ಕೊರಟಗೆರೆ:– ತಾಲೂಕಿನ ಮಾವತ್ತೂರು ವ್ಯವಸಾಯ ಸೇವಾ ಸಹಕಾರ ಸಂಘದ (VSSN) ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಆಡಳಿತ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡು, ಮಾತಿನ ಚಕಮಕಿ ಹಾಗೂ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ಪರಿಸ್ಥಿತಿ ನಿಯಂತ್ರಿಸಲು ಕೋಳಾಲ ಪೊಲೀಸ್ ಠಾಣೆಯ ಪಿಎಸ್ಐ ಅಭಿಷೇಕ್ ಹಾಗೂ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಸಂಘದಲ್ಲಿ ಸಾವಿರಕ್ಕೂ ಅಧಿಕ ರೈತ ಸದಸ್ಯರಿದ್ದು, ಈ ಭಾಗದ ರೈತರಿಗೆ ಬೆಳೆ ಸಾಲ, ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ವಿವಿಧ ಕೃಷಿ ಸೌಲಭ್ಯಗಳನ್ನು ಒದಗಿಸುವ ಪ್ರಮುಖ ಸಹಕಾರ ಸಂಸ್ಥೆಯಾಗಿದೆ. ಆದರೆ ಆಡಳಿತ ಮಂಡಳಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಹಾಗೂ ನಿರ್ದೇಶಕರ ರಾಜೀನಾಮೆಯಿಂದ ಸಂಘದ ಆಡಳಿತದಲ್ಲಿ ಗೊಂದಲ ಉಂಟಾಗಿದೆ ಎಂದು ರೈತರು ದೂರಿದರು.
ಸಂಘದ 13 ನಿರ್ದೇಶಕರ ಪೈಕಿ ಆರು ಮಂದಿ ಕಳೆದ ವರ್ಷವೇ ರಾಜೀನಾಮೆ ನೀಡಿದ್ದು, ಆಡಳಿತ ಮಂಡಳಿಯಲ್ಲಿ ಅಸ್ಥಿರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ಲೆಕ್ಕಪತ್ರ, ಸಾಲ ವಿತರಣೆ ಹಾಗೂ ಆಡಳಿತದ ಕಾರ್ಯವೈಖರಿ ಕುರಿತು ಸದಸ್ಯರು ಪ್ರಶ್ನೆಗಳನ್ನು ಎತ್ತಿದರು.
*ದಾಖಲೆಗಳಿವೆ ಎಂದು ಆರೋಪ*
ಮಾಜಿ ಅಧ್ಯಕ್ಷ ಧನಂಜಯ್ ಅವರ ಬಣದ ಸದಸ್ಯರು ಸಂಘದ ಕಾರ್ಯದರ್ಶಿ ತಿಮ್ಮಯ್ಯ ಅವರ ಕಾರ್ಯವೈಖರಿ ಕುರಿತು ಗಂಭೀರ ಆರೋಪಗಳನ್ನು ಮಾಡಿದರು.
ತಿಮ್ಮಯ್ಯ ಅವರು ಕಳೆದ ಮೂರು ತಿಂಗಳಿಂದ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ವೇತನ ಪಡೆದಿದ್ದಾರೆ. ರೈತರ ಹೆಸರಿನಲ್ಲಿ ಬೆಳೆ ಸಾಲ ಸೃಷ್ಟಿಸಿ, ಪಹಣಿಗಳಲ್ಲಿ ಸಾಲದ ವಿವರ ನಮೂದಿಸಲಾಗಿದೆ. ಆದರೆ ಸಂಬಂಧಪಟ್ಟ ರೈತರಿಗೆ ಸಾಲದ ಹಣ ತಲುಪಿಲ್ಲ ಎಂದು ಆರೋಪಿಸಿದರು.
ಈ ವ್ಯವಹಾರಗಳಲ್ಲಿ ಕಾರ್ಯದರ್ಶಿ ತಿಮ್ಮಯ್ಯ ಹಾಗೂ ಅವರ ಪುತ್ರ, ಸಂಘದ ಕಂಪ್ಯೂಟರ್ ಆಪರೇಟರ್ ಯಶ್ವಂತ್ ಯಾದವ್ ಅವರು ಶಾಮೀಲಾಗಿದ್ದಾರೆ ಎಂಬ ಆರೋಪವೂ ಸಭೆಯಲ್ಲಿ ಕೇಳಿಬಂತು. ಸಹಕಾರ ಇಲಾಖೆಯ ಎಆರ್ ಮತ್ತು ಡಿಆರ್ ಅಧಿಕಾರಿಗಳಿಂದಲೂ ಅಕ್ರಮಗಳಿಗೆ ಬೆಂಬಲ ದೊರೆತಿದೆ ಎಂದು ಆರೋಪಿಸಿದ ಸದಸ್ಯರು, ಇದಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇರುವುದಾಗಿ ತಿಳಿಸಿದರು.
*ಆರೋಪಗಳನ್ನು ತಳ್ಳಿಹಾಕಿದ ಹಾಲಿ ಬಣ*
ಮಾಜಿ ಅಧ್ಯಕ್ಷರ ಬಣದ ಆರೋಪಗಳನ್ನು ಹಾಲಿ ಬಣದ ಸದಸ್ಯರು ತೀವ್ರವಾಗಿ ಖಂಡಿಸಿದರು. ಕಾರ್ಯದರ್ಶಿ ತಿಮ್ಮಯ್ಯ ಅವರು ಯಾವುದೇ ಅಕ್ರಮವಾಗಿ ಹಣ ಪಡೆದಿಲ್ಲ. ಬದಲಾಗಿ ಕಳೆದ ಎರಡು ತಿಂಗಳಿಂದ ವೇತನ ಪಡೆಯದೇ ಸಂಘದ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಸಂಘದಲ್ಲಿ ನಡೆದಿರುವ ಸಾಲ ಮಂಜೂರಾತಿ ಸೇರಿದಂತೆ ಹಲವು ವ್ಯವಹಾರಗಳು ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿಯೇ ನಡೆದಿವೆ. ಆಗ ಅಧಿಕಾರದಲ್ಲಿದ್ದವರೇ ಇದೀಗ ಕಾರ್ಯದರ್ಶಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸೋಲಿನ ಭೀತಿಯಿಂದ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಹಾಲಿ ಬಣದ ಸದಸ್ಯರು ಪ್ರತಿಯಾಗಿ ಆರೋಪಿಸಿದರು.
ಇದರಿಂದಾಗಿ ಸಭೆಯಲ್ಲಿ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ತೀವ್ರಗೊಂಡಿತು. ಪರಿಸ್ಥಿತಿ ಕೈಮೀರುವ ಹಂತ ತಲುಪಿದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
*ತನಿಖೆ ಬಳಿಕ ಸತ್ಯಾಂಶ ಹೊರಬರಲಿ*
ಸಭೆಯ ನಡವಳಿ ಪುಸ್ತಕಕ್ಕೆ ಸಹಿ ಮಾಡಿ ಸಭೆ ಮುಕ್ತಾಯಗೊಳಿಸಬೇಕು ಎಂದು ಒಂದು ಬಣ ಒತ್ತಾಯಿಸಿತು. ಮತ್ತೊಂದು ಬಣ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸಂಘದ ವ್ಯವಹಾರಗಳ ಕುರಿತು ಸಂಪೂರ್ಣ ತನಿಖೆ ನಡೆಸುವವರೆಗೆ ಸಭೆಯನ್ನು ಮುಂದೂಡಬೇಕು ಎಂದು ಪಟ್ಟು ಹಿಡಿಯಿತು.
ಇದರಿಂದ ಸಭೆಯ ಮುಂದಿನ ಕಾರ್ಯಕಲಾಪಗಳ ಬಗ್ಗೆಯೂ ಒಮ್ಮತ ಮೂಡಲಿಲ್ಲ. ಅಂತಿಮವಾಗಿ ಗೊಂದಲದ ವಾತಾವರಣದಲ್ಲಿ ಸಭೆಯನ್ನು ಮುಂದುವರಿಸಲು ಸಾಧ್ಯವಾಗದೆ ಅರ್ಧಕ್ಕೆ ಮೊಟಕುಗೊಂಡಿತು.
ಸಭೆಯಲ್ಲಿ ಭಾಗವಹಿಸಿದ್ದ ರೈತರು, ಎರಡು ಬಣಗಳ ಅಧಿಕಾರದ ಕಿತ್ತಾಟದಲ್ಲಿ ರೈತರೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ ಸಕಾಲದಲ್ಲಿ ಬೆಳೆ ಸಾಲ, ಗೊಬ್ಬರ ಮತ್ತು ಬಿತ್ತನೆ ಬೀಜ ಸೇರಿದಂತೆ ಅಗತ್ಯ ಸೌಲಭ್ಯಗಳು ದೊರೆಯುವಂತೆ ಸಂಘದ ಆಡಳಿತದಲ್ಲಿ ಸ್ಥಿರತೆ ತರಬೇಕು ಎಂದು ಒತ್ತಾಯಿಸಿದರು.
ಸಂಘದ ಸಾಲ ವಿತರಣೆ, ಲೆಕ್ಕಪತ್ರಗಳು ಹಾಗೂ ಸಭೆಯಲ್ಲಿ ಕೇಳಿಬಂದ ಹಣಕಾಸು ವ್ಯವಹಾರಗಳ ಆರೋಪಗಳ ಕುರಿತು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆರೋಪಗಳು ಸತ್ಯವೆಂದು ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಹಾಗೂ ಇಲಾಖಾ ನಿಯಮಗಳಂತೆ ಕ್ರಮ ಕೈಗೊಂಡು, ರೈತ ಸದಸ್ಯರ ಹಿತ ಕಾಪಾಡಬೇಕು ಎಂದು ರೈತರು ಆಗ್ರಹಿಸಿದರು.
ಆರೋಪ–ಪ್ರತ್ಯಾರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಸ್ಪಷ್ಟವಾಗಬೇಕಿದ್ದು, ಸಂಘದ ಆಡಳಿತದಲ್ಲಿ ಉಂಟಾಗಿರುವ ಗೊಂದಲಕ್ಕೆ ಸಹಕಾರ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.
– ಶ್ರೀನಿವಾಸ್ ಕೊರಟಗೆರೆ.
