ಕೊರಟಗೆರೆ: ಗೌರಿ ಹಬ್ಬದ ಅಂಗವಾಗಿ ಕೋಳಾಲ ವ್ಯಾಪ್ತಿಯ ಎರಡು ಗ್ರಾಮಗಳ 300ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೆ. ಕೃಷ್ಣಮೂರ್ತಿ ಬಾಗಿನ ನೀಡಿ ಹಾರೈಸಿದರು.
ಕೊರಟಗೆರೆ ತಾಲ್ಲೂಕಿನ ಕೋಳಾಲ ವ್ಯಾಪ್ತಿಯ ಸಿಂಗ್ರಿಹಳ್ಳಿ, ಎಸ್.ಗೊಲ್ಲಹಳ್ಳಿ ಹಾಗೂ ದೊಡ್ಡಪಾಲನಹಳ್ಳಿ ಗ್ರಾಮಗಳ ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿಗಳಿಗೆ ಪಿ.ಎನ್.ಕೆ. ಕೃಷ್ಣಮೂರ್ತಿ ಧನಸಹಾಯ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವಸ್ಥಾನಗಳು ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತಮ್ಮ ಮೊದಲ ಆದ್ಯತೆ ಎಂದು ಹೇಳಿದರು.

“ಒಂದು ಗ್ರಾಮದಲ್ಲಿ ದೇವಸ್ಥಾನವಿದ್ದರೆ ಆ ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ. ಅದೇ ಗ್ರಾಮದಲ್ಲಿ ಶಾಲೆಯಿದ್ದರೆ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಜ್ಞಾನ ಬೆಳೆಯುತ್ತದೆ. ಹೀಗಾಗಿ ದೇವಸ್ಥಾನಗಳು ಹಾಗೂ ಶಾಲೆಗಳ ಅಭಿವೃದ್ಧಿಗೆ ನನ್ನಿಂದಾಗುವ ಸಂಪೂರ್ಣ ಸಹಕಾರ ನೀಡುತ್ತೇನೆ” ಎಂದು ತಿಳಿಸಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೊರಟಗೆರೆಯಿಂದ ಎಲೆರಾಂಪುರ ಮಾರ್ಗವಾಗಿ ಬಸ್ ಸಂಪರ್ಕ ಕಲ್ಪಿಸುವ ಕುರಿತು ಸಚಿವ ಬೈರತಿ ಸುರೇಶ್ ಅವರೊಂದಿಗೆ ಚರ್ಚಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಗೌರಿ ಹಬ್ಬದ ಅಂಗವಾಗಿ 300ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಬಾಗಿನ ವಿತರಿಸಿ ಶುಭ ಹಾರೈಸಿದ ಅವರು, ಗ್ರಾಮಸ್ಥರೊಂದಿಗಿನ ತಮ್ಮ ಬಾಂಧವ್ಯ ಮುಂದುವರಿಯಲಿದೆ ಎಂದು ಹೇಳಿದರು.
“ಚುನಾವಣೆ ಬಂದಾಗ ಮಾಡೋಣ ಎನ್ನುವುದಕ್ಕಿಂತ, ನಾವು ಹುಟ್ಟಿ ಬೆಳೆದ ಗ್ರಾಮಗಳಿಗೆ ಹಾಗೂ ನಮ್ಮನ್ನು ಬೆಳೆಸಿದ ಜನರಿಗೆ ನಮ್ಮಿಂದಾಗುವ ಸಹಾಯವನ್ನು ಮಾಡೋಣ” ಎಂದು ಪಿ.ಎನ್.ಕೆ. ಕೃಷ್ಣಮೂರ್ತಿ ಹೇಳಿದರು.

2028ರಲ್ಲಿ ಅವಕಾಶ ನೀಡುವಂತೆ ಮನವಿ
ತಮ್ಮ 25 ವರ್ಷಗಳ ರಾಜಕೀಯ ಜೀವನದಲ್ಲಿ ಕೋಳಾಲ ತಮ್ಮ ಭವಿಷ್ಯಕ್ಕೆ ಅವಕಾಶ ನೀಡಿದ ಸ್ಥಳವಾಗಿದ್ದು, ಇಲ್ಲಿನ ಜನರ ಪ್ರೀತಿ ಹಾಗೂ ಆಶೀರ್ವಾದವನ್ನು ಎಂದಿಗೂ ಮರೆಯುವುದಿಲ್ಲ ಎಂದು ಕೃಷ್ಣಮೂರ್ತಿ ಹೇಳಿದರು.
“2028ರಲ್ಲಿ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಬಂದರೆ ನನಗೂ ಒಂದು ಅವಕಾಶ ನೀಡಿ. ನಿಮ್ಮೊಂದಿಗೆ ಸೇರಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡೋಣ” ಎಂದು ಮನವಿ ಮಾಡಿದರು.
ಪರಮೇಶ್ವರ್ಗೆ ಸಲಹೆ
ಕೊರಟಗೆರೆ ಕ್ಷೇತ್ರದ ಜನರು ಡಾ. ಜಿ. ಪರಮೇಶ್ವರ್ ಅವರಿಗೆ ಮೂರು ಬಾರಿ ಶಾಸಕರಾಗುವ ಅವಕಾಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬುದು ತಮ್ಮ ಹಾರೈಕೆ ಎಂದು ಕೃಷ್ಣಮೂರ್ತಿ ಹೇಳಿದರು.
ಕ್ಷೇತ್ರದಲ್ಲಿನ ಕೆಲವು ಅಧಿಕಾರಿಗಳ ಕಾರ್ಯವೈಖರಿಯಿಂದ ಡಾ. ಜಿ. ಪರಮೇಶ್ವರ್ ಅವರಿಗೆ ಕೆಟ್ಟ ಹೆಸರು ಬಾರದಂತೆ ಅಧಿಕಾರಿಗಳ ಕಾರ್ಯವೈಖರಿಯನ್ನು ಸರಿಪಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

“ತಿಂಗಳಿಗೆ ಒಂದು ಬಾರಿಯಾದರೂ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಇಡೀ ರಾಜ್ಯದ ಜವಾಬ್ದಾರಿ ಅವರ ಮೇಲಿದೆ ಎಂಬುದು ನಮಗೆ ಗೊತ್ತಿದೆ. ಆದರೆ ಕ್ಷೇತ್ರದ ಕಡೆಗೂ ಸ್ವಲ್ಪ ಗಮನ ಹರಿಸಬೇಕು. ಇದು ಆಗ್ರಹವಲ್ಲ, ಮಾಧ್ಯಮಗಳ ಮೂಲಕ ನೀಡುತ್ತಿರುವ ಸಲಹೆ” ಎಂದು ಹೇಳಿದರು.
ಗ್ರಾಮಸ್ಥರ ಮೆಚ್ಚುಗೆ
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾವತೂರು ಮಂಜುನಾಥ್ ಮಾತನಾಡಿ, ಪಿ.ಎನ್.ಕೆ. ಕೃಷ್ಣಮೂರ್ತಿ ಅವರು ಗ್ರಾಮಗಳ ದೇವಸ್ಥಾನಗಳ ಅಭಿವೃದ್ಧಿಗೆ ಸಹಾಯ ಮಾಡುತ್ತಿರುವುದು ಸಂತೋಷದ ವಿಚಾರ. ಗ್ರಾಮಗಳ ಸಮಸ್ಯೆಗಳಿಗೆ ಸ್ಪಂದಿಸುವ ಇಂತಹ ವ್ಯಕ್ತಿಗಳ ಅಗತ್ಯವಿದೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಜನಪರ ಕೆಲಸಗಳನ್ನು ಮುಂದುವರಿಸಲಿ ಎಂದು ಆಶಿಸಿದರು.
ದೊಡ್ಡಪಾಲನಹಳ್ಳಿ ಗ್ರಾಮದ ಮಾಜಿ ಉಪಾಧ್ಯಕ್ಷ ಕಿರಣ್ ಮಾತನಾಡಿ, ಗ್ರಾಮದ ದೇವಸ್ಥಾನದ ಅಭಿವೃದ್ಧಿಗೆ ಧನಸಹಾಯ ನೀಡಿರುವುದು ಸಂತೋಷ ತಂದಿದೆ. ಗ್ರಾಮಗಳ ಅಭಿವೃದ್ಧಿಗೆ ಇನ್ನಷ್ಟು ಸಹಕಾರ ದೊರೆಯಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮುಖಂಡರ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಮೇಶ್, ಕಾಂಗ್ರೆಸ್ ಮುಖಂಡ ರಂಗಣ್ಣ, ಸೀಗೆಪಾಳ್ಯ ಮಲ್ಲಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು, ಈಶ್ವರ್, ಕೇಬಲ್ ಕಾಂತಣ್ಣ, ಗಿರೀಶ್ ಸೇರಿದಂತೆ ಪಿ.ಎನ್.ಕೆ. ಕೃಷ್ಣಮೂರ್ತಿ ಅವರ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
