ಕೊರಟಗೆರೆ:– ಗ್ರಾಮಗಳಲ್ಲಿ ಶಾಂತಿ, ಸೌಹಾರ್ದತೆ, ಧರ್ಮಜಾಗೃತಿ ಹಾಗೂ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಯಬೇಕಾದರೆ ಧಾರ್ಮಿಕ ಕೇಂದ್ರಗಳು, ದೇವಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿಯಾಗಬೇಕು.
ದೇವಾಲಯಗಳ ರಕ್ಷಣೆ ಮತ್ತು ಅಭಿವೃದ್ಧಿ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕೋಳಾಲ ಹೋಬಳಿಯ ಮಾಜಿ ಜಿ.ಪಂ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಹೇಳಿದರು.
ಕೋಳಾಲ ಹೋಬಳಿಯ ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗ್ರಿಹಳ್ಳಿ ಹಾಗೂ ದೊಡ್ಡಪಾಲನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಅವರು, ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ದೇವಾಲಯಗಳ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದರು.
*ದೇವಾಲಯಗಳ ಅಭಿವೃದ್ಧಿಗೆ ₹2 ಲಕ್ಷ ದೇಣಿಗೆ..*
ಸಿಂಗ್ರಿಹಳ್ಳಿ ಗ್ರಾಮದ ಶ್ರೀ ಮುದ್ದು ಮಾರಮ್ಮ ಮತ್ತು ಫಳಾಕು ಮಾರಮ್ಮ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಪಿ.ಎನ್. ಕೃಷ್ಣಮೂರ್ತಿ ಅವರು ₹1 ಲಕ್ಷ ನಗದು ದೇಣಿಗೆ ನೀಡಿದರು. ಇದೇ ಸಂದರ್ಭದಲ್ಲಿ ಎಸ್. ಗೊಲ್ಲಹಳ್ಳಿ ಗ್ರಾಮದ ದೇವಾಲಯದ ಅಭಿವೃದ್ಧಿಗೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನಂತರ ದೊಡ್ಡಪಾಲನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯಕ್ಕೆ ₹1 ಲಕ್ಷ ದೇಣಿಗೆ ನೀಡಿ, ದೇವಾಲಯದ ಅಭಿವೃದ್ಧಿ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿದರು. ಎರಡು ಗ್ರಾಮಗಳ ದೇವಾಲಯಗಳ ಅಭಿವೃದ್ಧಿಗೆ ಒಟ್ಟು ₹2 ಲಕ್ಷ ನೆರವು ನೀಡಿದರು.
*ಗೌರಿ ಹಬ್ಬಕ್ಕೆ ಮಹಿಳೆಯರಿಗೆ ಬಾಗಿನ*
ಗೌರಿ ಹಬ್ಬದ ಅಂಗವಾಗಿ ಎರಡೂ ಗ್ರಾಮಗಳಲ್ಲಿ ನೂರಾರು ಮಹಿಳೆಯರಿಗೆ ಬಾಗಿನ ವಿತರಿಸಲಾಯಿತು. ಹಬ್ಬದ ಸಂಭ್ರಮದ ನಡುವೆ ನಡೆದ ಬಾಗಿನ ವಿತರಣಾ ಕಾರ್ಯಕ್ರಮಕ್ಕೆ ಗ್ರಾಮೀಣ ಮಹಿಳೆಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಮಹಿಳೆಯರು ಪಿ.ಎನ್. ಕೃಷ್ಣಮೂರ್ತಿ ಅವರನ್ನು ಆತ್ಮೀಯವಾಗಿ ಹರಸಿ, ನೀವು ಮುಂದಿನ ಶಾಸಕರಾಗಿ ಬರಬೇಕು ಎಂದು ಆಶಯ ವ್ಯಕ್ತಪಡಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
*ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ*
ನಂತರ ಮಾತನಾಡಿದ ಪಿ.ಎನ್. ಕೃಷ್ಣಮೂರ್ತಿ, ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಭಾಗಿತ್ವ ಅತ್ಯಂತ ಮುಖ್ಯ. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಿರುವ ಬಸ್ಗಳ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
*2028ರಲ್ಲಿ ಸಾಮಾನ್ಯ ಕ್ಷೇತ್ರವಾದರೆ ಕೊರಟಗೆರೆಯಿಂದ ಸ್ಪರ್ಧೆ*
ತಮ್ಮ ರಾಜಕೀಯ ಭವಿಷ್ಯದ ಬಗ್ಗೆಯೂ ಮಾತನಾಡಿದ ಅವರು, ಕೊರಟಗೆರೆ ವಿಧಾನಸಭಾ ಕ್ಷೇತ್ರ ಪ್ರಸ್ತುತ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. 2028ರ ವೇಳೆಗೆ ಕ್ಷೇತ್ರ ಸಾಮಾನ್ಯ ಕ್ಷೇತ್ರವಾದರೆ ಇದೇ ಕೊರಟಗೆರೆಯಿಂದ ಸ್ಪರ್ಧಿಸುವ ಉದ್ದೇಶವಿದೆ. ನಿಮ್ಮ ಮನೆ ಮಗನನ್ನು ಆಶೀರ್ವದಿಸಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಕೊರಟಗೆರೆ ಕ್ಷೇತ್ರದ ರೈತರು, ಬಡವರು ಹಾಗೂ ಯುವಕರ ಬದುಕಿನಲ್ಲಿ ಬದಲಾವಣೆ ತರಬೇಕು ಎಂಬುದು ತಮ್ಮ ಆಶಯವಾಗಿದೆ. ಉದ್ಯೋಗ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸುಧಾರಣೆ ತರಲು ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯೊಂದಿಗೆ ಯುವಕರಿಗೆ ಉದ್ಯೋಗಾವಕಾಶಗಳು, ಬಡವರಿಗೆ ಉತ್ತಮ ಆರೋಗ್ಯ ಸೇವೆ ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು ಎಂಬುದು ತಮ್ಮ ಕನಸಾಗಿದೆ ಎಂದು ಹೇಳಿದರು.
ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿರದೆ ಗ್ರಾಮೀಣ ಜನರನ್ನು ಒಗ್ಗೂಡಿಸುವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗುವ ಕೇಂದ್ರಗಳಾಗಿವೆ. ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳ ಅಭಿವೃದ್ಧಿಗೆ ಗ್ರಾಮಸ್ಥರು ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಬರೀಶ್ ಅಭಿಮಾನಿ ಸಂಘದ ಮಾಜಿ ಅಧ್ಯಕ್ಷ ಪರಮೇಶ್, ಮಾವತ್ತೂರು ಮಂಜುನಾಥ್, ಮಲ್ಲಣ್ಣ, ನಾಗರಾಜು, ಈಶ್ವರ್ , ಕಾಂಗ್ರೆಸ್ ಮುಖಂಡ ರಂಗಣ್ಣ, ಕಿರಣ್ ಕುಮಾರ್, ಕಾಮರಾಜು, ಗಿರಿಜಮ್ಮ, ಕಾಂತಣ್ಣ, ರಂಗನಾಥ್ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
– ಶ್ರೀನಿವಾಸ್ ಕೊರಟಗೆರೆ.
