ತುಮಕೂರು: ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬಂತೆ ಯಾರು ಧರ್ಮವನ್ನು ರಕ್ಷಿಸುತ್ತಾನೋ ಆತನನ್ನು ಧರ್ಮ ರಕ್ಷಿಸುತ್ತದೆ,ತಂದೆ ತಾಯಿಗಳು ಮಕ್ಕಳಿಗೆ ಹುಟ್ಟಿನಿಂದಲೇ ವೀರಶೈವ ಧರ್ಮ,ಪರಂಪರೆ,ಆಚರಣೆ,ಲಿಂಗಪೂಜೆ,ಭಸ್ಮಧಾರಣೆ ಇತ್ಯಾದಿಗಳನ್ನು ತಿಳಿಸಿಕೊಟ್ಟು ಆಚರಣೆಗೆ ತಂದಾಗಲೇ ವೀರಶೈವ ಧರ್ಮ ಬೆಳೆಯುವುದು,ಫ್ಯಾಷನ್ ಯುಗದಲ್ಲಿ ವಿಭೂತಿ ಧರಿಸುವುದೇ ಕಷ್ಟವಾಗಿದೆ ಮಕ್ಕಳಿಗೆ ದೇವರಮನೆಗೆ ಹೋದಾಗ ಮೊದಲು ವಿಭೂತಿ ಭಸ್ಮವನ್ನು ಧರಿಸಲು ತಿಳಿಸಬೇಕು,ಯಾರು ಧರ್ಮದ ಹಾದಿಯಲ್ಲಿ ನಡೆಯುತ್ತಾನೋ ಆತನನ್ನು ಭಗವಂತ ಕೈಹಿಡಿಯುತ್ತಾನೆ ಎಂದು ಬೆಳ್ಳಾವಿಯ ಕಾರದ ಮಠದ ಅಧ್ಯಕ್ಷರಾದ ಶ್ರೀವೀರಬಸವಸ್ವಾಮೀಜಿ ತಿಳಿಸಿದರು.
ಸ್ವಾಮೀಜಿಗಳು ಜಯನಗರದಲ್ಲಿರುವ ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ(ರಿ) ಆಶ್ರಯದಲ್ಲಿ ನೂತನ ವೀರಶೈವ ವಧು-ವರರ ಅನ್ವೇಷಣಾ ವೇದಿಕೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಆರ್.ಎಸ್.ವೀರಪ್ಪದೇವರು ಮಾತನಾಡುತ್ತಾ ಮಕ್ಕಳಿಗೆ ಧರ್ಮದ ಬಗ್ಗೆ ಧರ್ಮದ ತಳಹದಿಯ ಬಗ್ಗೆ ವಚನಕಾರರು,ಮಠಾಧೀಶರು,ಆಚಾರ ವಿಚಾರಗಳ ಬಗ್ಗೆ ತಿಳಿಸಿದಾಗ ಅವರು ಎಂದೂ ತಪ್ಪು ಮಾಡಲಾರರು,ಒಬ್ಬ ವ್ಯಕ್ತಿ ತಪ್ಪು ಮಾಡಿದಾಗ ಅದು ನ್ಯಾಯಾಲಯದಲ್ಲಿ ಸಾಬೀತು ಆದಾಗ ಆತನಿಗೆ ಶಿಕ್ಷೆ ಆಗುತ್ತದೆ ಆದರೆ ಧರ್ಮವನ್ನು ತಿಳಿದುಕೊಂಡು ಧರ್ಮದ ಹಾದಿಯಲ್ಲಿ ನಡೆದಾಗ ಆತ ತಪ್ಪು ಮಾಡಲು ಅವಕಾಶವೇ ಇಲ್ಲದಾಗುತ್ತದೆ,ಪ್ರಸ್ತುತ ಒಂದು ಗಂಡಿಗೆ ಹೆಣ್ಣು ಸಿಗುವುದು,ಹೆಣ್ಣಿಗೆ ಗಂಡು ಸಿಗುವುದು ತೀರಾ ತ್ರಾಸದಾಯಕವಾಗಿದೆ,ಅದಕ್ಕೆ ಒಂದು ವೇದಿಕೆಯನ್ನು ಸೃಷ್ಠಿಸಬೇಕೆಂಬುದು ಎಲ್ಲರ ಅಭಿಪ್ರಾಯವಾಗಿತ್ತು.
ಈ ನಿಟ್ಟಿನಲ್ಲಿ ಇಂದು ವೀರಶೈವ ವಧು-ವರರ ಅನ್ವೇಷಣಾ ವೇದಿಕೆಯನ್ನು ಪ್ರಾರಂಭಿಸಿದ್ದೇವೆ ತಂದೆ ತಾಯಿಗಳು ಮದುವೆ ವಯಸ್ಸಿಗೆ ಬಂದ ತಮ್ಮ ಮಕ್ಕಳ ವಿವರಗಳನ್ನು ಈ ವೇದಿಕೆಯಲ್ಲಿ ನೋಂದಣಿ ಮಾಡಿದರೆ ನಾವು ಸಹಾಯ ಮಾಡುತ್ತೇವೆ,ವೇದಿಕೆ ಬೆಳೆಯಲು ಎಲ್ಲರ ಸಹಕಾರ ಅತ್ಯಂತ ಮುಖ್ಯ ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಆರ್.ಶಿವಶಂಕರ್ ರವರು ನಾವು ಕಳೆದ 2 ವರ್ಷಗಳ ಹಿಂದೆ ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ(ರಿ) ಪ್ರಾರಂಭಿಸಿದೆವು,ನಂತರ ಮಹಿಳಾ ಘಟಕ,ಈಗ ವಧು-ವರರ ಅನ್ವೇಷಣಾ ವೇದಿಕೆಯನ್ನು ಪ್ರಾರಂಭಿಸಿದ್ದೇವೆ ಒಂದು ಕಡೆ ಧರ್ಮ ಪ್ರಸಾರ ಇನ್ನೊಂದು ಕಡೆ ಸಂಘಟನೆ,ಮತ್ತೊಂದು ಕಡೆ ಗಂಡು ಹೆಣ್ಣು ಹೆತ್ತ ತಂದೆ ತಾಯಿಗಳ ಹೊರೆ ಕಡಿಮೆ ಮಾಡಿ ಯೋಗ್ಯ ವರ,ವಧುವನ್ನು ಹುಡುಕಿಕೊಟ್ಟು ಉತ್ತಮ ಸಂಬಂಧಕ್ಕೆ ಬೆಸುಗೆ ಹಾಕುವುದು ನಮ್ಮ ಗುರಿ,ಈಗಾಗಲೇ ಮನೆ ಮನೆಗಳಲ್ಲಿ ಶರಣಗೋಷ್ಠಿಗಳನ್ನು ನಡೆಸುತ್ತಾ ಧರ್ಮ ಪ್ರಸಾರ ಮಾಡುತ್ತಿದ್ದೇವೆ,ವಚನಕಾರರು,ಶಿವಪೂಜೆ,ಲಿಂಗ,ಭಸ್ಮ,ಬಿಲ್ವಪತ್ರೆ ಹೀಗೆ ಧರ್ಮದ ಎಲ್ಲ ಪ್ರಾಕಾರಗಳನ್ನು ಎಲ್ಲರಿಗೂ ತಿಳಿಸುತ್ತಾ ಮುಖ್ಯವಾಗಿ ಯುವ ಜನಾಂಗ ಧರ್ಮದ ಹಾದಿ ಬಿಡದಂತೆ ಅವರಿಗೆ ಉತ್ತಮ ಮಾರ್ಗವನ್ನು ತೋರಿಸುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮಾಜಿ ಮೇಯರ್ ಶ್ರೀಮತಿಗೀತಾರುದ್ರೇಶ್,ಶ್ರೀಮತಿ ಸೌಭಾಗ್ಯ, ಪುಷ್ಪ, ಶ್ರೀಮತಿ ಕೆ.ಆರ್.ಮಂಜುಳಾ, ಪಾಲನೇತ್ರ, ಮೃತ್ಯುಂಜಯಪ್ಪ, ಮಂಜಣ್ಣ, ಹೆಚ್.ಎಂ.ರವೀಶಯ್ಯ, ಪ್ರಸನ್ನಕುಮಾರ್, ಶಿವಕುಮಾರ್, ಪ್ರೇಮಾರಾಧ್ಯ, ಶಾಂತರಾಜು, ಮೋಹನ್, ಬಿ.ವಿ.ದ್ವಾರಕನಾಥ್, ಜಯಕುಮಾರ್, ಮಹದೇವಯ್ಯ ಮುಂತಾದವರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
