ತುಮಕೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಣದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಗಂಭೀರ ಆರೋಪಗಳು ದಾಖಲಾಗಿರುವ ಹಿನ್ನೆಲೆಯಲ್ಲಿ, ಅವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದೆ.
ಶಾಸಕ ಬಿ.ಸುರೇಶ್ಗೌಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಿ 30 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ನಾಗೇಂದ್ರ ಅವರಿಗೆ ಸಂಬಂಧಿಸಿದಂತೆ ಸುಮಾರು 1.20 ಕೋಟಿ ರೂ.ಅಕ್ರಮ ಹಣದ ಲಾಭ ತಲುಪಿರುವ ಆರೋಪವನ್ನು ತನಿಖಾ ಸಂಸ್ಥೆ ದಾಖಲಿಸಿದೆ.ಜೊತೆಗೆ ನಿಗಮದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಂತ ಹಂತವಾಗಿ ವರ್ಗಾಯಿಸಿರುವ ಅಂಶಗಳೂ ತನಿಖೆಯಲ್ಲಿ ಬಹಿರಂಗವಾಗಿವೆ. ಇಂತಹ ಗಂಭೀರ ಆರೋಪಗಳು ಮತ್ತು ಸಿಬಿಐ ಆರೋಪಪಟ್ಟಿ ನ್ಯಾಯಾಲಯದ ಮುಂದೆ ಇರುವ ಸಂದರ್ಭದಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನೇ ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದು ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಅತ್ಯಂತ ತಪ್ಪು ಸಂದೇಶವಾಗಿದೆ ಎಂದರು.
ಒಬ್ಬ ವ್ಯಕ್ತಿಯ ವಿರುದ್ಧಆರೋಪ ಕೇಳಿಬಂದಾಗ ರಾಜೀನಾಮೆ ಪಡೆಯಬೇಕುಎಂದು ಹೇಳುತ್ತಿದ್ದ ಕಾಂಗ್ರೆಸ್, ಈಗ ಸಿಬಿಐ ಆರೋಪಪಟ್ಟಿ ಸಲ್ಲಿಸಿರುವ ವ್ಯಕ್ತಿಯನ್ನೇ ಮತ್ತೆ ಸಚಿವರನ್ನಾಗಿ ಮಾಡಿರುವುದುಯಾವ ನೈತಿಕತೆ?ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನುಅಕ್ರಮವಾಗಿ ವರ್ಗಾವಣೆ ಮಾಡಿರುವಆರೋಪಅತ್ಯಂತ ಗಂಭೀರವಾದದ್ದು.ಈ ಹಣವು ಬಡವರು, ಹಿಂದುಳಿದವರು ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಬಳಕೆಯಾಗಬೇಕಿತ್ತು.ಇಂತಹ ಸಾರ್ವಜನಿಕ ಹಣದದುರುಪಯೋಗದಆರೋಪಎದುರಿಸುತ್ತಿರುವ ವ್ಯಕ್ತಿಗೆ ಸಚಿವ ಸ್ಥಾನ ನೀಡಿರುವುದು ಪ್ರಜಾಪ್ರಭುತ್ವದನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದೆಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ನಾಗೇಂದ್ರ ಅವರು 2024ರಲ್ಲಿ ಇದೇ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಆದರೆ ಇದೀಗ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದು ರಾಜ್ಯ ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ.ಸಿಬಿಐ ಆರೋಪಪಟ್ಟಿ ಸಲ್ಲಿಸಿರುವ ಸಂದರ್ಭದಲ್ಲಿ ನಾಗೇಂದ್ರರನ್ನು ಸಚಿವರಾಗಿ ಮುಂದುವರಿಸುವುದು ರಾಜ್ಯ ಸರ್ಕಾರದ ನೈತಿಕ ಹೊಣೆಗಾರಿಕೆಯನ್ನೇ ಪ್ರಶ್ನಿಸುವಂತಾಗಿದೆ.
ಐಟಿ,ಇಡಿ,ಸಿಬಿಐ ತನಿಖೆ ನಡೆಯುತ್ತಿದೆ ಅಂತಹುದರಲ್ಲಿ ನಾಗೇಂದ್ರರನ್ನುಪುನಃ ಡಿಕೆ.ಶಿವಕುಮಾರ್ ರವರು ತಮ್ಮ ಸಚಿವ ಸಂಪುಟಕ್ಕೆ ತೆಗೆದುಕೊಂಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್, ಟಿ.ಹೆಚ್. ಹನುಮಂತರಾಜು, ಕೆ.ವೇದಮೂರ್ತಿ, ದಿಲೀಪ್, ವಿಜಯಕುಮಾರ್, ಮಾಧ್ಯಮ ಪ್ರಮುಖ್ ಮರಿತಿಮ್ಮಯ್ಯ ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ
