ಕೊರಟಗೆರೆ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ದಸರಾ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ಈ ಕಾರ್ಯಕ್ರಮಗಳಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಹಾಗೂ ಮುಂದಿನ ಚುನಾವಣೆಯ ಆಕಾಂಕ್ಷಿ ಪಿ.ಎನ್.ಕೆ. ಕೃಷ್ಣಮೂರ್ತಿ ಅವರು ಭಾಗವಹಿಸಿ, ಗ್ರಾಮಸ್ಥರು, ಯುವಕರು ಹಾಗೂ ಮುಖಂಡರಿಗೆ ದಸರಾ ಮತ್ತು ವಿಜಯದಶಮಿಯ ಶುಭಾಶಯಗಳನ್ನು ಕೋರಿದರು.

ತಾಲ್ಲೂಕಿನ ಅಕ್ಕಿರಾಂಪುರ, ಹುಲಿಕುಂಟೆ, ದುಡ್ಡನಹಳ್ಳಿ, ಕಾಟೇನಹಳ್ಳಿ ಹಾಗೂ ಮೊರಗನಹಳ್ಳಿ ಗ್ರಾಮಗಳಲ್ಲಿ ನಡೆದ ದಸರಾ ಗಣಪತಿ ವಿಸರ್ಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅವರು, ಕಾಟೇನಹಳ್ಳಿ ಮತ್ತು ದುಡ್ಡನಹಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮಗಳನ್ನು ಮುಖಂಡರೊಂದಿಗೆ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎನ್.ಕೆ. ಕೃಷ್ಣಮೂರ್ತಿ ಅವರು, ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಗೆಲುವಿಗೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ. ಕ್ಷೇತ್ರದ ವಿವಿಧ ಗ್ರಾಮಗಳು ಹಾಗೂ ಹೋಬಳಿ ಮಟ್ಟದಲ್ಲಿ ತಂಡಗಳನ್ನು ರಚಿಸಿಕೊಂಡು ಬಿರುಸಿನ ಪ್ರಚಾರ ಕೈಗೊಳ್ಳಲಾಗುತ್ತಿದೆ. ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ಸಂಘಟಿತರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಸ್ಥಳೀಯ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಸುವ ವಿಶ್ವಾಸ
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಮೈತ್ರಿ ಮುಂದುವರಿಸುವ ಕುರಿತು ಪಕ್ಷದ ವರಿಷ್ಠರು ಚಿಂತನೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಸಹ ಮೈತ್ರಿಕೂಟದ ಮೂಲಕ ಎದುರಿಸುವ ವಿಶ್ವಾಸವಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಮುಂದಿನ ಚುನಾವಣೆಗಳನ್ನು ಎದುರಿಸಿ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.
ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಸರಳ ವ್ಯಕ್ತಿತ್ವದವರಾಗಿದ್ದು, ಅವರ ಗೆಲುವಿಗೆ ಪ್ರತಿಯೊಬ್ಬ ಮತದಾರರೂ ಬೆಂಬಲ ನೀಡಬೇಕು. ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿ, ಗೆಲುವಿಗೆ ಶ್ರಮಿಸಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದ ಅಭಿವೃದ್ಧಿಗೆ ಮೈತ್ರಿಕೂಟ ಮತ್ತಷ್ಟು ಬಲ ನೀಡಲಿದೆ. ಯುವಕರು ಹಾಗೂ ಪಕ್ಷದ ಮುಖಂಡರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಅಭ್ಯರ್ಥಿಯ ಗೆಲುವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಲೆರಾಂಪುರ ಮಠದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಅವರು ದಸರಾ ಹಬ್ಬದ ಶುಭಾಶಯಗಳನ್ನು ಕೋರಿದರು. ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆಂಪರಾಮಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಗೆಜ್ಜೆನಹಳ್ಳಿ ಜಗದೀಶ್, ಹೋಬಳಿ ಅಧ್ಯಕ್ಷ ದೇವರಾಜು, ಕರಿಯಣ್ಣ, ಬಿಎಂಸಿ ಚಂದ್ರು, ರಾಜಣ್ಣ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
