ಹಾಸನ: ಮನುಷ್ಯನನ್ನು ಕೇವಲ ಆರ್ಥಿಕ ಜೀವಿ ಅಥವಾ ರಾಜಕೀಯ ಜೀವಿಯಾಗಿ ನೋಡದೆ, ಆತನ ಸಮಗ್ರ ವ್ಯಕ್ತಿತ್ವವನ್ನು ಪರಿಗಣಿಸಬೇಕು ಎಂಬುದು ಪಂಡಿತ್ ದೀನದಯಾಳ್ ಉಪಾಧ್ಯಾಯರ ಚಿಂತನೆಯ ಪ್ರಮುಖ ಆಶಯವಾಗಿತ್ತು ಎಂದು ವಿಶೇಷ ಉಪನ್ಯಾಸಕ ರವಿಕಿರಣ್ ಹೇಳಿದರು.
ನಗರದಲ್ಲಿ ವಿಶ್ವ ಬಂಧು ಕಲಾ ಕ್ರೀಡಾ ಸಾಂಸ್ಕೃತಿಕ ಸಂಘ, ಮೇರಾ ಯುವ ಭಾರತ್ ಹಾಸನ ಹಾಗೂ ಬೆಸ್ಟ್ ಪಿಯು ಮತ್ತು ಪ್ರಥಮ ದರ್ಜೆ ಕಾಲೇಜು, ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಪಂಡಿತ್ ದೀನದಯಾಳ್ ಉಪಾಧ್ಯಾಯರು ಭಾರತೀಯ ರಾಜಕೀಯ ಚಿಂತಕ, ಸಂಘಟಕ ಹಾಗೂ ಭಾರತೀಯ ಜನಸಂಘದ ಪ್ರಮುಖ ನಾಯಕರಾಗಿದ್ದರು. ಅವರ ರಾಜಕೀಯ ಚಿಂತನೆಯ ಪ್ರಮುಖ ಪರಿಕಲ್ಪನೆ **‘ಏಕಾತ್ಮ ಮಾನವತಾವಾದ’**ವಾಗಿದೆ. ಮನುಷ್ಯನ ದೇಹ, ಮನಸ್ಸು, ಬುದ್ಧಿ ಮತ್ತು ಆತ್ಮ ಎಂಬ ನಾಲ್ಕು ಆಯಾಮಗಳ ಸಮತೋಲನದ ಅಭಿವೃದ್ಧಿಯೇ ಸಮಗ್ರ ಮಾನವ ಅಭಿವೃದ್ಧಿ ಎಂಬುದು ಅವರ ಚಿಂತನೆಯ ಕೇಂದ್ರಬಿಂದುವಾಗಿತ್ತು ಎಂದು ವಿವರಿಸಿದರು.

ಭಾರತೀಯ ಪರಂಪರೆಯ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳನ್ನು ಸಾಮಾಜಿಕ ಹಾಗೂ ರಾಜಕೀಯ ಚಿಂತನೆಯೊಂದಿಗೆ ಅವರು ಸಮನ್ವಯಗೊಳಿಸಿದ್ದರು. ವ್ಯಕ್ತಿವಾದಿ ಬಂಡವಾಳಶಾಹಿ ಹಾಗೂ ಸಾಮ್ಯವಾದಿ ಮಾದರಿಗಳಲ್ಲಿರುವ ಮಿತಿಗಳನ್ನು ಗುರುತಿಸಿ, ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿಗೆ ಹೊಂದುವ ಸ್ವದೇಶಿ ಚಿಂತನೆಯ ಅಗತ್ಯವನ್ನು ಪ್ರತಿಪಾದಿಸಿದ್ದರು ಎಂದು ರವಿಕಿರಣ್ ತಿಳಿಸಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಹಾಸನ ವಿಧಾನಸಭಾ ಕ್ಷೇತ್ರದ ಸಮಾಜಸೇವಕ ಹಾಗೂ ಯುವ ಮುಖಂಡ ಕಂಚಮಾರನಹಳ್ಳಿ ಲಕ್ಷ್ಮೀಕಾಂತಣ್ಣ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಗೌರವಿಸುವುದರ ಜೊತೆಗೆ ಅದರ ಮೌಲ್ಯಗಳನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯಾಗಿದ್ದು, ವಿದೇಶಿಯರನ್ನೂ ಆಕರ್ಷಿಸುವ ಮೂಲಕ ವಿಶ್ವದಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ. ವಿದ್ಯಾರ್ಥಿಗಳು ಶ್ರದ್ಧೆ, ಭಕ್ತಿ, ನಯ-ವಿನಯದೊಂದಿಗೆ ರಾಷ್ಟ್ರೀಯ ಚಿಂತನೆಗಳನ್ನು ಮೈಗೂಡಿಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೋಮ ಅವರು ಮಾತನಾಡಿ, ದೀನದಯಾಳ್ ಉಪಾಧ್ಯಾಯರ ಬದುಕು, ಬರಹ ಹಾಗೂ ಚಿಂತನೆಗಳು ನಮ್ಮ ಜೀವನಕ್ಕೆ ಆದರ್ಶವಾಗಿದ್ದು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಶ್ವ ಬಂಧು ಕಲಾ ಕ್ರೀಡಾ ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಚನ್ನಬಸವೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ಹಾಸನ ಜಿಲ್ಲೆಯಾದ್ಯಂತ ಪರಿಸರ ಸಂರಕ್ಷಣೆ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ತರಬೇತಿ ಸೇರಿದಂತೆ ವಿವಿಧ ಗ್ರಾಮಾಭಿವೃದ್ಧಿ ಹಾಗೂ ಅರಿವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇರಾ ಯುವ ಭಾರತ್ ಯೋಜನೆಯೊಂದಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪುನೀತ್ ಆರ್.ಟಿ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮಗಳಲ್ಲಿ ನೀಡುವ ಉಪನ್ಯಾಸಗಳು ಕೇವಲ ಕೇಳುವುದಕ್ಕೆ ಸೀಮಿತವಾಗದೆ, ಅದರಲ್ಲಿರುವ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳು ಸಾರ್ಥಕವಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಸ್ಟ್ ಪಿಯು ಮತ್ತು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಧು ಹೆಚ್.ಆರ್. ಮಾತನಾಡಿ, ದೀನದಯಾಳ್ ಉಪಾಧ್ಯಾಯರ ಚಿಂತನೆಗಳಲ್ಲಿ ರಾಷ್ಟ್ರ, ಸಂಸ್ಕೃತಿ, ಸಮಾಜ ಮತ್ತು ವ್ಯಕ್ತಿಯ ನಡುವಿನ ಏಕಾತ್ಮ ಸಂಬಂಧ ಪ್ರಮುಖವಾಗಿದೆ. ಸಮಾಜವು ಕೇವಲ ವ್ಯಕ್ತಿಗಳ ಒಟ್ಟು ಮೊತ್ತವಲ್ಲ; ವ್ಯಕ್ತಿ ಮತ್ತು ಸಮಾಜ ಪರಸ್ಪರ ಸಂಬಂಧ ಹೊಂದಿರುವ ಘಟಕಗಳಾಗಿವೆ ಎಂಬುದು ಅವರ ಚಿಂತನೆಯಾಗಿತ್ತು ಎಂದು ಹೇಳಿದರು.
ವಿಶ್ವ ಬಂಧು ಕಲಾ ಕ್ರೀಡಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಗಿರೀಶ್ ಬಿ.ಪಿ. ಅತಿಥಿಗಳನ್ನು ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಗಿರೀಶ್ ಕೆ.ಆರ್. ಸೇರಿದಂತೆ ಉಪನ್ಯಾಸಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
