ಮನಸು ಮೃದಂಗ
(ಲೇಖನಗಳ ಸಂಕಲನ)
ಜ್ಞಾನೋದಯ ಎಂದರೆ ಏನು?
ದಾಂಪತ್ಯ ಜೀವನದಲ್ಲಿ ಇಲ್ಲದ ದೇವರ ಮೊರೆ ಹೊಕ್ಕು, ಹಾಗೆಯೇ ಎಲ್ಲಾ ವೈದ್ಯರನ್ನು ಕಂಡು ಕೆಲ ವರ್ಷಗಳು ಕಳೆದ ನಂತರ ಈ ದಂಪತಿಗಳಿಗೆ ಗಂಡು ಮಗುವಿಗೆ ಜನ್ಮವಾಯಿತು. ಇವರಿಗೆ ಈ ಮಗು ಕಣ್ಮಣಿ, ಇವರು ಕಣ್ಣಲ್ಲಿ ಕಣ್ಣಿಟ್ಟು ಸಾಕಿದಂತ ಮಗು. ಸಹಜವಾಗಿ ಮೊಂಡುತನ, ಬಂಡತನ, ಹಟಮಾರಿತನ, ತುಂಟತನಗಳಲ್ಲೆವು ಈ ಮಗುವಿಗೆ ಅಂಟಿಕೊಂಡಿದೆ. ಆತನಿಗೆ ಆರು ವರ್ಷ, ಪೋಷಕರಿಗೆ ಶಾಲೆಗೆ ಸೇರಿಸುವ ಆತುರ. ಆದರೆ ಶಾಲೆ ಎಂದೊಡನೆ ತನ್ನ ಮೊಂಡು ಹಾಗೂ ಹಟಮಾರಿತನದಿಂದ ಪೋಷಕರು ಅವನನ್ನು ಶಾಲೆಗೆ ಸೇರಿಸುವ ಸಾಹಸದಿಂದ ದೂರವೇ ಉಳಿದುಬಿಟ್ಟರು. ಅಸಹಕಾರರಾದ ಪೋಷಕರಿಗೆ ಮಗನ ವಯಸ್ಸಿನವರು ಶಾಲೆಗೆ ಹೋಗುವದನ್ನು ಕಂಡಾಗ ಕಣ್ಣೀರು ದುಮುಕುತಿತ್ತು.
ಯಾವ ದೇವರು ಅಥವ ವೈದ್ಯರು ಇವನ ಕಿರುಚಾಟ ಮತ್ತು ರಂಪಾಟ ನಿಲ್ಲಿಸಲಾಗಲಿಲ್ಲ. ಮಗುವಿಗೆ ಎಂಟು ವರ್ಷ ತುಂಬಿತು, ಪೋಷಕರಿಗೆ ಸಂದಿಗ್ದ ಸ್ಥಿತಿ, ಬೈದರೆ ಮಗನನ್ನು ಕಳೆದುಕೊಳ್ಳುವ ಭಯ, ಮುದ್ದಿಕ್ಕಿದರೆ ಶಾಲೆಗೆ ಹೋಗುವುದಿಲ್ಲ ಎನ್ನುವ ಭಯ. ಕೆಲವು ತಿಂಗಳು ಕಳೆದವು, ಮತ್ತೆ ಅದೇ ಸ್ಥಿಥಿ.
ಈ ಸಮಯದಲ್ಲಿ ನಿರಾಷದಾಯಕ ಪೋಷಕರಿಗೆ ಅಚ್ಚರಿ ಕಾದಿತ್ತು, “ಅಪ್ಪಾ, ಶಾಲೆಯ ದಾರಿ ಯಾವದು?” ಪೋಷಕರಿಗೆ ಸ್ವರ್ಗ ಮೂರೇ ಗೇಣು, ಅವರ ಆನಂದಕ್ಕೆ ಪರಿವೆ ಇರಲಿಲ್ಲ, ಖುಷಿಯೊ ಖುಷಿ. ಅಂದು ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ, ಅಪ್ಪ ತನ್ನ ಮಿತ್ರರನ್ನು ಕರೆದು ಔತಣ ಎರ್ಪಡಿಸಿದ್ದ, ಮಿತ್ರರಿಗೆ ಇವನ ವರ್ತನೆಯನ್ನು ಕಂಡು ಪರಮಾಶ್ಚರ್ಯ, “ಏನಯ್ಯಾ ನಿನ್ನ ಖುಷಿಗೆ ಕಾರಣ?” ಮಿತ್ರನೊಬ್ಬ ಕೇಳಲು “ಇಲ್ಲಿಯವರಿಗೆ ಶಾಲೆಯ ಗಂಧ ಕಾಣದ ನನ್ನ ಮಗನಿಗೆ ಶಾಲೆ ಇದೆಯೆನ್ನುವ ಜ್ಞಾನ ಬಂತಲ್ಲಾ ಅನ್ನೋ ಕಾರಣಕ್ಕೆ ಈ ಸಂಭ್ರಮ”. ಮುಂದೆ ಆತ ಶ್ರೇಷ್ಟ ವಿಜ್ಞಾನಿ ಆದ. ವಿಧ್ಯಾರ್ಥಿಗೆ ಕಿರು ಜ್ಞಾನೋದಯವಷ್ಟೇ ಸಾಕು ಶ್ರೇಷ್ಠನಾಗಲು. ಓದುಗರೆ ಈಗ ತಿಳಯಿತಲ್ಲ “ಜ್ಞಾನೋದಯ“ದ ಅರ್ಥ.

ಭಕ್ತನು ತನ್ನ ಕಿರು ನೋಟದಲ್ಲೆ ಪರಮಾತ್ಮನಾದ ಶಿವನನ್ನು ನೋಡಿ ಆತ್ಮಾನಂದನಾದ ಹಾಗೆಯೆ ವಿಧ್ಯಾರ್ಥಿಯೊಬ್ಬ ಶಾಲೆಯ ದಿಕ್ಕನ್ನು ಕೇಳಿ ವಿಜ್ಞಾನಿಯಾದ. ಇಂತ್ತದ್ದೆ ನನ್ನಲ್ಲಿ ಆದ ಅನುಭವವನ್ನು ಹಂಚುಕೊಳ್ಳುತ್ತೇನೆ. ಸ್ನೇಹಿತ ದಂಪತಿಗಳು ವೈದ್ಯಕೀಯ ಕಾರ್ಯಗಾರ ಹಾಗು ಸಂಕೀರ್ಣ ನಿಮಿತ್ತ ಹೊರ ರಾಜ್ಯಕ್ಕೆ ಹೋಗಿದ್ದರು. ಇವರಿಗೆ ಒಬ್ಬಳೇ ಮಗಳು. ಈಕೆ ಬುದ್ದಿವಂತೆ, ವಿದ್ಯಾವಂತೆ ಮತ್ತು ಪ್ರತಿಭಾವಂತೆ. ತಾಂತ್ರಿಕ ಕಾಲೇಜಿನಲ್ಲಿ ಆರನೇ ಸೆಮಿಸ್ಟರ್ ಓದುತ್ತ್ತಿರುವ ವಿದ್ಯಾರ್ಥಿ.
ಆಕೆಯ ಪರೀಕ್ಷೆ ಇದ್ದ ಕಾರಣ ತನ್ನ ಅಜ್ಜಿಯ ಜೊತೆ ಬಿಟ್ಟು ಪ್ರಯಾಣ ಬೆಳಸಿದ್ದರು. ಇಂದಿನ ವಿಧ್ಯಾರ್ಥಿಗಳು ಪೋಷಕರನ್ನೆ ಮರೆಯುವ ಉದಾಹರಣೆಗಳು ಇವೆ, ಆದರೆ ಮೊಬೈಲ್ ಫೋನ್ ಮರೆಯುವ ವಿಧ್ಯಾರ್ಥಿಗಳು ಅತ್ಯಲ್ಪ. ತಾಂತ್ರಿಕ ಬದುಕಿನಲ್ಲಿ ಜೀವ ಬಂಧನಿಷ್ಟೇಗಳ ಮರೆತು ಯಂತ್ರಗಳ ಜೊತೆ ಬೆರತು ಹೋಗಿದ್ದಾರೆ. ಇಲ್ಲೂ ಅದೇ ಆಗಿದ್ದು, ಬೆಳಿಗ್ಗೆ ಫೋನ್ ಮತ್ತು ರಾತ್ರಿ ಫೋನ್. ಅಮ್ಮನಿಗೆ ಅಚ್ಚರಿ ಕಾದಿತ್ತು. ಅದೇನಂದರೆ ಮಗಳಿಗೆ ಕೂತಿದ್ದ ಜಾಗದಲ್ಲೇ ಎಲ್ಲಾ ಆಗಬೇಕು ಅಂತಹದರಲ್ಲಿ ಮಗಳ ಫೋನ್ “ಅಮ್ಮಾ, ದಾಲ್ ಮಾಡುವುದು ಹೇಗೆ?” ಅಮ್ಮನ ಸಂತೋಷ ಅಷ್ಟಿಷ್ಠಲ್ಲ.
ಅಡುಗೆಮನೆಯೇ ಅರಿಯದ ಈಕೆಗೆ ಎಲ್ಲಿಂದ ಜ್ಞಾನೋದಯವಾಯಿತು?. ಇವಳಿಗೆ ಪುಸ್ತಕ ಮತ್ತು ಓದಷ್ಟೇ ತಿಳಿದಿದ್ದರಿಂದ ಅಡಿಗೆ ಮನೆ ಒಳ ಹೋಗುವ ಸಂಕಲ್ಪ ಬಂದಿದ್ದಾದರು ಹೇಗೆನ್ನುವ ವಿಚಾರವನ್ನ ಬದಿಗೆ ಒತ್ತಿ, ಒಂದೇ ಸಮನೆ ಫೋನಿನ್ನಲ್ಲಿ ‘ದಾಲ್’ ಮಾಡುವ ವಿಧಾನವನ್ನ ಹೇಳತೊಡಗಿದಳು. ಮಗಳು ಬುದ್ದಿವಂತೆಯಾದರೂ, ಅವಳು ಓದತ್ತಿರುವಾಗ ಗಲಾಟೆ ಮಾಡುವಹಾಗಿಲ್ಲ, ಮಾತನಾಡುವ ಹಾಗಿಲ್ಲ. ತಿಳಿ ಹೇಳುವ ಹಾಗಿಲ್ಲ.
ಹಾಗೆನಾದರು ಮಾಡಿದರೆ ಒಮ್ಮಲೆ ಎಲ್ಲಿಲ್ಲದ ಸಿಟ್ಟು, ತಾಳ್ಮೆ ಕಿಂಚಿತ್ತು ಇಲ್ಲ, ಕೈಗೆ ಸಿಕ್ಕಿದ ವಸ್ತುಗಳನ್ನು ಬಿಸಾಕಿ ಚೆಲ್ಲಾಪಿಲ್ಲಿ ಮಾಡುವಳು. ಪೋಷಕರಿಗೆ ನುಂಗಲಾರದ ಬಿಸಿ ತುಪ್ಪ, ಹೊಡೆಯಲು ಆಗವುದಿಲ್ಲ, ಬಯ್ಯೋಹಾಗಿಲ್ಲ, ಓಲೈಸಿದರೆ ನಾಟಕವೆನ್ನುವರು. ಎಲ್ಲವನ್ನು ಪೋಷಕರು ಸಹಿಸಿಕೊಳ್ಳಬೇಕು.
ಈ ಯಂತ್ರಯುಗದಲ್ಲಿ ವಿದ್ಯೆಯು ವಾಣಿಜ್ಯ ಹಾಗು ವ್ಯಾಪಾರ ದೃಷ್ಟಿಯಿಂದ ಮತ್ತು ಶೈಕ್ಷಣಿಕ ಗುಣಮಟ್ಟಗಳಿಂದ ವಿಧ್ಯಾರ್ಥಿಗಳ ಮನಗಳು ಅಲ್ಲೋಲ ಕಲ್ಲೋಲವಾಗಿಬಿಟ್ಟಿವೆ. ಪೋಷಕರ ಆತಂಕಗಳು ಸಹಜವಾಗಿಯೇ ಇಮ್ಮಡಿಸುತ್ತಿವೆ. ಇದರಿಂದಾಗಿ ಕೌಟಂಬಿಕ ವ್ಯವೆಸ್ಥೆಗಳು ಗಲಿಬಿಲಿಗೊಂಡಿವೆ. ಇವನ್ನೆಲ್ಲವನ್ನು ಗಮನಿಸಿದಾಗ ಮಗಳೆನಿಸದವಳು ಭಕ್ಷ್ಯ ಖಾದ್ಯ ಅಡಿಗೆ ಮಾಡದಿದ್ದರು ಉಪ್ಪಿಟ್ಟಾದರು ಮಾಡಲೆಂದು ಆಶಿಸೋಣ.
ಜಾಗತೀಕರಣ, ಸಬಲೀಕರಣ, ಸಮಾನಕರಣ, ಉಧಾರೀಕರಣ ಮತ್ತು ತಂತ್ರಜ್ಞಾನ ಹಾಗೆಯೇ ವೃತ್ತಿನಿರತಳಾಗಿರುವುದರಿಂದ ಹೆಣ್ಣಾಗಿ ಹೆಣ್ಣಿನ ಕರ್ತವ್ಯಗಳು ಕಡಿಮೆಯಾಗುತ್ತಿವೆ. ಇದರಿಂದಾಗಿ ಬಾಂಧವ್ಯದ ಭಂದನಗಳು ಬೆಸೆಯುವುದರಲ್ಲಿ ತಿಣುಕಾಡುತ್ತಿವೆ. ಮನೋ ನ್ಯೂನತೆಗಳು ಮತ್ತು ಖಿನ್ನತೆಗಳು ದ್ವಿಗುಣಗೊಳ್ಳುತ್ತಿವೆ.

ನಮ್ಮ ದೇಶ ಋಷಿಗಳ ಬೀಡು. ಮಹಾಭಾರತ, ರಾಮಾಯಣ, ಪುರಾಣ, ವೇದ ಹಾಗು ಉಪನಿಷತ್ಗಳ ತವರೂರು. ಸಾಧು ಸಂತರ ದಿವ್ಯ ಶಕ್ತಿಯ ನಾಡು. ವಿಜ್ಞಾನಿಗಳ, ಸಂಶೋಧಕರ ಮತ್ತು ಸಾಹಿತಿಗಳ ಸಂಪದ್ಬರಿತ ದೇಶ. ಆದರೆ ಮೌಡ್ಯ, ಅಜ್ಞಾನ ಮತ್ತು ಮೂರ್ಖತನಗಳ ತಾಣವಾಗಿದೆ ಎನ್ನುವುದೇ ಅರಿಯಲಾಗದ ಒಗಟಾಗಿ ಪ್ರಜ್ಞಾವಂತನಿಗೆ ಕಾಡುತ್ತಿದೆ. ಜ್ಞಾನದಿಂದಲೆ ಎಲ್ಲವನ್ನು ಸರಿಪಡಿಸಬಹುದೆನ್ನವ ವಾದ ಸುಳ್ಳು.
ಪುಸ್ತಕವೇ ಓದಬೇಕಂತಿಲ್ಲ, ಪುಸ್ತಕವಿಲ್ಲದೆ ಜ್ಞಾನೋದಯದಿಂದ ಪರಿವರ್ತನೆಗೊಳ್ಳಬಹುದು. ಉದಹಾರಣೆಗೆ ಮಹಾನ್ ಬುದ್ದ, ರಾಜಭೋಗ ಮತ್ತು ರಾಜರ್ಯಾದೆಗಳಲ್ಲೆ ಬೆಳದ ಸಿಧ್ಧಾರ್ಥ ಕ್ಷಣ ಕಾಲ ಹೊರ ಬಂದು ಧೀನ ಬಡತನ, ರೋಗರುಜಿನ ಮತ್ತು ಅಂಗವಿಕಲರನ್ನ ನೋಡಿ ಸರ್ವಪರಿತ್ಯಾಗಿಯಾಗಿ ಪರಿಹಾರ ಹುಡಕಲೆತ್ನಿಸಿ ಸಿಗದೆ ಭೋದಿ ಮರದ ಕೆಳಗೆ ಕುಳಿತು ಧ್ಯಾನಿಸಿ ಜ್ಞಾನೋದಯವಾಗಿ “ದುಖಃದ ಮೂಲ ಆಸೆ”ಯೆನ್ನುವ ಕಾರಣವನ್ನು ಕಂಡುಕೊಂಡು ಬುದ್ದನಾದನೆನ್ನುವುದು ಇತಿಹಾಸ.
ಬುದ್ದನಿಗೆ ಬರೆಯಲು ಮತ್ತು ಓದಲು ಬಂದರೂ ಗ್ರಂಥಗಳನ್ನು ಅತೀ ಓದುತ್ತಿದ್ದ ಹಾಗು ಗ್ರಂಥಗಳನ್ನು ಬರೆದಿದ್ದನೆನ್ನುವ ಯಾವುದೇ ಸಾಕ್ಷಾಧಾರಗಳು ಇಂದಿಗೂ ಇಲ್ಲ. ಅವನ ಜೀವಮಾನದ ಶೇಕಡ ಅರವತರಷ್ಟು ಮೌನದಲ್ಲೆ ಕಳೆದನೆನ್ನುವುದು ಒಂದು ವಿಶೇಷ. ಇದರಿಂದ ಬುದ್ದನು ಪ್ರವಚಿಸಿದ್ದು ತೀರಾ ವಿರಳ. ಹೀಗಿದ್ದರೂ ಬುದ್ದನು ಸಾವಿರ ಸಾವಿರ ಅನುಯಾಯಿಗಳನ್ನು ಸಂಪಾದಿಸಿದ್ದ. ಇವನ ಅನುಯಾಯಿಗಳು ಕಳ್ಳನಿಂದ ಹಿಡದು ಚಕ್ರವರ್ತಿಯವರೆಗು ಇದ್ದರು ಎನ್ನುವುದು ಅವನ ಧ್ಯಾನಕ್ಕೆ ಸಾಕ್ಷಿ.
ಬುದ್ದನ ಮೌನವೇ ತನ್ನ ಜಾಣ ಅನುಯಾಯಿಗಳಿಗೆ ಉತ್ತರವೆನಿಸಿತ್ತು. ಅಷ್ಟತತ್ವ ಮಹಾಯಾನವನ್ನು ಬುಧ್ಧ ಬರೆಯಲಿಲ್ಲ, ಬರೆದಿದ್ದು ಮಹಾನ್ ಚಕ್ರವರ್ತಿಯಾದ ನಾಗಾರ್ಜನನು. ಪ್ರಸ್ತುಥದಲ್ಲಿ ಈ ಗ್ರಂಥವು ಪ್ರಪಂಚದ ಲಕ್ಷ ಲಕ್ಷ ಜನರಿಗೆ ದಾರಿ ದೀಪವಾಗಿದೆ. ಕಾರಣವಿಷ್ಟೇ, ಮಹಾಯಾನ ಗ್ರಂಥದ ದಾರಿ “ಪ್ರೀತಿ ಸೌಹಾರ್ದ ಪಥ (highway to peace)”
ನಮ್ಮ ನಿಮ್ಮ ಪಕ್ಕದಲ್ಲಿ ಇಂತಹಾ ಪರಿವರ್ತನಾ ವಿಸ್ಮಯಗಳು ಗೋಚರಿಸುತ್ತಿರುತ್ತವೆ. ದಡ್ಡನೆಂಬಾ ವಿಧ್ಯಾರ್ಥಿಯು ಬುದ್ದಿವಂತನಾಗವುದು. ಕೆಟ್ಟವನೆಂದುಕೊಂಡ ವ್ಯಕ್ತಿ ಒಮ್ಮಿಂದೊಮ್ಮೆಲೆ ಒಳ್ಳೆಯವನಾಗುವುದು. ಜಿಪುಣನೊಬ್ಬ ಮಹಾನ್ ಧಾನಿಯಾಗುವುದು. ಸೇವೆ ಅರಿಯದವನೊಬ್ಬ ಸೇವಾ ಮನೋಭಾವವನ್ನು ಬೆಳಸಿಕೊಳ್ಳುವುದು. ಸಾಹಿತ್ಯವನ್ನೇ ಪ್ರಶ್ನಿಸುವನೊಬ್ಬ ಸಾಹಿತ್ಯ ಕಲೆಯನ್ನು ರೂಢಿಸಿಕೊಳ್ಳುವುದು. ಹೀಗೆಯೇ ಅನೇಕ ವೈರುತ್ಯಗಳು ನಿಜ, ಆದರೆ ಪರಿವರ್ತನೆ ಎನ್ನುವದು ಮನೋ ವಿಕಾಸದ ಹಾದಿಗೆ ದಾರಿ ಆಗಲೆಂದು ಬಯಸೋಣ………..
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ


[…] https://vicharavisthara.com/manasu-mrudhanga-dr-a-m-nagesh-6/ ಜ್ಞಾನೋದಯ ಎಂದರೆ […]