ಶ್ಲೋಕ – 10
ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ ।
ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಮ್ ॥೧೦॥
ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ ।
ಉಚ್ಛಿಷ್ಟಮ್ ಅಪಿ ಚ ಅಮೇಧ್ಯಂ ಭೋಜನಂ ತಾಮಸ ಪ್ರಿಯಮ್ – ಇದು ತಾಮಸರಿಗೆ ಮೆಚ್ಚಿನ ತಿನಿಸು: ಅಟ್ಟು ಜಾವ ಕಳೆದದ್ದು, ರುಚಿ ಕಳೆದುಕೊಂಡದ್ದು, ಹಳಸಿದ್ದು, ತಂಗಳಾದದ್ದು, ಎಂಜಲು ಮತ್ತು ಕೊಳಕಾದದ್ದು.
ತಾಮಸರಿಗೆ ಜೀವನದಲ್ಲಿ ಅತಿದೊಡ್ಡ ಸಂಗತಿ ಎಂದರೆ ಭೋಜನ. ಇವರು ಆಹಾರವನ್ನು ದೇವರಿಗೆ ಸಮರ್ಪಿಸದೆ ಸೇವನೆ ಮಾಡುತ್ತಾರೆ. ನೀರಸವಾದ, ಹಳಸಿದ, ವಾಸನೆ ಬರುವ, ರುಚಿಗೆಟ್ಟ ಆಹಾರ ತಾಮಸರಿಗೆ ಇಷ್ಟ. ಇವರು ಎಂಜಲು ಊಟವನ್ನು ಇಷ್ಟಪಡುತ್ತಾರೆ. [ಉದಾಹರಣೆಗೆ ಒಂದೇ ತಟ್ಟೆಯಲ್ಲಿ ಅನೇಕ ಮಂದಿ ಎಂಜಲು ಹಂಚಿಕೊಂಡು ತಿನ್ನುವುದು].
ಹೀಗೆ ಆಹಾರದಿಂದ ಹೇಗೆ ವ್ಯಕ್ತಿಯನ್ನು ಗುರುತಿಸಬಹುದು ಎನ್ನುವ ವಿಧಾನವನ್ನು ವಿವರಿಸಿದ ಕೃಷ್ಣ, ಮುಂದೆ ನಮ್ಮ ಆಚಾರದಿಂದ(ಯಜ್ಞ, ತಪಸ್ಸು, ದಾನ) ವ್ಯಕ್ತಿಯ ಸ್ವಭಾವವನ್ನು ಅರಿಯುವ ವಿಧಾನವನ್ನು ವಿವರಿಸುತ್ತಾನೆ.
