ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಭಾವನಾತ್ಮಕ ಸಂವಾದ
ನಾವು ತೀರಾ ಚಿಕ್ಕ ಹುಡುಗರಾಗಿದ್ದ ಕಾಲದಿಂದಲೂ ಹೆಗ್ಗೋಡಿನ ನೀನಾಸಂ ತಂಡವನ್ನು ಮೂಡಿಗೆರೆಗೆ ಕರೆಯಿಸಿ ನಾಟಕ ಪ್ರದರ್ಶನ ಏರ್ಪಾಡು ಮಾಡುತ್ತಿದುದ್ದು ತೇಜಸ್ವಿಯವರ ನೇತೃತ್ವದ ತಂಡ.“ಮಣ್ಣಿನ ಬಂಡಿ”, “ಅಲಿಬಾಬ ಮತ್ತು ನಲವತ್ತು ಕಳ್ಳರು”, “ಚಿದಂಬರ ರಹಸ್ಯ” ಮುಂತಾದವುಗಳನ್ನು ಐದು ಆರನೇ ತರಗತಿಯಲ್ಲಿ ಓದುತಿದ್ದ ನಾವು ನೆಲದ ಮೇಲೆ ಕುಳಿತು ವೀಕ್ಷಿಸಿದ್ದು ಇನ್ನೂ ನೆನಪಿದೆ.
ನಾವೆಲ್ಲಾ ದೊಡ್ಡವರಾಗಿ ನಾವೇ ಕಾರ್ಯಕ್ರಮ ಆಯೋಜಿಸುವ ಮಟ್ಟಿಗೆ ಬೆಳೆದ ಮೇಲೆ ನಮ್ಮ ಬೆನ್ನ ಹಿಂದೆ ನಿಂತು ಸಲಹೆ, ಸೂಚನೆ ಮತ್ತು ಬೆಂಬಲ ನೀಡುವ ಜೊತೆಗೆ ನಾಟಕ ಮಾಡಿಸಲು ತೇಜಸ್ವಿಯವರು ಹಣ ನೀಡಿದ್ದು ಸಹ ಇದೆ. ನಾವೆಂದೂ ಕಾರ್ಯಕ್ರಮಗಳಿಗಾಗಿ
ಸಾರ್ವಜನಿಕರಿಂದ ಹಣ ಎತ್ತುತ್ತಿರಲಿಲ್ಲ. ನಮ್ಮಂತೆಯೇ ಸಮಾನ ಮನಸ್ಕರು ಸೇರಿ ನಾವು ನಾವೇ ವಂತಿಗೆ ಹಾಕಿ ಕಲಾವಿದರಿಗೆ ವಸತಿ, ಊಟ, ಗೌರವಧನ, ಕಾರ್ಯಕ್ರಮದ ವ್ಯವಸ್ಥೆ, ಪ್ರಚಾರ ಮುಂತಾದವುವನ್ನು ನಿರ್ವಹಿಸುತ್ತಿದ್ದೆವು.
ಈ ಕಾರ್ಯದಲ್ಲಿ ನಮಗೆ ತೇಜಸ್ವಿ, ಕೆಂಜಿಗೆ ಪ್ರದೀಪ್, ಬಿ.ಎಲ್. ಶಂಕರ್, ಹಾಂದಿ ವಿನೋದ್, ಉಗ್ಗೇಹಳ್ಳಿ ರವೀಂದ್ರನ್, ವಕೀಲರಾದ ಜಯರಾಂ, ಬಗ್ಗಸಗೋಡು ಪ್ರತಾಪ್, ಜನ್ನಾಪುರದ ರಘು, ಅಮರೇಂದ್ರನಾಥ್, ಅತುಲ್ ರಾವ್, ದೀಪಕ್, ರಾಘವೇಂದ್ರ, ಪ್ರಮೋದ್, ಲಯನ್ಸ್ ಸಂಸ್ಥೆ, ಬ್ಯಾಂಕರ್ಸ್ ಬಳಗ, ಕೆನರಾ ಬ್ಯಾಂಕ್, ಕನ್ನಡ ಸಾಹಿತ್ಯ ಪರಿಷತ್ ಮುಂತಾದವರು ಸಹಕಾರ ನೀಡಿ ಮೂಡಿಗೆರೆಯಲ್ಲಿ ಸಾಂಸ್ಕೃತಿಕ ಬಂಡಿ ನಿರಂತರವಾಗಿ ಚಲಿಸಲು ಬೆಂಬಲ ನೀಡಿದ್ದಾರೆ.
ಜನಸೇರದ ವ್ಯಕ್ತಿಯೆಂಬುದು ಕೆಲವರಿಗಾದ ಅನುಭವವೂ ಇರಬಹುದು. ಕೆಲವೊಮ್ಮೆ ಅತ್ಯಂತ ನಿರಾಸಕ್ತಿ, ಹಾಗೆಯೇ ಅನಾಧಾರವನ್ನು ಯಾಕಾದರೂ ಹೋದೆವೋ, ಯಾಕಾದರೂ ಮಾತನಾಡಿಸಿದೆನಪ್ಪಾ ಎನ್ನುವಷ್ಟರ ಮಟ್ಟಿಗೆ ಕೆಲವೊಮ್ಮೆ ಆತ್ಮನಿಂದನೆ ಮಾಡಿಕೊಳ್ಳುವ ಮಟ್ಟದಲ್ಲಿಯೂ ಅನುಭವಿಸಿದ ನಿದರ್ಶನಗಳಿವೆ. ಅವೇ ಅನಾಧರ, ನಿರಾಸಕ್ತಿ, ನಿರ್ಲಕ್ಷ್ಯಗಳೇ ಅವರ ಕ್ರಿಯಾಶೀಲತೆಯ ಆಯುಧಗಳು ಇರಲೂಬಹುದು ಎನ್ನಬಹುದಾದಂತಹ ಅನುಭವಗಳೂ ಆಗಿವೆ.
ವಿವಾದಗಳಿಗೆ, ವಾಗ್ವಾದಗಳಿಗೆ ರಂಜನೀಯ ಚರ್ಚೆಗೆ ಕಾರಣವಾಗಬಲ್ಲಂತ ಸಬ್ಜೆಕ್ಟನ್ನೇ ಹುಡುಕಿ ಹೇಳಿಕೆ ಕೊಡುವ ಲೇಖಕರ ವರ್ಗ ಕಡೆಗೆ ಬಾಯಿ ಮುಚ್ಚುತ್ತಿದ್ದುದು ತೇಜಸ್ವಿ ಸ್ಟೇಟ್ಮೆಂಟ್ ನಂತರವೇ. ತೀರಾ ಜಿದ್ದಿಗೆ ಬಿದ್ದು ಅನಪೇಕ್ಷಿತ ವಾದವಿವಾದಕ್ಕೆ ಬರುವವರ ಕುರಿತು ತೇಜಸ್ವಿಯವರಲ್ಲಿ ಇದ್ದದ್ದು -ನಿನ್ನೊಡನೆ ವಾಗ್ವಾದಕ್ಕೆ ನನಗೆ ಮನಸ್ಸಿಲ್ಲ ಮಾತ್ರವಲ್ಲ ಪುರಸೊತ್ತೂ ಇಲ್ಲ ಎಂಬಂತೆ ಹೇಳುವ ಮನಸ್ಥಿತಿ.

ತೇಜಸ್ವಿಯವರ ಜುಗಾರಿಕ್ರಾಸಿನಲ್ಲಿ ಬರುವ ಬಸ್ ಸ್ಟ್ಯಾಂಡ್ ಪ್ರಕರಣ, ಮಾಯಾಲೋಕದ ಯಾಜಿ ಪ್ರಹಸನ, ಪರಿಸರದ ಕಥೆಯ ಈಚು ವೃತ್ತಾಂತ, ಕರ್ವಾಲೋದ ಪಿಗ್ಮಟನ್ ಉವಾಚ ಎಂಥಾ ಗಂಭೀರ ಸನ್ನಿವೇಶದಲ್ಲೂ ನಗೆಯನ್ನು ಸ್ಪೋಟಿಸುವಂತೆ ಮಾಡುತ್ತವೆ. ಕಾಲಿಲ್ಲದೇ ಹಾವು ನಡೆಯುವಂತೆ ಕಿವಿಯಿಲ್ಲದೇ ಶಬ್ದ ಗ್ರಹಿಸಲು ಸಾಧ್ಯವಿಲ್ಲವೆನ್ನಬಹುದಾ? ಎನ್ನುವಂಥಾ ಪ್ರಶ್ನೆಯೆತ್ತಿ ನಮ್ಮನ್ನು ಯೋಚನೆಗೆ ಹಚ್ಚುತ್ತಾರೆ.
ಚಿಕ್ಕಮಗಳೂರು ಜಿಲ್ಲೆಯ ಕಾಫಿ ಸಂಸ್ಕೃತಿ ಈ ನೆಲದ ನಿಜ ಸಂಸ್ಕೃತಿಯನ್ನು. ಸೃಜನಶೀಲತೆಯನ್ನು ಕೊಂದುಹಾಕಿರುವುದನ್ನು ಪ್ರಸ್ತಾಪಿಸಿ ಇಲ್ಲಿ ಯಾವುದೋ ಒಂದು ಭಯಾನಕ ಕೊರತೆ ಇದೆ, ಇಂಥದೊಂದು ಸಾಂಸ್ಕೃತಿಕ ನಿಷ್ಕ್ರೀಯತೆ ಕೇವಲ ಆಕಸ್ಮಿಕ ಅಲ್ಲ ಎನ್ನುತ್ತಾರೆ ತೇಜಸ್ವಿ.
ತೇಜಸ್ವಿಯವರ ಚಿದಂಬರ ರಹಸ್ಯ ಎಂಬ ಪುಸ್ತಕದಲ್ಲಿ ಚಿಕ್ಕಮಗಳೂರನ್ನು ಉಲ್ಲೇಖಿಸಿ ಒಂದೆಡೆ `ಈ ಜಿಲ್ಲೆಗೆ ಒಂದು ಶಾಪವಿದೆ. ಇಂಥಾದ್ದೊಂದು ಸಾಂಸ್ಕೃತಿಕ ನಿಷ್ಕ್ರೀಯತೆ ಕೇವಲ ಅಕಸ್ಮಿಕವಲ್ಲ. ಈ ಜಿಲ್ಲೆಯಿಂದ ಹಲವಾರು ಶತಮಾನಗಳಿಂದ ಒಬ್ಬನೇ ಒಬ್ಬ ಅಸಾಧಾರಣ ವ್ಯಕ್ತಿ ಹುಟ್ಟಿಲ್ಲ . ಚಿತ್ರಕಾರ, ಸಂಗೀತಗಾರ, ಬರಹಗಾರ, ಸಮಾಜ ಸುಧಾರಕ, ಆಟಗಾರ ಹೋಗಲಿ ಒಬ್ಬ ರಾಷ್ಟ್ರಮಟ್ಟದ ರಾಜಕಾರಣಿಯಾದರೂ ಹುಟ್ಟಲಿಲ್ಲವೆಂದು ವಿಷಾದಿಸುತ್ತಾರೆ.
ಸಾಂಸ್ಕೃತಿಕ ಚಟುವಟಿಕೆಗೆ ಬೇಕಾದ ಮಧ್ಯಮ ವರ್ಗ ಇಲ್ಲವೇ ಇಲ್ಲದಿರುವುದು ಇದಕ್ಕೆ ಕಾರಣ. ಶ್ರೀಮಂತರ ಬೆಂಗಳೂರು ಮಟ್ಟದ ಕಾರುಬಾರುಗಳು, ದುಡಿಯುವ ವರ್ಗದ ಹೊಟ್ಟೆಪಾಡಿನ ಹಳವಂಡಗಳಲ್ಲೇ ಬದುಕು ಮುಗಿಯುವ ಪರಿ ದೊಡ್ಡ ನಿರ್ವಾತವನ್ನೇ ಉಂಟುಮಾಡಿದೆ’ ಎಂದು ಅಭಿಪ್ರಾಯ ಪಡುತ್ತಾರೆ.
ಕಾಫಿಗಿರುವ ಗ್ಲಾಮರ್, ವಹಿವಾಟಿನಲ್ಲಿ ಹರಿದಾಡುವ ಅಪಾರ ಹಣ, ಬೆಳೆಗಾರರ ಹೆಮ್ಮೆ, ಕಾಫಿ ಸಮುದಾಯದ ತಹರೇವಾರಿ ಲಾಬಿ ಇವೆಲ್ಲಾ ಪರಿಸರ ಸಂಬಂಧೀ ಮೂಲಭೂತ ಪ್ರಶ್ನೆಗಳನ್ನು ಸರಿಸಿ ಪಕ್ಕಕ್ಕಿಡಬಲ್ಲ ಶಕ್ತಿಯನ್ನು ಪಡೆದಿವೆ. ಕೃಷಿಕರಿಗೆ ಮಾರುಕಟ್ಟೆ ಆರ್ಥಿಕತೆಯ ನಿಜವಾದ ದರ್ಶನ ಈಗೀಗ ಆಗುತ್ತಿದೆ. ತಮ್ಮ ಉತ್ಪಾದನೆಯ ಸಿಂಹಪಾಲನ್ನು ಅನುಭವಿಸುತ್ತಿದ್ದ ಭೂಮಾಲೀಕ ವರ್ಗಕ್ಕೆ ಈಗ ನಿಧಾನವಾಗಿ ವಾಸ್ತವದ ಅರಿವಾಗುತ್ತಿದೆ.
ಕಾರ್ಮಿಕ ಆಧಾರಿತ ಕಾಫಿ ಉದ್ಯಮವನ್ನು ಈಗ ಅಕ್ಷರಶಃ ಕಾರ್ಮಿಕರೇ ಆಳುತ್ತಿದ್ದಾರೆ. ಮೂಲಭೂತ ಸೌಕರ್ಯಗಳು, ವೇತನದಲ್ಲಿ ಚೌಕಾಶಿ, ವಾಹನ ಸೌಲಭ್ಯ, ಕೆಲಸಕ್ಕೆ ಎಲ್ಲಿಗೆ ಬೇಕಾದರೂ ಹೋಗಬಹುದಾದ, ಯಾವತ್ತೂ ಹೋಗದಿರುವ ಸ್ವಾತಂತ್ರ್ಯ, ವಿಧ್ಯಾಭ್ಯಾಸ ಪಡೆದು ತೋಟದ ಕೆಲಸವಲ್ಲದೇ ಇತರೇ ಸೇವೆ ಮತ್ತು ಉದ್ಯಮಗಳತ್ತ ಸ್ಥಿತ್ಯಂತರಗೊಳ್ಳುತ್ತಿರುವ ದುಡಿಯುವ ವರ್ಗದ ಅನಿವಾರ್ಯತೆಯನ್ನು ಅನಾವರಣಗೊಳಿಸಿದೆ. ಅನೇಕ ಕೃಷಿಕರು ಕೃಷಿಯೇತರ ಚಟುವಟಿಕೆಗಳತ್ತ ಗುಳೆಹೋಗುವ ಕವಲುದಾರಿಯಲ್ಲಿ ನಿಂತಿರುವುದು ಐತಿಹಾಸಿಕ ಕ್ಷಣ. ಇದೆಲ್ಲ ಎಲ್ಲಿಗೆ ಹೋಗಿ ತಲುಪುತ್ತದೆ ಎಂದು ಕಾದು ನೋಡಬೇಕಿದೆ.
ದೇಸೀ ಜ್ಞಾನದ ಅಮೂಲ್ಯತೆಯನ್ನು, ಸ್ತ್ರೀ ಶಕ್ತಿಯ ಘನತೆಯನ್ನು, ಪ್ರಕೃತಿಯ ಸಂಕೀರ್ಣತೆಯನ್ನು ತೇಜಸ್ವಿಯಷ್ಟು ಅರ್ಥಪೂರ್ಣವಾಗಿ ಅನಾವರಣಗೊಳಿಸಿದವರು ಕನ್ನಡದ ಮಟ್ಟಿಗೆ ಸದ್ಯಕ್ಕೆ ಬೇರಾರೂ ಕಾಣುತ್ತಿಲ್ಲ. ಸ್ವಂತ ಪರಿಶ್ರಮದಿಂದ ಹಾಗೂ ಪ್ರತಿಭೆಯಿಂದ ಕಾಲದೇಶಗಳನ್ನೂ ಮೀರಿ ಮೇಲೆ ಬಂದ ತೇಜಸ್ವಿಯವರು ಸಮಾಜದ ವಿವಿಧ ಸ್ತರದ ಜನರೊಡನೆ ಅಸಾಧಾರಣ ಸಂಬಂಧ, ಸಂಪರ್ಕ ಹಾಗೂ ಸಂವಹನವನ್ನು ನಾವ್ಯಾರೂ ಕಲ್ಪನೆಯಲ್ಲೂ ಅಂದುಕೊಳ್ಳದ ರೀತಿಯಲ್ಲಿ ಸಾಧಿಸಿದ್ದರು. ಇವೇ ಅವರ ಸಾಹಿತ್ಯ ಸೃಷ್ಟಿಗೆ ಸಹಜವಾದ ಮಣ್ಣಿನ ವಾಸನೆಯನ್ನು ಒದಗಿಸಿವೆ. ಅವರ ಅಭಿಪ್ರಾಯ, ಆಲೋಚನೆ, ತೀರ್ಮಾನಗಳಿಗೆ ಈ ತಳಮಟ್ಟದ ಭಾವನಾತ್ಮಕ ಸಂವಾದವೇ ಕಾರಣ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946


[…] https://vicharavisthara.com/dhananjay-jeevala-puchanthe-thejaswi-story-part-52/ ಭಾವನಾತ್ಮಕ […]