ಶ್ಲೋಕ – 12
ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ।
ಈಹನ್ತೇ ಕಾಮಭೋಗಾರ್ಥಮನ್ಯಾಯೇನಾರ್ಥಸಂಚಯಾನ್ ॥೧೨॥
ಆಶಾಪಾಶ ಶತೈಃ ಬದ್ಧಾಃ ಕಾಮಕ್ರೋಧಪರಾಯಣಾಃ।
ಈಹಂತೇ ಕಾಮಭೋಗಾರ್ಥ ಅನ್ಯಾಯೇನ ಅರ್ಥಸಂಚಯಾನ್ — ನೂರಾರು ಆಸೆಗಳ ಬಲೆಯಲ್ಲಿ ಸಿಕ್ಕಿಬಿದ್ದವರು. ಹುಚ್ಚು ಹಂಬಲ-ಸಿಡುಕುಗಳಿಗೆ ತಮ್ಮನ್ನು ಮಾರಿಕೊಂಡವರು. ತೀಟೆ ತೀರಿಸಲೆಂದು ತಪ್ಪು ದಾರಿಯಿಂದ ರಾಶಿ ರಾಶಿ ಹೊನ್ನು ಬಾಚಬಯಸುವವರು.
ಇವರು ಭೋಗದ ಆಸೆಗಾಗಿ ತಮ್ಮನ್ನು ತಾವು ಆಸೆಗಳ ಪಾಶದಲ್ಲಿ ಸಿಲುಕಿ ಹಾಕಿಸಿಕೊಂಡು, ದಿಗ್ಭಂಧನದಿಂದ ಬದುಕುತ್ತಿರುತ್ತಾರೆ. ಕಾಮ ಕ್ರೋಧಗಳಿಗೆ ತಮ್ಮನ್ನು ಮಾರಿಕೊಂಡು, ಕಾಮಕ್ರೋಧ ಪರಾಯಣರಾಗಿ ಬದುಕುತ್ತಾರೆ. ಇದಕ್ಕೆ ಉತ್ತಮ ದೃಷ್ಟಾಂತ ಪೌಂಡ್ರಕ ವಾಸುದೇವ. ಆತನಿಗೆ ‘ತಾನೇ ದೇವರಾಗಬೇಕು ಎನ್ನುವ ಕಾಮ’. ಈ ಕಾಮದಿಂದಾಗಿ ಅದು ಸರಿಯಲ್ಲ ಎಂದು ತಿಳಿಹೇಳುವ ತತ್ವಜ್ಞಾನಿಗಳ ಮೇಲೆ ಕೋಪ.
ಇವರು ತಮ್ಮ ಸುಖ-ಭೋಗವನ್ನು ತೀರಿಸಿಕೊಳ್ಳಲು ಅನ್ಯಾಯ ಮಾರ್ಗದಲ್ಲಿ ದುಡ್ಡು ಸಂಗ್ರಹ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಶಾಸ್ತ್ರದಲ್ಲಿ ಬರೆದಿರುವ ವಿಷಯಗಳನ್ನು ತಮಗೆ ಬೇಕಾದಂತೆ ತಿರುಚಿಕೊಂಡು, ತಮ್ಮ ಇಷ್ಟಸಿದ್ಧಿ ಸಾಧನೆಯಲ್ಲಿ ತೊಡಗುತ್ತಾರೆ.
