ಬೆಂಗಳೂರು:ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಎರಡು ತಿಂಗಳಲ್ಲಿ ಗರಿಷ್ಠ ಬೇಡಿಕೆ ಅವಧಿ (ಪೀಕ್ ಅವರ್ ಡಿಮಾಂಡ್) ಯಲ್ಲಿ 18 ಸಾವಿರ ಮೆಗಾವಾಟ್ ದಾಟಿದೆ. ಏಪ್ರಿಲ್ ತಿಂಗಳಲ್ಲಿ 18,500 ಮೆ.ವಾ.ಗೆ ಹೆಚ್ಚಾಗುವ ಸಾಧ್ಯತೆ ಇದೆ.
ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಮತ್ತು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕಳೆದ ಫೆಬ್ರವರಿಯಲ್ಲಿ ವಿದ್ಯುತ್ ಗರಿಷ್ಠ ಬೇಡಿಕೆ ಅವಧಿಯಲ್ಲಿ 18,350 ಮೆ.ವಾ. ತಲುಪಿದ್ದರೆ, ಮಾರ್ಚ್ ತಿಂಗಳಲ್ಲಿ 18,395 ಮೆ.ವಾ.ಗೆ ಏರಿಕೆಯಾಗಿದೆ. ಮಾ.7ರಂದು ಗರಿಷ್ಠ ವಿದ್ಯುತ್ ಬೇಡಿಕೆ 18,395 ಮೆ.ವಾ. ತಲುಪಿತ್ತು ಎಂದು ಮಾಹಿತಿ ನೀಡಿದರು.
ಕೋವಿಡ್ ಬಳಿಕ ವಿದ್ಯುತ್ ಬೇಡಿಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಗರಿಷ್ಠ ವಿದ್ಯುತ್ ಬೇಡಿಕೆ 2020-21ನೇ ಸಾಲಿನಲ್ಲಿ 14,367 ಮೆ.ವಾ. ಇದ್ದರೆ, 2021&22ರಲ್ಲಿ 14,818 ಮೆ.ವಾ., 2022-23ರಲ್ಲಿ 15,828 ಮೆ.ವಾ., 2023-24ರಲ್ಲಿ 17,220 ಮೆ.ವಾ. ಇತ್ತು. ಈ ಬಾರಿ 18,385 ಮೆ.ವಾ.ಗೆ ಏರಿಕೆಯಾಗಿದೆ. ಅದೇ ರೀತಿ ಪ್ರಸ್ತುತ ಗರಿಷ್ಠ ವಿದ್ಯುತ್ ಬಳಕೆ 357 ಮಿ.ಯೂನಿಟ್ ಇದೆ ಎಂದರು.
ಗರಿಷ್ಠ ಬೇಡಿಕೆ ಅವಧಿಯಲ್ಲಿ 2024ರ ಏಪ್ರಿಲ್ ತಿಂಗಳಲ್ಲಿ 16,985 ಮೆ.ವಾ. ಬೇಡಿಕೆ ಬಂದಿದ್ದು, ಈ ವರ್ಷ 18,294 ಮೆ.ವಾ. ತಲುಪುವ ಅಂದಾಜಿದೆ. ಅಂದರೆ ವಿದ್ಯುತ್ ಬೇಡಿಕೆಯಲ್ಲಿ ಶೇ. 8.1 ಹೆಚ್ಚಳವಾಗಲಿದೆ. ಅದೇ ರೀತಿ 2024ರ ಮೇ ತಿಂಗಳಲ್ಲಿ 16,826 ಮೆ.ವಾ. ಬೇಡಿಕೆ ಬಂದಿತ್ತು. ಈ ಬಾರಿ 17,122 ಮೆ.ವಾ.ಗೆ ಏರಿಕೆಯಾಗುವ (ಶೇ.1.8 ಹೆಚ್ಚಳ) ಅದಾಜು ಮಾಡಲಾಗಿದೆ. ಅಲ್ಲದೆ, ವಿದ್ಯುತ್ ಬಳಕೆ ಪ್ರಮಾಣ ಏಪ್ರಿಲ್ನಲ್ಲಿ 352 ಮಿ.ಯೂ. ಮತ್ತು ಮೇ ತಿಂಗಳಲ್ಲಿ 331 ಮಿ.ಯೂ. ತಲುಪುವ ನಿರೀೆಯಿದೆ ಎಂದು ವಿವರಿಸಿದರು.
ಬೇಡಿಕೆ ಪೂರೈಸಲು ಸಿದ್ಧತೆ: ರಾಜ್ಯದಲ್ಲಿ ಏರಿಕೆಯಾಗಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. 2024ರ ಡಿಸೆಂಬರ್ನಿಂದ ಮೇ ತಿಂಗಳವರೆಗೆ ಬೇಡಿಕೆಗೆ ಅನುಗುಣವಾಗಿ ಉತ್ತರ ಪ್ರದೇಶದಿಂದ 100ರಿಂದ 1,400 (ಗರಿಷ್ಠ ಬೇಡಿಕೆ ಅವಧಿಯಲ್ಲಿ) ಮೆಗಾವಾಟ್ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆಯಲಾಗುತ್ತಿದೆ. ಅದೇರೀತಿ ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ ಪಂಜಾಬ್ನಿಂದ 200ರಿಂದ 531 ಮೆ.ವಾ. ವಿದ್ಯುತ್ತನ್ನು ವಿನಿಮಯ ಆಧಾರದ ಮೇಲೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಲ್ಲದೆ, ಮಾ.1ರಿಂದ 15ರವರೆಗೆ ಕೂಡಗಿಯಲ್ಲಿರುವ ಎನ್ಟಿಪಿಸಿಯಿಂದ 310 ಮೆ.ವಾ. ಹೆಚ್ಚುವರಿ ವಿದ್ಯುತ್ ಪಡೆಯಲಾಗುತ್ತಿತ್ತು. ಮಾ.15ರಿಂದ ಇನ್ನೂ ಹೆಚ್ಚುವರಿಯಾಗಿ 100 ಮೆ.ವಾ. ಪಡೆಯಲಾಗಿದೆ. ಜತೆಗೆ ಮಾರ್ಚ್ ತಿಂಗಳಿನಿಂದ ಮೇ ಅಂತ್ಯದವರೆಗೆ ಇಂಧನ ಸುರತೆ ನೀತಿಯಡಿ ಇತರ ರಾಜ್ಯಗಳಿಂದ ಮಾಸಿಕ 1000 ಮೆ.ವಾ. ವಿದ್ಯುತ್ ಪಡೆಯಲು ಪಿಸಿಕೆಎಲ್ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದರು.
ತ್ರಿಫೇಸ್ ಪೂರೈಗೆ ಕ್ರಮ:
ರೈತರಿಗೆ ದಿನದ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗಿದೆ. ಅನೇಕ ಕಡೆಗಳಲ್ಲಿ ರೈತರ ಕೃಷಿ ಪಂಪ್ ಸೆಟ್ಗಳಿಗೆ ಸೋಲಾರ್ ವಿದ್ಯುತ್ ಒದಗಿಸಲಾಗುತ್ತಿದೆ. ಕೆಲವೆಡೆ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಲು ಸಮಸ್ಯೆಯಾಗದಂತೆ ಬೆಳಗ್ಗೆ ಮತ್ತು ಸಂಜೆ ವೇಳೆ ವಿದ್ಯುತ್ ಪೂರೈಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ (ತೋಟದ ಮನೆಗಳು ಸೇರಿ) ನೋಡಿಕೊಳ್ಳಲು ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಸಿಂಗಲ್ ಫೇಸ್ ವಿದ್ಯುತ್ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
