ಚನ್ನರಾಯಪಟ್ಟಣ: ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2026-27ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಚನ್ನರಾಯಪಟ್ಟಣದ ನವೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ನವೋದಯ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯು ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿತು. ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪೂಮಡಿಹಳ್ಳಿ ಜಗದೀಶ್ ರವರು ಮಾತನಾಡಿ ಮೈಸೂರು ಪ್ರಾಂತ್ಯದಲ್ಲಿ ನವೋದಯ ಸಂಸ್ಥೆಗೆ ಒಂದು ದೊಡ್ಡ ಹೆಸರು ಇದೆ , ಇಂತಹ ಸಂಸ್ಥೆಯಲ್ಲಿ ತಾವುಗಳು ಓದುತ್ತಿರುವುದು ನಿಮ್ಮ ಪುಣ್ಯ ಎಂದು ನಾನು ಭಾವಿಸುತ್ತೇನೆ, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನವೋದಯ ವಿದ್ಯಾ ಸಂಸ್ಥೆಯ ಕ್ರೀಡಾಪಟುಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಪಡೆಯುವ ಮೂಲಕ ನಮ್ಮ ನವೋದಯ ಸಂಸ್ಥೆಗೆ ಸಮಗ್ರ ಪ್ರಶಸ್ತಿ ತಂದು ಕೊಟ್ಟಿರುವುದು ಬಹಳ ಸಂತೋಷವಾಗಿದೆ ಎಂದರು.
ನವೋದಯ ವಿದ್ಯಾ ಸಂಸ್ಥೆಯ ನಿರ್ದೇಶಕರು ಹಾಗೂ ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಆನಂದ್ ಕುಮಾರ್ ಕಾಳೇನಹಳ್ಳಿ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಕ್ರೀಡೆ ಬಹಳ ಮುಖ್ಯವಾಗಿದೆ, ಕ್ರೀಡೆ ಆರೋಗ್ಯವನ್ನು ವೃದ್ಧಿಸುತ್ತದೆ. ತಾಲೂಕು ಮಟ್ಟದ ಕ್ರೀಡೆಯಲ್ಲಿ ನಮ್ಮ ಸಂಸ್ಥೆಗೆ ಸತತವಾಗಿ 25 ವರ್ಷಗಳಿಂದ ಸಮಗ್ರ ಪ್ರಶಸ್ತಿ ಪಡೆಯುತ್ತಾ ಬಂದಿದ್ದೀರಾ, ನವೋದಯದ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲಿಗೆ ಜಿಲ್ಲಾ ಮಟ್ಟದ ಸಮಗ್ರ ಪ್ರಶಸ್ತಿ ಬಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಇದರಿಂದ ನಮ್ಮ ನವೋದಯ ಸಂಸ್ಥೆಗೆ ಕೀರ್ತಿ ಹೆಚ್ಚಾಗಿದೆ ಎಂದು ನಾನು ಭಾವಿಸುತ್ತೇನೆ ಎಂದರು.
ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ.ಜೆ ಮಂಜುನಾಥ್ ರವರು ಮಾತನಾಡಿ, ನಮ್ಮ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿದ್ದಾರೆ ತುಂಬಾ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಜೊತೆಗೆ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಗ್ರ ಪ್ರಶಸ್ತಿಯನ್ನು ತಂದಿರುವುದು ನಮಗೆ ಬಹಳ ಸಂತೋಷವಾಗಿದೆ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯು ಕೃತಜ್ಞತೆಗಳನ್ನು ಹಾಗೂ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದರು. ಇದಕ್ಕೆ ಸಹಕರಿಸಿದ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ನಿರ್ದೇಶಕರುಗಳಿಗೆ ಸಮಸ್ತ ನೌಕರರನ್ನು ಕೊಂಡಾಡಿದರು.
ಕ್ರೀಡೆಯಲ್ಲಿ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿಮಾನದಿಂದ ಅಭಿನಂದಿಸಿದರು, ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳು ಜಲೇಂದ್ರ, ಖಜಾಂಚಿಗಳಾದ ಮರವನಹಳ್ಳಿ ಸಂತೋಷ್, ನಿರ್ದೇಶಕರಾದ ಜೆ.ಕೆ. ರಾಘವೇಂದ್ರ, ದೈಹಿಕ ಉಪನ್ಯಾಸಕರಾದ ಚಿಕ್ಕೇಗೌಡ, ಸೇರಿದಂತೆ ಇತರರು ಹಾಜರಿದ್ದರು.
ನವೋದಯ ವಿದ್ಯಾ ಸಂಸ್ಥೆಗೆ ಜಿಲ್ಲಾಮಟ್ಟದಲ್ಲಿ ಸಮಗ್ರ ಪ್ರಶಸ್ತಿ ಬರಲು ಶ್ರಮಿಸಿದ ಕ್ರೀಡೆಯ ಆಟಗಳಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ ದೈಹಿಕ ಶಿಕ್ಷಣ ಉಪನ್ಯಾಸಕರಾದ ಚಿಕ್ಕೇಗೌಡ ರವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ವರದಿ : ಮಂಜುನಾಥ್ ಐ ಕೆ
