮೆ ಉಪಾಹಾರ ಸೇವಿಸಿರುವುದಿಲ್ಲ ಆದ ಕಾರಣ ಆಸ್ಪತ್ರೆಯ ಮೇಲಾಧಿಕಾರಿಗಳಿಗೆ ಮನವಿ ಮಾಡಿ ಉಪಹಾರ ಸೇವಿಸಲು ಗೇಟಿನಿಂದ ಹೊರಗೆ ಹೋದಾಗ ಅಲ್ಲಿಯೂ ಹಿಂದೆಯೇ ಬಂದು ವಿಡಿಯೋ ಮಾಡುವುದು ಫೋಟೋ ತೆಗೆದು ಜೊತೆಗೆ ಅವರಿಗೆ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳಿ ನಮಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ ಇವರ ಕಿರುಕುಳದಿಂದ ನಮಗೆ ಬೇಸರವಾಗಿದೆ ಎಂದರು.
ಕೆ ಆರ್ ಎಸ್ ಪಕ್ಷದವರಿಗೆ ನಮ್ಮ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ನಮಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟ ಮಾಡಲಿ, ನಮಗೆ ಕನಿಷ್ಠ ವೇತನ ಜಾರಿಗಾಗಿ ಈಗಾಗಲೇ ನಡೆಯುತ್ತಿರುವ ಹೋರಾಟಕ್ಕೆ ಕೈಜೋಡಿಸಲಿ ಅದನ್ನು ಬಿಟ್ಟು ಈ ರೀತಿ ನಮ್ಮನ್ನು ತೇಜೊವದೆ ಮಾಡುವುದು ನಮಗೆ ಕಿರುಕುಳ ನೀಡುವುದು ಸರಿಯಲ್ಲ. ಇತ್ತೀಚೆಗೆ ನಡೆದ ಖಾಸಗಿ ಆಸ್ಪತ್ರೆ ಕೆಲಸದ ವಿಚಾರವಾಗಿ ಹೇಳುವುದಾದರೆ ತಮ್ಮ ಕೆಲಸದ ಅವಧಿ ಮುಗಿದ ನಂತರ ಅಲ್ಲಿ ಪಾರ್ಟ್ ಟೈಮ್ ಗಾಗಿ ಕೆಲವರು ಹೋಗಿದ್ದಾರೆ. ಇಲ್ಲಿ ನೀಡುವ ಸಂಬಳ ಸಾಲದೆ ಇದ್ದಾಗ ಬೇರೆಕಡೆ ಹೆಚ್ಚಿನ ಅವಧಿ ಕೆಲಸ ಮಾಡಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದೇವೆ ಆದರೆ ಕೆ.ಆರ್.ಎಸ್ ಪಕ್ಷವರು ನಮ್ಮ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಇದೇ ವಿಚಾರಕ್ಕೆ ಈಗಾಗಲೇ ಸೂಪರ್ವೈಸರ್ ಮಹೇಶ್ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದ್ದು ಅವರು ತಮ್ಮ ಕಾರ್ಯ ದಕ್ಷತೆ ಮೂಲಕ ಕೆಲಸಗಾರರಿಗೆ ಒಳ್ಳೆಯ ಸಹಕಾರ ನೀಡಿದ್ದಾರೆ ಅವರನ್ನು ಮರು ನೇಮಕ ಮಾಡಬೇಕು ಎಂದು ಮನವಿ ಮಾಡಿದರು
