ಹಾಸನ: ಸುಲಭವಾಗಿ ಸಿಗಬಹುದಾಗಿದ್ದ ಅಧ್ಯಾಪಕ ವೃತ್ತಿಯನ್ನು ತ್ಯಜಿಸಿ ಮಲೆನಾಡಿನ ಕಾಡಂಚಿನಲ್ಲಿ ಕಷ್ಟದ ಬದುಕನ್ನು ಎದುರಿಸುತ್ತಾ ಅಲ್ಲಿನ ಸಾಮಾನ್ಯ ಜನರೊಂದಿಗೆ ಬೆರೆತು, ಅಲ್ಲಿ ತಾವು ಕಂಡುಕೊಂಡ ಅಪೂರ್ವ ಜ್ಞಾನವನ್ನು ಸಾಹಿತ್ಯದ ಮೂಲಕ ನಾಡಿಗೆ ಹಂಚಿದ ಅಪರೂಪದ ಸಂತ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಎಂದು ಲೇಖಕ ಗೊರೂರು ಶಿವೇಶ್ ತಿಳಿಸಿದರು.

ಹಾಸನದ ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ (ಧಾರವಾಡ), ಚಿತ್ಕಲಾ ಫೌಂಡೇಶನ್ (ಹಾಸನ) ಹಾಗೂ ರೂರಲ್ ಎಜುಕೇಷನಲ್ ಟ್ರಸ್ಟ್ (ನೋಂ) ವತಿಯಿಂದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮದಿನ ನೆನಪಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ತೇಜಸ್ವಿ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ
ತೇಜಸ್ವಿಯವರ ‘ಕರ್ವಾಲೊ, ಪರಿಸರದ ಕಥೆ ಮುಂತಾದ ಕೃತಿಗಳಲ್ಲಿ ಪರಿಚಯಿಸಿದ ಜನಸಾಮಾನ್ಯ ವ್ಯಕ್ತಿಗಳಾದ ಮಾರ, ಪ್ಯಾರ, ಎಂಗ್ಟ, ಮಂದಣ್ಣ ಇವೇ ಮೊದಲಾದ ಪಾತ್ರಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿ ನಿಂತಿವೆ. ಕೇವಲ ರಂಜನೆ ಮಾತ್ರವಲ್ಲದೆ ಓದುಗರಿಗೆ ಗಂಭೀರ ಪರಿಸರ ಪ್ರಜ್ಞೆಯನ್ನು ಮೂಡಿಸುತ್ತವೆ. ಕಳೆದ ಐದು ದಶಕಗಳಿಂದ ಮೂರು ತಲೆಮಾರುಗಳನ್ನು ನಿರಂತರವಾಗಿ ಪ್ರೇರೇಪಿಸಿದ ಶಕ್ತಿ ಅವರ ಬರಹಕ್ಕಿದೆ ಎಂದು ವಿಸ್ತಾರವಾಗಿ ವ್ಯಾಖ್ಯಾನಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಾಸನ ಗಂಗೋತ್ರಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಬಿ.ಎಸ್. ರವಿಕುಮಾರ್ ಮಾತನಾಡಿ ಜೀವ ಜಗತ್ತು ಕೇವಲ ಮನುಷ್ಯನಿಂದಷ್ಟೇ ಅಲ್ಲ ಸಸ್ಯ, ಪ್ರಾಣಿ, ಪಕ್ಷಿ, ಸೂಕ್ಷ್ಮಾಣು ಜೀವಿಗಳ ಪರಸ್ಪರ ಅವಲಂಬನೆಯಿಂದ ಸೃಷ್ಟಿಯಾಗಿದೆ. ಮನುಷ್ಯ ತನ್ನ ಅಹಂ ತ್ಯಜಿಸಿ ಮಾನವ ಕೇಂದ್ರಿತ ಆಲೋಚನೆಯಿಂದ ಪ್ರಕೃತಿ ಕೇಂದ್ರಿತ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಂತಾರಾಷ್ಟ್ರೀಯ ಚಿತ್ರಕಲಾವಿದರು ಶ್ರೀ ಬಿ.ಎಸ್. ದೇಸಾಯಿ ತೇಜಸ್ವಿಯವರ ಬಹುಮುಖಿ ಆಸಕ್ತಿಗಳಲ್ಲಿ ಪಕ್ಷಿ ವೀಕ್ಷಣೆ ಹಾಗೂ ಛಾಯಾಗ್ರಹಣ ಅತ್ಯಂತ ವಿಶಿಷ್ಟವಾದದ್ದು. ಸಾವಿರಾರು ಮೈಲಿ ಕ್ರಮಿಸಿ ವಲಸೆ ಬರುವ ಪುಟ್ಟ ಹಕ್ಕಿಗಳ ಜೀವನ ಚಲನೆಯನ್ನು ಅವುಗಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಸೂಕ್ಷ್ಮವಾಗಿ ದಾಖಲಿಸಿ, ಕನ್ನಡ ನಾಡಿಗೆ ಪಕ್ಷಿ ಜಗತ್ತನ್ನು ಪರಿಚಯಿಸಿದ ಹೆಗ್ಗಳಿಕೆ ಅವರದ್ದು ಎಂದರು.
ರೂರಲ್ ಎಜುಕೇಷನಲ್ ಟ್ರಸ್ಟ್ನ ಸಂಸ್ಥಾಪಕರು ಮತ್ತು ಖಜಾಂಚಿ ಈಶ್ವರಪ್ಪ ವೈ.ಹೆಚ್. ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿರಂತರ ಅಧ್ಯಯನವು ಸಮಕಾಲೀನ ಜ್ಞಾನವನ್ನು ವೃದ್ಧಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ನೆರವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಓದಿನ ಜೊತೆಗೆ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು. ತಮ್ಮಲ್ಲಿರುವ ಸೃಜನಶೀಲತೆಯನ್ನು ಅಭಿವ್ಯಕ್ತಿಸಲು ಸಿಗುವ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳ ಬೇಕು. ಕನ್ನಡ ಸಾಹಿತ್ಯ ಲೋಕದಲ್ಲಿ ತೇಜಸ್ವಿ ಒಬ್ಬ ವಿಶಿಷ್ಟ ಬರಹಗಾರರು ಗಂಭೀರ ವಸ್ತುವನ್ನು ಅವರು ರೋಚಕವಾಗಿ ಬರೆಯಬಲ್ಲರು. ರೋಚಕ ಸಂಗತಿಗಳಿಗೆ ಗಾಂಭೀರ್ಯದ ಶಿಸ್ತನ್ನು ನೀಡಬಲ್ಲರು. ಹಾಸ್ಯ ಪ್ರಜ್ಞೆಯಂತೂ ಬರವಣಿಗೆಯ ನೇಯ್ಗೆಯಲ್ಲಿಯೇ ಹಾಸು ಹೊಕ್ಕಾಗಿರುತ್ತದೆ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ಶ್ರೀ ನವೀನ್ ಕೆ.ಸಿ. ವಹಿಸಿದ್ದರು. ಗಾಯಕ ಜಿ.ಆರ್. ಶ್ರೀಕಾಂತ್ ಕನ್ನಡ ಗೀತೆ, ಕನಕದಾಸರ ಕೀರ್ತನೆ ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.
