ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಪವಿತ್ರ ಕ್ಷೇತ್ರ ಹೇಮಗಿರಿ ಬಿಜಿಎಸ್ ಎಜುಕೇಷನ್ ಸೆಂಟರ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಹೇಮಗಿರಿ ಬಿ.ಜಿ.ಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಜೆ.ಎನ್. ರಾಮಕೃಷ್ಣೇಗೌಡ ಅವರ ನೇತೃತ್ವದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಭಕ್ತಿ ಭಾವ ಹಾಗೂ ಸಡಗರ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಜೆ.ಎನ್. ರಾಮಕೃಷ್ಣೇಗೌಡ ಅವರು ಜಗದ್ಗುರು ಶ್ರೀಕೃಷ್ಣ ಪರಮಾತ್ಮ ಭಾರತದ ಸಂಸ್ಕೃತಿಯ ನಿಜವಾದ ರಾಯಭಾರಿ. ಅವರ ಜೀವನವೇ ಒಂದು ಸಂದೇಶ ಪರಮಪೂಜ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಆಶಯದಂತೆ ಗ್ರಾಮೀಣ ಭಾಗದ ಮಕ್ಕಳಿಗೆ ಕೇವಲ ಪುಸ್ತಕದ ಶಿಕ್ಷಣವಲ್ಲ, ಗುಣಮಟ್ಟದ ಅತ್ಯುತ್ತಮ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ನೀಡುವ ಉದ್ದೇಶದಿಂದಲೇ ಬಿಜಿಎಸ್ ಶಿಕ್ಷಣ ಸಂಸ್ಥೆ ಹಗಲು-ಇರುಳು ಅವಿರತವಾಗಿ ಶ್ರಮಿಸುತ್ತಿದೆ ಈ ಕಾರ್ಯಕ್ಕೆ ಶಾಲಾ ಮಕ್ಕಳ ಪೋಷಕರು ನೀಡುತ್ತಿರುವ ಸಹಕಾರ ಅತ್ಯಮೂಲ್ಯ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಬಳ್ಳೆಕೆರೆ ಮಂಜುನಾಥ್ ಅವರು ಮಾತನಾಡಿ ಹೇಮಗಿರಿ ಶಾಖಾಮಠದ ಪ್ರಧಾನ ಕಾರ್ಯದರ್ಶಿ ಡಾ. ಜೆ.ಎನ್. ರಾಮಕೃಷ್ಣೇಗೌಡ ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿಯೇ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಆಧಾರಿತ ಹಲವು ಕಾರ್ಯಕ್ರಮಗಳನ್ನು ಬಿಜಿಎಸ್ ಸಂಸ್ಥೆ ಕೈಗೊಂಡಿದೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಮಹಾಭಾರತ, ರಾಮಾಯಣ ಹಾಗೂ ಇತಿಹಾಸ ಪುರುಷರ ಜೀವನ ಚರಿತ್ರೆಗಳನ್ನು ತಿಳಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಪೋಷಕರು ಹಾಗೂ ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ. ಕಲಿಕೆಯಲ್ಲಿ ಮಕ್ಕಳಿಗೆ ಉತ್ತಮ ನೀತಿ ಪಾಠಗಳು ಹಾಗೂ ಶ್ರೀಕೃಷ್ಣ ಲೋಕ ಕಲ್ಯಾಣಕ್ಕಾಗಿ ಮಾಡಿದ ಸಾಧನೆಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಮಕ್ಕಳಿಗೆ ಶ್ರೀಕೃಷ್ಣ ಮತ್ತು ರಾಧೆ ವೇಷ-ಭೂಷಣಗಳನ್ನು ಹಾಕುವ ಮೂಲಕ ಅವರಲ್ಲಿ ಉತ್ತಮ ಆಲೋಚನೆ ಮತ್ತು ಶ್ರೀಕೃಷ್ಣನ ಪ್ರೇರಣೆ ಮೂಡುವಂತೆ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪುಟಾಣಿ ಮಕ್ಕಳು ಆಕರ್ಷಕ ಶ್ರೀಕೃಷ್ಣ ಮತ್ತು ರಾಧೆಯ ಮನಮೋಹಕ ವೇಷಭೂಷಣಗಳನ್ನು ಧರಿಸಿ ವೇದಿಕೆ ಮೇಲೆ ಬಂದು ನೆರೆದಿದ್ದವರ ಮನಸೂರೆಗೊಂಡರು.ಕೊಳಲು ಹಿಡಿದು ಬಂದ ಬಾಲಕೃಷ್ಣ, ಬೆಣ್ಣೆ ಕದ್ದ ಕೃಷ್ಣನ ಅವತಾರಗಳು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದವು. ಕೃಷ್ಣನ ಭಕ್ತಿಗೀತೆಗಳಿಗೆ ಪುಟಾಣಿಗಳು ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.ವಿಶೇಷವಾಗಿ ಮಕ್ಕಳ ಪೋಷಕರು ಕೂಡ ರಾಧಾ-ಕೃಷ್ಣರ ವೇಷದಲ್ಲಿ ಭಾಗವಹಿಸಿ, ಕೃಷ್ಣನ ಹಾಡುಗಳಿಗೆ ಹಾಡಿ ಕುಣಿದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತುಂಬಿದರು.ಕೃಷ್ಣ-ರಾಧೆ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಂಚಿದ ಪುಟ್ಟ ಮಕ್ಕಳಿಗೆ ವೇದಿಕೆಯ ಮೇಲೆ ಪ್ರಶಸ್ತಿ, ಪ್ರಮಾಣ ಪತ್ರ ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹಕ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭಾ ನಿಕಟ ಪೂರ್ವಧ್ಯಕ್ಷೆ ಪಂಕಜಾ ಪ್ರಕಾಶ್,ಹಿರಿಯ ಪತ್ರಕರ್ತರಾದ ಬಳ್ಳೆಕೆರೆ ಮಂಜುನಾಥ್, ಕೆ ಆರ್ ನೀಲಕಂಠ,ತಾಲ್ಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಗಂಜೀಗೆರೆ ಮಹೇಶ್,ಒಕ್ಕಲಿಗ ಮಹಿಳಾ ಅಧ್ಯಕ್ಷೆ ಮೂಡನಳ್ಳಿ ಮಧು,ಪ್ರಾಂಶುಪಾಲ ಪುನೀತ್ ಸೇರಿದಂತೆ ಶಾಲಾ ಶಿಕ್ಷಕ ವೃಂದ ಇದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
