ಶ್ಲೋಕ – 17
ಆತ್ಮಸಂಭಾವಿತಾಃ ಸ್ತಬ್ಧಾ ಧನಮಾನಮದಾನ್ವಿತಾಃ ।
ಯಜಂತೇ ನಾಮಯಜ್ಞೈಸ್ತೇ ಡಂಭೇನಾವಿಧಿಪೂರ್ವಕಮ್ ॥೧೭॥
ಆತ್ಮಸಂಭಾವಿತಾಃ ಸ್ತಬ್ಧಾಃ ಧನ ಮಾನಮ್ ಮದ ಅನ್ವಿತಾಃ ।
ಯಜಂತೇ ನಾಮಯಜ್ಞೈಃ ತೇ ಡಂಭೇನ ಅವಿಧಿ ಪೂರ್ವಕಮ್ –ತಮ್ಮ ಬಗೆಗೆಯೆ ಕೊಚ್ಚಿಕೊಳ್ಳುವವರು. ಸಿರಿ ಸಮ್ಮಾನದ ಸೊಕ್ಕಿನಿಂದ ಬೀಗಿದವರು. ಅಂಥವರೂ ಯಜ್ಞಗಳನ್ನಾಚರಿಸುತ್ತಾರೆ: ಬೂಟಾಟಿಕೆಯಿಂದ, ಶಾಸ್ತ್ರದ ಕಟ್ಟಳೆಯ ಕಟ್ಟು ಮುರಿದು.
ತಮ್ಮ ಬಗ್ಗೆ ತಮಗೇ ಹೆಗ್ಗಳಿಕೆ ಇವರಿಗೆ. “ಅವಿದ್ಯಾಯಾಂ ಅಂತರೇ ವರ್ತಮಾನಾಃ ಸ್ವಯಂ ಧೀರಾ ಪಂಡಿತಂ ಅನ್ಯಮಾನಾ” ಎನ್ನುವಂತೆ ಉಳಿದವರಿಗೆ ತಮ್ಮ ಮೇಲೆ ಗೌರವ ಇದೆಯೊ ಇಲ್ಲವೋ ಗೊತ್ತಿಲ್ಲ, ಆದರೆ ತನ್ನ ಬಗ್ಗೆ ತಾನೇ ಮಹತ್ವ ಜ್ಞಾನ ಬೆಳಸಿಕೊಂಡು ಅದರಿಂದ ಬಿಗುಮಾನದಿಂದ ಬೀಗುತ್ತಿರುತ್ತಾರೆ. ಇವರ ಈ ಬಿಗುಮಾನಕ್ಕೆ ಕಾರಣ ಜ್ಞಾನವಲ್ಲ, ಬದಲಿಗೆ ಕೈಯಲ್ಲಿರುವ ದುಡ್ಡಿನ ಮದ ಕಾರಣ; ಆ ದುಡ್ಡಿಗೋಸ್ಕರ ಜನ ಮಾಡುವ ಸಮ್ಮಾನ ಕಾರಣ. ಇವರು ಬೂಟಾಟಿಕೆಗಾಗಿ, ದೊಡ್ಡಸ್ತಿಕೆಯ ಪ್ರದರ್ಶನಕ್ಕಾಗಿ-ಯಜ್ಞ ಯಾಗಾದಿಗಳನ್ನು ಮಾಡಿಸುತ್ತಾರೆ. ಅಲ್ಲಿ ಶಾಸ್ತ್ರದ ಎಚ್ಚರವಿರುವುದಿಲ್ಲ; ಭಗವಂತ ಪ್ರೀತ್ಯರ್ಥನಾಗಲಿ ಎನ್ನುವ ಉದ್ದೇಶವಿಲ್ಲದ, ಅಂತರ್ಯಾಮಿ ಭಗವಂತನನ್ನು ಮರೆತು ಮಾಡುವ ಪೂಜೆ ಅದಾಗಿರುತ್ತದೆ.
