ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಬರಗೂರು ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ರೈತರಿಗೆ ಬಯೋಚಾರ್ ತಯಾರಿಕೆ ಹಾಗೂ ಅದರ ಕೃಷಿ ಮಹತ್ವದ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಿ.ಸಿ. ಸಂಧ್ಯಾ ಅವರು ಭಾಗವಹಿಸಿ ಬಯೋಚಾರ್ ತಯಾರಿಸುವ ವಿಧಾನ ಹಾಗೂ ಅದರ ಉಪಯೋಗಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಕೃಷಿ ವಿದ್ಯಾರ್ಥಿಗಳಾದ ದಿವ್ಯ, ಅಮೂಲ್ಯ ಹಾಗೂ ಬಾಬಾ ಮೋನಿ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಬರಗೂರು ಗ್ರಾಮದಲ್ಲಿ ಲಭ್ಯವಿದ್ದ ಕಬ್ಬಿಣದ ಡ್ರಮ್ನ್ನು ಬಳಸಿಕೊಂಡು ಹೊಲದಲ್ಲಿ ದೊರೆಯುವ ಮೆಕ್ಕೆಜೋಳದ ಕಾಂಡ, ಒಣ ಕಡ್ಡಿಗಳು, ತೆಂಗಿನ ಚಿಪ್ಪು ಸೇರಿದಂತೆ ವಿವಿಧ ಕೃಷಿ ತ್ಯಾಜ್ಯಗಳನ್ನು ಸುಟ್ಟು ವ್ಯರ್ಥ ಮಾಡುವ ಬದಲು ಅವುಗಳನ್ನು ಬಯೋಚಾರ್ ಆಗಿ ಪರಿವರ್ತಿಸಿ ಮಣ್ಣಿಗೆ ಮರುಸೇರಿಸಬಹುದಾಗಿದೆ ಎಂದು ತಿಳಿಸಲಾಯಿತು.

ಮೊದಲಿಗೆ ಕೃಷಿ ತ್ಯಾಜ್ಯವನ್ನು ಸಂಗ್ರಹಿಸಿ ಒಣಗಿಸಿ, ಬಳಿಕ ಡ್ರಮ್ ಅಥವಾ ಗುಂಡಿಯಲ್ಲಿ ಹಾಕಿ ಕಡಿಮೆ ಆಮ್ಲಜನಕದ ಪರಿಸ್ಥಿತಿಯಲ್ಲಿ ಬಿಸಿ ಮಾಡುವ ಮೂಲಕ ಬಯೋಚಾರ್ ತಯಾರಿಸುವ ವಿಧಾನವನ್ನು ಹಂತ ಹಂತವಾಗಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ತ್ಯಾಜ್ಯವು ಸಂಪೂರ್ಣವಾಗಿ ಬೂದಿಯಾಗದಂತೆ ಬೆಂಕಿಯನ್ನು ನಿಯಂತ್ರಿಸುವುದು ಹಾಗೂ ಬಯೋಚಾರ್ ಸಿದ್ಧವಾದ ನಂತರ ಅದನ್ನು ತಂಪಾಗಿಸುವ ವಿಧಾನವನ್ನು ರೈತರಿಗೆ ಪ್ರಾಯೋಗಿಕವಾಗಿ ತೋರಿಸಲಾಯಿತು.
ತಯಾರಾದ ಬಯೋಚಾರ್ ಅನ್ನು ಕಾಂಪೋಸ್ಟ್ ಅಥವಾ ಸಾವಯವ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನಲ್ಲಿ ಕಾರ್ಬನ್ ಸಂಗ್ರಹಿಸಲು ಸಹಾಯವಾಗುತ್ತದೆ. ಅಲ್ಲದೆ, ಬಯೋಚಾರ್ನ ರಂಧ್ರಯುಕ್ತ ರಚನೆಯು ಮಣ್ಣಿನಲ್ಲಿ ನೀರು ಹಾಗೂ ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ಕೃಷಿ ತ್ಯಾಜ್ಯದ ಸದ್ಬಳಕೆಯ ಜೊತೆಗೆ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಂಧ್ಯಾ ಅವರು ವಿವರಿಸಿದರು.
ರೈತರು ತಮ್ಮ ಹೊಲದಲ್ಲೇ ಲಭ್ಯವಿರುವ ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ಬಯೋಚಾರ್ ತಯಾರಿಸಬಹುದಾಗಿದ್ದು, ಹೆಚ್ಚುವರಿ ವೆಚ್ಚವಿಲ್ಲದೆ ಮಣ್ಣಿನ ಗುಣಮಟ್ಟ ಸುಧಾರಿಸಲು ಹಾಗೂ ಸುಸ್ಥಿರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಇದು ಸಹಕಾರಿಯಾಗಿದೆ ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ 32 ಮಂದಿ ರೈತರು ಉತ್ಸಾಹದಿಂದ ಭಾಗವಹಿಸಿ ಬಯೋಚಾರ್ ತಯಾರಿಕೆ ಹಾಗೂ ಬಳಕೆಯ ಕುರಿತು ವಿವಿಧ ಪ್ರಶ್ನೆಗಳನ್ನು ಕೇಳಿದರು. ಬಯೋಚಾರ್ ಅನ್ನು ಮಣ್ಣಿಗೆ ಹೇಗೆ ಸೇರಿಸಬೇಕು ಎಂಬ ರೈತರ ಪ್ರಶ್ನೆಗೆ ಉತ್ತರಿಸಿದ ಸಂಪನ್ಮೂಲ ವ್ಯಕ್ತಿ ಜಿ.ಸಿ. ಸಂಧ್ಯಾ ಅವರು, ಸಂಪೂರ್ಣವಾಗಿ ತಯಾರಾದ ಇದ್ದಿಲನ್ನು ನೇರವಾಗಿ ಭೂಮಿಗೆ ಹಾಕದೆ, ಕಾಂಪೋಸ್ಟ್ ಅಥವಾ ಸಾವಯವ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಮಣ್ಣಿಗೆ ಸೇರಿಸಬೇಕು ಎಂದು ಸಲಹೆ ನೀಡಿದರು.
ವರದಿ : ಐ ಕೆ ಮಂಜುನಾಥ್
