ನಡೆದೂ ನಡೆದೂ ಸುಸ್ತಾದ ನನಗೆ ಯಾವುದಾದರೂ ವಾಹನ ಘಾಟಿಯೇರಿ ಬರುತ್ತಿದ್ದರೆ, ಅದನ್ನು ಹತ್ತಿಕೊಂಡು ಮಾರನಹಳ್ಳಿ ಬಳಿ ಇಳಿಯುವ ಯೋಚನೆಯಿತ್ತು. ಇಷ್ಟು ದೂರ ನಡೆದರೂ ಯಾವುದೇ ವಾಹನ ಹಿಂದಿನಿಂದಾಗಲೀ, ಎದುರಿನಿಂದಾಗಲೀ ಆಗಮಿಸಲೇ ಇಲ್ಲ. ಕಾಲುಗಳೆಲ್ಲ ಇನ್ನು ನಡೆಯಲು ಸಾಧ್ಯವೇ ಇಲ್ಲವೆನ್ನುವಷ್ಟು ನೋಯತೊಡಗಿದವು.
ಅಷ್ಟರಲ್ಲಿ ಯಾವುದೋ ವಾಹನ ಘಾಟಿಯೇರಿ ಬರುತ್ತಿರುವ ಸದ್ದಾಯಿತು. ಹತ್ತಿರ ಹತ್ತಿರ ಬರುತ್ತಿದ್ದಂತೆ ಅದೊಂದು ಮಿನಿಲಾರಿಯೆಂದು ತಿಳಿಯಿತು. ಆಸೆಯಿಂದ ಕೈ ಮುಂದೆ ಚಾಚಿದೆ. ಎಲ್ಲಿ ಸ್ಲೋ ಮಾಡಿದರೆ ಪಿಕಪ್ ಕಡಿಮೆಯಾಗುವುದೋ ಎಂದು ಗೇರನ್ನೂ ಸಹ ಬದಲಾಯಿಸದೆ ಒಂದೇ ಉಸಿರಿಗೆ ನನ್ನನ್ನೂ ದಾಟಿಕೊಂಡ ಆ ಮಿನಿಲಾರಿ ಮಿಸೈಲಿನಂತೆ ಮುಂದೆ ಹೋಯಿತು. ಇಷ್ಟು ಹೊತ್ತಿನಲ್ಲಿ ಜಾಗವಲ್ಲದ ಜಾಗದಲ್ಲಿ ಒಬ್ಬಂಟಿಯೊಬ್ಬ ಮೂಟೆಯಂಥ ಬ್ಯಾಗನ್ನು ಹೊತ್ತುಕೊಂಡು ಡ್ರಾಪ್ ಕೇಳುವುದನ್ನು ಅವರು ನಿರೀಕ್ಷಿಸಿರಲಿಲ್ಲವೇನೋ.
ಸುಮಾರು ಹತ್ತು ನಿಮಿಷದ ನಂತರ ಮತ್ತೊಂದು ವಾಹನ ಉಸಿರುಗಟ್ಟಿಕೊಂಡು ಅಗಾಧವಾದ ಏರಿನ ತಿರುವನ್ನು ಘಾಟಿಯಲ್ಲೆಲ್ಲೋ ಏರುತ್ತಿರುವ ಸದ್ದು ಕೇಳಿಸಿತು. ಹೇಗಾದರೂ ಮಾಡಿ ಇದನ್ನಾದರೂ ನಿಲ್ಲಿಸಿ ಹತ್ತಿಕೊಳ್ಳಬೇಕಲ್ಲ ಎಂದು ಯೋಚಿಸಿ, ರಸ್ತೆ ಬದಿಯ ಮೈಲಿಗಲ್ಲಿನ ಮೇಲೆ ಕೂತು ಸುಧಾರಿಸಿಕೊಳ್ಳತೊಡಗಿದೆ.
ವಾಹನದ ಸದ್ದು ಹತ್ತಿರವಾದಂತೆ ಎದ್ದು ನಿಂತು ಕೈ ಅಡ್ಡ ಹಿಡಿದೆ. ಹತ್ತಿರ ಬರುತ್ತಿದ್ದಂತೆ ಅದು ಜೀಪ್ ಎಂದು ಗೊತ್ತಾಯಿತು. ಜೀಪ್ ಸಹ ಶರವೇಗದಲ್ಲಿ ನಿಲ್ಲಿಸದೇ ಮುಂದೆ ಹೋಯಿತು. ಮುಂದಿನ ತಿರುವಿನವರೆಗೆ ಹೋದ ಜೀಪ್ ಸಡನ್ನಾಗಿ ನಿಂತಿತು. ನಾನು ಹತ್ತಿಕೊಳ್ಳೋಣವೆಂದು ಓಡಲು ಸಿದ್ಧನಾದೆ.
ಜೀಪ್ನೊಳಗಿಂದ ಒಬ್ಬ ಇಳಿದು ನಿಂತ. ಟಾರ್ಚ್ ಬೆಳಕು ಬೀರುತ್ತಾ ಅವನೆಡೆಗೆ ಓಡಿಬರುತ್ತಿದ್ದ ನನ್ನನ್ನು ನೋಡಿ ಏನನ್ನಿಸಿತೋ ಏನೋ, ಲಗುಬಗೆಯಿಂದ ವಾಪಸ್ ಜೀಪನ್ನೇರಿ ರ್ರನೆ ಅಲ್ಲಿಂದ ಕಂಬಿ ಕೀಳುವುದೇ? ನಾನು ಅವರೆಡೆಗೆ ಓಡಿದ್ದೇ ತಪ್ಪಾಯಿತೇನೋ! ಅವರು ನನ್ನನ್ನು ಯಾರೋ ಗಂಧದ ಪಾರ್ಟಿಯೋ, ಅಥವಾ ಹೆದ್ದಾರಿ ಕಳ್ಳನೋ, ಇನ್ನೇನೋ ಎಂದು ಕಲ್ಪಿಸಿಕೊಂಡರೇನೋ?
ನನ್ನ ಹಣೆಬರಹಕ್ಕೆ ಗೊಣಗುತ್ತಾ, ಈ ಹಿಂದೆ ನಾನು ನೋಡಿದ ದೆವ್ವದ ಸಿನಿಮಾಗಳ ಕ್ಲೈಮ್ಯಾಕ್ಸ್ಗಳನ್ನು ಪ್ರಯತ್ನಪೂರ್ವಕವಾಗಿ ಮರೆಯಲು ಯತ್ನಿಸುತ್ತಾ, ಅದೇ ಕಾರಣಕ್ಕೆ ಅವೇ ದೃಶ್ಯಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಇನ್ನೂ ವಿಹ್ವಲಗೊಳ್ಳುತ್ತಿದ್ದೆ.
ಅಖಂಡ ಶಿರಾಡಿಘಾಟಿಯ ಉದ್ದಕ್ಕೂ ದೈತ್ಯ ಹೆಬ್ಬಾವೊಂದು ಹೊಟ್ಟೆತುಂಬಾ ತಿಂದು ಆಲಸ್ಯದಿಂದ ಬಿದ್ದುಕೊಂಡಂತೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ, ಆ ಬೆಳಗಿನ ಜಾವದ ಸಮಯದಲ್ಲಿ ಅಸಾಮಾನ್ಯ ನೀರವತೆ ತುಂಬಿಕೊಂಡು ಚೆಲ್ಲಿ ಹರಿಯುತ್ತಿತ್ತು. ಆ ಭೀಕರ ಚಳಿಯಲ್ಲೂ ನುಣ್ಣಗೆ ಬೆವರಿಳಿಸುವಂಥ ಒಂಟಿತನ.
ಗೊತ್ತಿಲ್ಲದ ಹಾದಿಯಲ್ಲಿ ಸಲ್ಲದ ಸಮಯದಲ್ಲಿ ಒಂಟಿಯಾಗಿ ಆತಂಕಮಯ ಸಮಯವನ್ನು ಭೀತಿಯಿಂದ ಅನುಭವಿಸುವುದನ್ನು ಇನ್ನೊಬ್ಬರಿಂದ ಕೇಳುವುದಕ್ಕಿಂತ ಸ್ವತಃ ಅನುಭವಿಸಿಯೇ ತೀರಬೇಕು. ಬೆಳಗಿನ ಚಂದ್ರನ ತಿಳಿಬೆಳಕು ಹೆದ್ದಾರಿಯ ಬದಿಯ ಬೃಹದಾಕಾರದ ಹೆಮ್ಮರಗಳ ಕೊಂಬೆಗಳ ಸಂದಿಯಿಂದ ತೂರಿಕೊಂಡು ಹೆಬ್ಬಾವಿನಂಥ ರಸ್ತೆಯನ್ನು ಪಟ್ಟೆಹಾವನ್ನಾಗಿ ರೂಪಾಂತರಗೊಳಿಸುತ್ತಿತ್ತು. ನೀರವ ವಾತಾವರಣ, ಗೊಂದಲ, ಆತಂಕಿತವಾದ ಮನಸ್ಸು ನಮ್ಮನ್ನು ಮತ್ತೂ ದಿಗ್ಭ್ರಮೆಗೊಳಿಸುತ್ತವೆ.
ಲಾರಿಯಿಂದ ಇಳಿದ ನಂತರ ಎಂಥ ಅನಾಹುತಕಾರಿ ನಿರ್ಧಾರ ತೆಗೆದುಕೊಂಡೆ ಎನಿಸಿತು ನನಗೆ. ರಾತ್ರಿಯಿಡೀ ವಾಹನ ಚಾಲನೆ ಮಾಡಿ ಹೈರಾಣಾಗಿದ್ದ ಡ್ರೈವರುಗಳು ಈ ಹೊತ್ತಿನಲ್ಲಿ ಸಾಮಾನ್ಯವಾಗಿ ನಿದ್ರಿಸಿ ವಿಶ್ರಾಂತಿ ಪಡೆಯುತ್ತಾರೆ. ರಸ್ತೆ ಅಪಘಾತಗಳಲ್ಲಿ ಸತ್ತವರ ದೆವ್ವಗಳೂ ಸಹ ಈ ಸಮಯದಲ್ಲಿ ಆ ಹೆದ್ದಾರಿಯಲ್ಲಿ ತಿರುಗಾಡಲು ಹಿಂದೇಟು ಹಾಕುತ್ತವೆಯೇನೋ?
ಅಂಗಾಲ ಬುಡದಲ್ಲಿ ಶುರುವಾದ ಗಾಬರಿ ನೆತ್ತಿಯಲ್ಲಿ ಒಮ್ಮೆಲೆ ಚಿಮ್ಮಿ, ಸಂಪೂರ್ಣ ಉನ್ಮಾದಕ್ಕೊಳಗಾದ ಪೆದ್ದುತನದಲ್ಲಿ ನಿಂತಿದ್ದೆ. ಅಲ್ಲೇ ನಿಂತಿದ್ದರೆ ಕಾಡುಪ್ರಾಣಿಗಳಿಗೋ, ಆಸರೆ ಹುಡುಕಿಕೊಂಡು ಅಲೆದಾಡುವ ಪ್ರೇತಾತ್ಮಗಳಿಗೋ ನನ್ನ ಸುಳಿವು ಸಿಕ್ಕಿ ಬಲಿಯಾದೇನೆಂದು ಎಣಿಸಿ ಹೆಜ್ಜೆಯನ್ನು ಮುಂದಿಡಲಾರಂಭಿಸಿದೆ.
ಭೀತಿ ಮತ್ತು ಭಯ ನನ್ನನ್ನು ಎಷ್ಟರ ಮಟ್ಟಿಗೆ ಕಂಗೆಡಿಸಿತ್ತೆಂದರೆ, ಜೋರಾಗಿ ಹೆಜ್ಜೆಯನ್ನಿರಿಸಿದರೆ ಯಾವುದಕ್ಕಾದರೂ ನನ್ನ ಅಸ್ತಿತ್ವ ತಿಳಿದುಬಿಡುತ್ತದೋ ಎಂದು ಹೆಜ್ಜೆಯನ್ನು ತೇಲಿಸಿ ಬಿರುಸಾಗಿ ನಡೆಯತೊಡಗಿದೆ. ಹತ್ತು ಹೆಜ್ಜೆ ನಡೆಯುವುದು, ನಿಧಾನವಾಗಿ ನಿಂತು ಯಾವುದಾದರೂ ನನ್ನನ್ನು ಹಿಂಬಾಲಿಸುತ್ತಿದೆಯೇ ಎಂದು ಹಿಂದಿರುಗಿ, ಕತ್ತು ನೋಯುವಂತೆ ನಿಧಾನವಾಗಿ ವಾರೆಗಣ್ಣಿನಲ್ಲಿ ನನ್ನ ಬೆನ್ನ ಹಿಂಭಾಗದ ಕಾರ್ಗತ್ತಲನ್ನು ಭಯ, ಆತಂಕದಿಂದ ನೋಡುವುದು ನನ್ನ ಕರ್ಮವಾಗಿತ್ತು.
ಬಹಳ ಸಮಯ ನಡೆದವನಿಗೆ ಹೊಟ್ಟೆ ಚುರುಗುಟ್ಟತೊಡಗಿತು. ಬ್ಯಾಗಿನಲ್ಲಿ ಮೂರ್ನಾಲ್ಕು ಸೇಬು, ಬ್ರೆಡ್, ಜಾಮ್ ಇಟ್ಟುಕೊಂಡಿದ್ದೆ. ತೆಗೆದು ತಿನ್ನಲೂ ಸಹ ಆತಂಕ. ಕತ್ತಿಯನ್ನು ಕಂಕುಳಲ್ಲಿರಿಸಿ, ಅದೇ ಕೈಯಲ್ಲಿ ಟಾರ್ಚ್ ಹಿಡಿದು ಸುತ್ತಲೂ ವೈರಿಗಳನ್ನು ಗಮನಿಸುವಂತೆ, ಆ ಕತ್ತಲಲ್ಲೂ ಏನಾದರೂ ಭಯಾನಕವಾದದ್ದು ಕಾಣಿಸಿಕೊಳ್ಳುತ್ತದೆಯೇನೋ ಎಂದು ಕಾತರಿಸುತ್ತಾ ಬ್ಯಾಗಿನೊಳಗೆ ಕೈಯಾಡಿಸಿ, ಸೇಬನ್ನು ಸರಕ್ಕನೇ ಹೊರಗೆಳೆದುಕೊಂಡೆ.
ಆ ಗಾಬರಿಯ ಸಮಯದಲ್ಲಿ ಹಸಿವು, ಮಾನಸಿಕ ಒತ್ತಡ ಎಷ್ಟಿತ್ತೆಂದರೆ, ಎರಡೇ ನಿಮಿಷದಲ್ಲಿ ಮೊದಲನೆಯ ಸೇಬು ನನ್ನ ಜಠರವನ್ನು ಸೇರಿತ್ತು.
ಅಡ್ರಿನಲಿನ್ ಸತತವಾಗಿ ಸ್ಪುರಿಸಿ ನನ್ನ ದೇಹ ಸುಸ್ತಾಗುತ್ತಾ ಬಂದಿತ್ತು. ಏಕಕಾಲಕ್ಕೆ ಕಾಲುಗಳಿಗೆ ದಾಪುಗಾಲು ಹಾಕುವ ಕೆಲಸ, ಕೈಗಳಿಗೆ ಆಕ್ರಮಣವನ್ನೆದುರಿಸುವ ತವಕ, ಕಣ್ಣುಗಳಿಗೆ ಅಸಹಜವಾದದ್ದೇನಾದರೂ ಕಾಣಿಸಿಕೊಳ್ಳುತ್ತದೆಯೇನೋ ಎಂಬ ಧಾವಂತ, ಹೊಟ್ಟೆಗೋ ಬಾಯಿಯೆದುರು ಸಿಗುವ ಎಲ್ಲವನ್ನೂ ನುಂಗುವ ಕಬ್ಬನ್ನು ಅರೆಯುವ ಮಷೀನಿನಂತೆ ಲಬಲಬ ಎನ್ನುವ ಗಾಬರಿ.
ಎದೆಗೋ ನಿಮಿಷಕ್ಕೆ ನೂರು ಸಲ ಹೊಡೆದುಕೊಳ್ಳುವುದೋ, ನೂರೈವತ್ತು ಸಲ ಬಡಿದುಕೊಳ್ಳುವುದೋ ಎಂಬ ಗೊಂದಲ. ತೊಡೆಗಳಿಗೆ ನಡೆಯುವ ರಭಸಕ್ಕೆ ಬೆವರಿಳಿಸುವುದೋ, ಆಗುತ್ತಿರುವ ತಬ್ಬಿಬ್ಬುತನಕ್ಕೆ ನಡುಗುವುದೋ ಎಂಬ ಎಡಬಿಡಂಗಿತನ.
ಈ ಎಲ್ಲಾ ಹಳವಂಡಗಳ ನಡುವೆ ಕೈಯಲ್ಲಿದ್ದ ಟಾರ್ಚನ್ನು ಆನ್ ಮಾಡುವುದೇ ನನಗೆ ಮರೆತುಹೋಗಿದ್ದು ಖಂಡಿತಾ ಸತ್ಯ.
ಮುಂದುವರೆದಿದೆ……..

