ಬೆಂಗಳೂರು, 26 ಸೆಪ್ಟೆಂಬರ್ 2026: ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ), ಐಸೆಕ್ಟ್ ಇಂಡಿಯಾ ಸಹಯೋಗದೊಂದಿಗೆ ಪ್ರಥಮ ಆವೃತ್ತಿಯ ಸಮಗ್ರ 2026 – ಕರ್ನಾಟಕ ಸಿಎಸ್ಆರ್ ಮತ್ತು ಸೋಷಿಯಲ್ ಇಂಪ್ಯಾಕ್ಟ್ ಸಮಾವೇಶವನ್ನು ಆಯೋಜಿಸಿವೆ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಸಹಭಾಗಿತ್ವದ ಮಾದರಿಗಳನ್ನು ರೂಪಿಸಲು ಸರ್ಕಾರ, ಕಾರ್ಪೊರೇಟ್ ವಲಯ, ಸಿಎಸ್ಆರ್ ಮುಖ್ಯಸ್ಥರು, ಕೈಗಾರಿಕೆಗಳು, ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಪರಿಣಾಮಕಾರಿ ಸಂಸ್ಥೆಗಳನ್ನು ಈ ಸಮಾವೇಶವು ಒಂದೇ ವೇದಿಕೆಯಡಿ ತರಲಿದೆ.
ಬೆಂಗಳೂರಿನ ರ್ಯಾಡಿಸನ್ ಬ್ಲೂ ಏಟ್ರಿಯಾದಲ್ಲಿ “ಸಿಎಸ್ಆರ್ ಪಾಲುದಾರಿಕೆಗಳ ಮೂಲಕ ಕರ್ನಾಟಕದ ಅಭಿವೃದ್ಧಿ ಭವಿಷ್ಯವನ್ನು ಒಟ್ಟಾಗಿ ರೂಪಿಸುವುದು” ಎಂಬ ವಿಷಯದಡಿಯಲ್ಲಿ ನಡೆಯುವ ಈ ಸಮಾವೇಶವು, ಸಿಎಸ್ಆರ್ ಅನ್ನು ಕೇವಲ ಪ್ರತ್ಯೇಕ ಯೋಜನೆಗಳಿಗೆ ಸೀಮಿತಗೊಳಿಸದೆ, ಅಳೆಯಬಹುದಾದ ಮತ್ತು ವಿಸ್ತರಿಸಬಹುದಾದ ದೊಡ್ಡ ಮಟ್ಟದ ಪರಿಣಾಮ ಬೀರುವ ಸಹಭಾಗಿತ್ವಗಳನ್ನು ನಿರ್ಮಿಸುವುದರ ಮೇಲೆ ಗಮನ ಕೇಂದ್ರೀಕರಿಸಲಿದೆ.
ಕೌಶಲ್ಯಗಳು, ಉದ್ಯೋಗಾವಕಾಶ, ಜೀವನೋಪಾಯ ಮತ್ತು ಕಟ್ಟಕಡೆಯ ವ್ಯಕ್ತಿಯನ್ನೂ ಒಳಗೊಳ್ಳುವಿಕೆಯ ಮೇಲೆ ಕೇಂದ್ರೀಕೃತವಾದ ಕಾರ್ಯತಂತ್ರದ ಪ್ರಮುಖ ಘೋಷಣೆಗಳು ಸಮಗ್ರ 2026ರ ಪ್ರಮುಖ ಆಕರ್ಷಣೆಯಾಗಿರಲಿವೆ.
ಜೆನ್ಪ್ಯಾಕ್ಟ್ ಮತ್ತು ಐಸೆಕ್ಟ್ ಇಂಡಿಯಾ ಸಂಸ್ಥೆಗಳು ನಿಪುಣ ಕರ್ನಾಟಕಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಆಸಕ್ತಿ ಅಭಿವ್ಯಕ್ತಿ (ಇಓಐ) ಘೋಷಿಸಲು ಮುಂದಾಗಿದ್ದು, ಕರ್ನಾಟಕದ ಭವಿಷ್ಯದ ಕೌಶಲ್ಯ ಮತ್ತು ಉದ್ಯೋಗಾವಕಾಶ ವ್ಯವಸ್ಥೆಯಲ್ಲಿ ಕಾರ್ಪೊರೇಟ್ ಸಿಎಸ್ಆರ್ ಪಾಲ್ಗೊಳ್ಳುವಿಕೆಗೆ ಇದು ಉತ್ತಮ ಅವಕಾಶ ಕಲ್ಪಿಸಲಿದೆ.
ಡಿಜಿಟಲ್ ಕೌಶಲ್ಯಗಳು, ಯುವಜನತೆಯ ಸಬಲೀಕರಣ ಮತ್ತು ತಂತ್ರಜ್ಞಾನ ಆಧಾರಿತ ಕಲಿಕೆಗೆ ಒತ್ತು ನೀಡುವ ಉದ್ದೇಶದೊಂದಿಗೆ, ಮೊಟೊರೊಲಾ ಮೊಬಿಲಿಟಿ ಇಂಡಿಯಾ ಕೂಡ ನಿಪುಣ ಕರ್ನಾಟಕಕ್ಕೆ ಬೆಂಬಲ ವ್ಯಕ್ತಪಡಿಸಿ ಇಒಐ ಘೋಷಿಸಲು ಯೋಜಿಸಿದೆ. ಮೊಟೊರೊಲಾ ಮೊಬಿಲಿಟಿ ಇಂಡಿಯಾ ಮತ್ತು ಐಸೆಕ್ಟ್ ಇಂಡಿಯಾ ಸಂಸ್ಥೆಗಳು ಈ ಹಿಂದೆ ಬೆಂಗಳೂರಿನಲ್ಲಿ ಡಿಜಿಟಲ್ ಸಾಕ್ಷರತೆ, ಕೌಶಲ್ಯಾಭಿವೃದ್ಧಿ ಮತ್ತು ಯುವ ಸಬಲೀಕರಣಕ್ಕಾಗಿ ಮೊಟೊರೊಲಾ ಐಸೆಕ್ಟ್ ಲರ್ನ್ಎಕ್ಸ್ ಯೋಜನೆ ಮೂಲಕ ಜಂಟಿಯಾಗಿ ಕಾರ್ಯನಿರ್ವಹಿಸಿದ್ದವು.
ಮತ್ತೊಂದು ಮಹತ್ವದ ಘೋಷಣೆಯಾಗಿ ಹಕ್ದರ್ಶಕ್ ಮತ್ತು ಐಸೆಕ್ಟ್ ಇಂಡಿಯಾ ಸಂಸ್ಥೆಗಳು ಕೈಜೋಡಿಸುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕದಾದ್ಯಂತ 1,00,000 ಫಲಾನುಭವಿಗಳನ್ನು ತಲುಪುವ ಮಹತ್ವಾಕಾಂಕ್ಷೆಯನ್ನು ಹೊಂದಿವೆ. ಕೌಶಲ್ಯ, ಜೀವನೋಪಾಯ, ಉದ್ಯೋಗಾವಕಾಶ ಮತ್ತು ಸಮುದಾಯ ಸಂಪರ್ಕದಲ್ಲಿ ಐಸೆಕ್ಟ್ ಹೊಂದಿರುವ ಸಾಮರ್ಥ್ಯವನ್ನು ಹಾಗೂ ಸಾಮಾಜಿಕ ಯೋಜನೆಗಳ ಜೋಡಣೆ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಕಟ್ಟಕಡೆಯ ಸಮುದಾಯದ ಸೌಲಭ್ಯ ಒದಗಿಸುವಲ್ಲಿ ಹಕ್ದರ್ಶಕ್ ಹೊಂದಿರುವ ಅಪಾರ ಅನುಭವವನ್ನು ಈ ಪಾಲುದಾರಿಕೆ ಒಗ್ಗೂಡಿಸಲಿದೆ.
ಈ ಕುರಿತು ಮಾತನಾಡಿದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಿಇಒ ಸಂಜೀವ್ ಕುಮಾರ್ ಗುಪ್ತಾ ಅವರು, “ಸಿಎಸ್ಆರ್ ಕೇವಲ ಯೋಜನೆಗಳಿಗೆ ಧನಸಹಾಯ ನೀಡುವುದಕ್ಕೆ ಸೀಮಿತವಾಗಿರದೆ, ದೊಡ್ಡ ಪ್ರಮಾಣದಲ್ಲಿ ಸ್ಪಷ್ಟ ಮತ್ತು ಅಳೆಯಬಹುದಾದ ಬದಲಾವಣೆಯನ್ನು ಸೃಷ್ಟಿಸಬೇಕು. ಭಾರತದ ಜಿಡಿಪಿಗೆ ಕರ್ನಾಟಕವು ಶೇ. 9.2 ರಿಂದ 9.5 ರಷ್ಟು ಕೊಡುಗೆ ನೀಡುತ್ತದೆ. ಆದರೆ, ದೇಶದ ಒಟ್ಟು ಸಿಎಸ್ಆರ್ ನಿಧಿಯಲ್ಲಿ ಕೇವಲ ಶೇ. 8 ರಿಂದ 8.5 ರಷ್ಟು ಮಾತ್ರ ರಾಜ್ಯಕ್ಕೆ ಬರುತ್ತಿದೆ. ಇದು ಕಾರ್ಪೊರೇಟ್ ಸಂಸ್ಥೆಗಳು ರಾಜ್ಯದಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆ ತೋರಲು ಇರುವ ಸ್ಪಷ್ಟ ಅವಕಾಶವಾಗಿದೆ. ಕೆಲಸಗಳು ಪುನರಾವರ್ತನೆಯಾಗುವುದನ್ನು ತಪ್ಪಿಸಿ, ಪರಿಣಾಮವನ್ನು ಇಮ್ಮಡಿಗೊಳಿಸಲು ಕಾರ್ಪೊರೇಟ್, ಸರ್ಕಾರ ಮತ್ತು ಸಂಸ್ಥೆಗಳನ್ನು ವಲಯವಾರು ಸಮಗ್ರ ವಿಧಾನದ ಮೂಲಕ ಒಗ್ಗೂಡಿಸುವುದು ಮುಖ್ಯವಾಗಿದೆ. ಅಂತಿಮವಾಗಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಪ್ರಭಾವ—ಇವು ಸಿಎಸ್ಆರ್ನ ಮೂರು ಮುಖ್ಯ ಆಧಾರಸ್ತಂಭಗಳಾಗಬೇಕು. ನಾವು ಎಷ್ಟು ಹಣ ವಿನಿಯೋಗಿಸುತ್ತೇವೆ ಎನ್ನುವುದಕ್ಕಿಂತ ಸಮುದಾಯಗಳಲ್ಲಿ ಶಾಶ್ವತ ಬದಲಾವಣೆ ತರಲು ಅದನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತೇವೆ ಎಂಬುದು ಮುಖ್ಯ. ಕೈಗಾರಿಕೆಗಳು, ಫೌಂಡೇಶನ್ಗಳು, ಅನುಷ್ಠಾನ ಪಾಲುದಾರರು ಮತ್ತು ನೇರ ಫಲಾನುಭವಿಗಳನ್ನು ಒಂದೇ ಸೂರಿನಡಿ ತರುವ ಸಮಗ್ರ 2026 ಸರಣಿಯ ಮೊದಲ ಕಾರ್ಯಕ್ರಮವನ್ನು ಐಸೆಕ್ಟ್ ಇಂಡಿಯಾ ಮುನ್ನಡೆಸುತ್ತಿರುವುದು ಸಂತಸ ತಂದಿದೆ. ಈ ಸಂಸ್ಥೆಗಳು ತಳಮಟ್ಟದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮುಂದಾಗಿರುವುದು ಸ್ವಾಗತಾರ್ಹ” ಎಂದರು.
ಐಸೆಕ್ಟ್ ಇಂಡಿಯಾದ ನಿರ್ದೇಶಕರು ಹಾಗೂ ಸ್ಕೋಪ್ ಗ್ಲೋಬಲ್ ಸ್ಕಿಲ್ಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಸಿದ್ಧಾರ್ಥ್ ಚತುರ್ವೇದಿ ಅವರು ಮಾತನಾಡಿ, “ಕೌಶಲ್ಯ ತರಬೇತಿ ಎಂದರೆ ಕೇವಲ ಕಲಿಸುವುದಷ್ಟೇ ಅಲ್ಲ, ಅದು ಅರ್ಥಪೂರ್ಣ ಉದ್ಯೋಗ, ಸುಸ್ಥಿರ ಜೀವನೋಪಾಯ ಮತ್ತು ಆರ್ಥಿಕ ಪಾಲ್ಗೊಳ್ಳುವಿಕೆಗೆ ದಾರಿ ಮಾಡಿಕೊಡಬೇಕು. ಸಮಗ್ರ 2026ರ ಮೂಲಕ ಕರ್ನಾಟಕದ ಬೆಳೆಯುತ್ತಿರುವ ಪ್ರತಿಭೆ ಮತ್ತು ಜೀವನೋಪಾಯದ ಅಗತ್ಯಗಳನ್ನು ಪೂರೈಸಲು ಸರ್ಕಾರ, ಕಾರ್ಪೊರೇಟ್ ಸಂಸ್ಥೆಗಳು, ಶೈಕ್ಷಣಿಕ ವಲಯ ಹಾಗೂ ಅನುಷ್ಠಾನ ಪಾಲುದಾರರನ್ನು ಒಗ್ಗೂಡಿಸಿ ವಿಸ್ತರಿಸಬಹುದಾದ ಮಾದರಿಗಳನ್ನು ರೂಪಿಸಲು ಉತ್ತಮ ಅವಕಾಶ ದೊರೆತಿದೆ. ನಿಪುಣ ಕರ್ನಾಟಕದ ಸುತ್ತಲಿನ ನಮ್ಮ ಉದ್ದೇಶಿತ ಪಾಲುದಾರಿಕೆ ಮತ್ತು ಹಕ್ದರ್ಶಕ್ ಜೊತೆಗಿನ ಸಹಯೋಗವು ಕೌಶಲ್ಯ, ಉದ್ಯೋಗಾವಕಾಶ ಮತ್ತು ಕಟ್ಟಕಡೆಯ ಸಂಪರ್ಕವನ್ನು ಒಗ್ಗೂಡಿಸಿ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲು ಐಸೆಕ್ಟ್ ಇಂಡಿಯಾ ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಭವಿಷ್ಯಕ್ಕೆ ಸಜ್ಜಾದ ಮತ್ತು ಎಲ್ಲರನ್ನೂ ಒಳಗೊಳ್ಳುವ ಕರ್ನಾಟಕವನ್ನು ಕಟ್ಟುವಲ್ಲಿ ಸಿಎಸ್ಆರ್ ಮಹತ್ವದ ವೇಗವರ್ಧಕ ಪಾತ್ರ ವಹಿಸಲಿದೆ ಎಂದು ನಾವು ನಂಬುತ್ತೇವೆ” ಎಂದು ತಿಳಿಸಿದರು.
ಸಮಗ್ರ 2026 ಸಮಾವೇಶದಲ್ಲಿ ಸರ್ಕಾರ, ಕಾರ್ಪೊರೇಟ್ ಸಿಎಸ್ಆರ್, ಉದ್ಯಮ ರಂಗ, ಶಿಕ್ಷಣ ವಲಯ, ಎನ್ಜಿಒಗಳು, ಅಭಿವೃದ್ಧಿ ಸಂಸ್ಥೆಗಳು, ಸಾಮಾಜಿಕ ಉದ್ಯಮಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳಿಂದ 200ಕ್ಕೂ ಹೆಚ್ಚು ಗಣ್ಯ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕೌಶಲ್ಯ ಮತ್ತು ಉದ್ಯೋಗಾವಕಾಶ, ಡಿಜಿಟಲ್ ಒಳಗೊಳ್ಳುವಿಕೆ, ಮಹಿಳಾ ಸಬಲೀಕರಣ, ಜೀವನೋಪಾಯ, ಆರೋಗ್ಯ ರಕ್ಷಣೆ, ಸುಸ್ಥಿರತೆ, ಹಾಗೂ ತಂತ್ರಜ್ಞಾನ ಮತ್ತು ಎಐ ಆಧಾರಿತ ಸಾಮಾಜಿಕ ಪ್ರಭಾವಗಳ ಕುರಿತು ಪ್ರಮುಖ ಚರ್ಚೆಗಳು ನಡೆಯಲಿವೆ.
ಇದಲ್ಲದೆ, ಸಮಾವೇಶದಲ್ಲಿ ವಿಷಯಾಧಾರಿತ ಗೋಷ್ಠಿಗಳು, ಇಂಪ್ಯಾಕ್ಟ್ ಶೋಕೇಸ್ ಮತ್ತು ನಾವೀನ್ಯತೆ, ಸಹಭಾಗಿತ್ವ ಹಾಗೂ ಸುಸ್ಥಿರ ಪರಿಣಾಮವನ್ನು ಪ್ರದರ್ಶಿಸಿದ ಅತ್ಯುತ್ತಮ ಉಪಕ್ರಮಗಳನ್ನು ಗುರುತಿಸುವ ಸಮಗ್ರ ಸಿಎಸ್ಆರ್ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ.
ಕರ್ನಾಟಕದಲ್ಲಿ ನಿರಂತರ ಸಿಎಸ್ಆರ್ ಸಹಯೋಗದ ಪರಿಸರ ವ್ಯವಸ್ಥೆಗೆ ಸಮಗ್ರ 2026 ಒಂದು ಮುನ್ನುಡಿಯಾಗಲಿದ್ದು, ಸುಸ್ಥಿರ ಸಾಮಾಜಿಕ ಪರಿಣಾಮವನ್ನು ಸೃಷ್ಟಿಸಲು ಸರ್ಕಾರದ ಆದ್ಯತೆಗಳು, ಸಿಎಸ್ಆರ್ ಸಂಪನ್ಮೂಲಗಳು, ಉದ್ಯಮದ ಪರಿಣತಿ, ಅನುಷ್ಠಾನ ಸಾಮರ್ಥ್ಯಗಳು, ಶೈಕ್ಷಣಿಕ ವಲಯ ಮತ್ತು ತಂತ್ರಜ್ಞಾನವನ್ನು ಬೆಸೆಯುವ ಕಾರ್ಯವನ್ನು ಮಾಡಲಿದೆ.
ಸಮಗ್ರ 2026 ಕುರಿತು:
ಸಮಗ್ರ 2026 – ಕರ್ನಾಟಕ ಸಿಎಸ್ಆರ್ ಮತ್ತು ಸೋಷಿಯಲ್ ಇಂಪ್ಯಾಕ್ಟ್ ಸಮಾವೇಶವು ಕರ್ನಾಟಕ ಸರ್ಕಾರದ ಇ, ಐಟಿ ಮತ್ತು ಬಿಟಿ ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ವತಿಯಿಂದ, ಐಸೆಕ್ಟ್ ಇಂಡಿಯಾ ಸಹಯೋಗದಲ್ಲಿ ರೂಪಿಸಲಾದ ಒಂದು ಪ್ರಮುಖ ಉಪಕ್ರಮವಾಗಿದೆ. ಕರ್ನಾಟಕದಲ್ಲಿ ಎಲ್ಲರನ್ನೂ ಒಳಗೊಂಡ ಸುಸ್ಥಿರ ಅಭಿವೃದ್ಧಿಗೆ ಪಾಲುದಾರಿಕೆಗಳನ್ನು ನಿರ್ಮಿಸಲು ಮತ್ತು ವಿಸ್ತರಿಸಬಹುದಾದ ಮಾದರಿಗಳನ್ನು ರೂಪಿಸಲು ಸರ್ಕಾರ, ಕಾರ್ಪೊರೇಟ್ ವಲಯ, ಸಿಎಸ್ಆರ್ ಮುಖಂಡರು, ಕೈಗಾರಿಕೆಗಳು, ಶಿಕ್ಷಣ ವಲಯ ಮತ್ತು ಅಭಿವೃದ್ಧಿ ಸಂಸ್ಥೆಗಳಿಗೆ ಇದು ಸಶಕ್ತ ವೇದಿಕೆಯನ್ನು ಒದಗಿಸುತ್ತದೆ.
ಮಾಧ್ಯಮ ಮಾಹಿತಿ ಸಂಪರ್ಕ:
Karnataka Digital Economy Mission (ಕೆಡಿಇಎಂ), Communications Team
