ಹಾಸನ: ಹಾಸನ ತಾಲೂಕು ಬಿ ಗುಂಪಿನ ಪದವಿ ಪೂರ್ವ ಕಾಲೇಜುಗಳ 2026ನೇ ಸಾಲಿನ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪ್ರೈಡ್ ಪದವಿ ಪೂರ್ವ ಕಾಲೇಜು, ಹಾಸನ ಅದ್ಭುತ ಪ್ರದರ್ಶನ ನೀಡಿ ಗಮನಾರ್ಹ ಸಾಧನೆ ಮಾಡಿದೆ.
ಸೆಪ್ಟೆಂಬರ್ 2 ಮತ್ತು 3ರಂದು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪ್ರೈಡ್ ಕಾಲೇಜಿನ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಗುಂಪು ಕ್ರೀಡೆಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿಶೇಷವಾಗಿ ಬಾಲಕರ ಒಟ್ಟಾರೆ ಚಾಂಪಿಯನ್ಶಿಪ್, ಬಾಲಕರ ವೈಯಕ್ತಿಕ ಚಾಂಪಿಯನ್ಶಿಪ್, ಬಾಲಕಿಯರ ಒಟ್ಟಾರೆ ಚಾಂಪಿಯನ್ಶಿಪ್, ಬಾಲಕಿಯರ ವೈಯಕ್ತಿಕ ಚಾಂಪಿಯನ್ಶಿಪ್ ಹಾಗೂ ಒಟ್ಟಾರೆ ಚಾಂಪಿಯನ್ಶಿಪ್ ಸೇರಿದಂತೆ ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವುದು ಪ್ರೈಡ್ ಕಾಲೇಜಿನ ಕ್ರೀಡಾ ಕ್ಷೇತ್ರದ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.
ಅಥ್ಲೆಟಿಕ್ಸ್ನ 100 ಮೀ., 200 ಮೀ., 400 ಮೀ., 800 ಮೀ., 1500 ಮೀ., 3000 ಮೀ., 4×100 ಮೀ. ರಿಲೇ, 4×400 ಮೀ. ರಿಲೇ, ಜಾವೆಲಿನ್ ಥ್ರೋ, ಶಾಟ್ಪುಟ್, ಹ್ಯಾಮರ್ ಥ್ರೋ, ಡಿಸ್ಕಸ್ ಥ್ರೋ, ಲಾಂಗ್ ಜಂಪ್, ಹೈಜಂಪ್ ಹಾಗೂ ಟ್ರಿಪಲ್ ಜಂಪ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದಲ್ಲದೆ ವಾಲಿಬಾಲ್, ಕಬಡ್ಡಿ, ಖೋ-ಖೋ, ಥ್ರೋಬಾಲ್, ಟೆನ್ನಿಕಾಯ್ಟ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಗುಂಪು ಕ್ರೀಡೆಗಳಲ್ಲಿಯೂ ಪ್ರೈಡ್ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಈ ಯಶಸ್ಸಿಗೆ ಕಾರಣರಾದ ವಿದ್ಯಾರ್ಥಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ತರಬೇತುದಾರರು ಹಾಗೂ ಮಾರ್ಗದರ್ಶಕ ಶಿಕ್ಷಕರನ್ನು ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅಭಿನಂದಿಸಿದ್ದಾರೆ.
“ಪ್ರತಿಭೆ + ಕಠಿಣ ಪರಿಶ್ರಮ + ತಂಡದ ಮನೋಭಾವ = PRIDE” ಎಂಬ ಆಶಯದೊಂದಿಗೆ ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡೆ, ಸಂಸ್ಕೃತಿ ಮತ್ತು ಸಮಗ್ರ ವ್ಯಕ್ತಿತ್ವ ವಿಕಸನಕ್ಕೂ ಸಮಾನ ಆದ್ಯತೆ ನೀಡುತ್ತಿರುವ ಪ್ರೈಡ್ ಪದವಿ ಪೂರ್ವ ಕಾಲೇಜು, ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ, ಸಾಧನೆಗೆ ಪ್ರೇರಣೆ ಹಾಗೂ ಭವಿಷ್ಯಕ್ಕೆ ಭದ್ರ ಬುನಾದಿಯಾಗುತ್ತಿದೆ.
