ಶ್ಲೋಕ – 15
ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ ।
ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ ॥೧೫॥
ಅನುದ್ವೇಗ ಕರಂ ವಾಕ್ಯಂ ಸತ್ಯಂ ಪ್ರಿಯ ಹಿತಂ ಚ ಯತ್ ।
ಸ್ವಾಧ್ಯಾಯ ಅಭ್ಯಸನಂ ಚ ಏವ ವಾಙ್ಮಯಂ ತಪಃ ಉಚ್ಯತೇ—ಕೆರಳಿಸದ, ದಿಟವಾದ, ಕೇಳುವುದಕ್ಕೆ ಮೆಚ್ಚಾದ ಹಾಗು ಬಾಳಿಗೆ ಒಳಿತಾದ ಮಾತು ಮತ್ತು ಶಾಸ್ತ್ರಗಳ ಓದು ಮಾತಿನ ತಪಸ್ಸು ಎನಿಸುತ್ತದೆ.
ಹಿಂದಿನ ಅಧ್ಯಾಯದಲ್ಲಿ ವಿಶ್ಲೇಶಿಸಿದಂತೆ ಇದ್ದದ್ದನ್ನು ಇದ್ದಂತೆ ಹೇಳುವುದೇ ಸತ್ಯವಲ್ಲ. ಸತ್ಯ ಅಂದರೆ ಏನು ಎನ್ನುವ ವಿವರಣೆಯನ್ನು ಕೃಷ್ಣ ಈ ಶ್ಲೋಕದ ಮೂಲಕ ನಮಗೆ ಕೊಟ್ಟಿದ್ದಾನೆ. ಎಲ್ಲಿ ನಿಜವಾದ ಸಜ್ಜನಿಕೆ ಇದೆ-ಅದನ್ನು ಮೆಚ್ಚಿಕೊಂಡು, ಅದಕ್ಕೆ ಪೂರಕವಾಗಿ, ಇನ್ನೊಬ್ಬರನ್ನು ನೋಯಿಸದೆ, ಅವರಿಗೆ ಹಿತವಾಗುವ ರೀತಿ ಮಾತನಾಡುವುದು ಮಾತಿನ ತಪಸ್ಸು. ಇನ್ನೊಬ್ಬರಿಗೆ ಪ್ರೀಯವೂ-ಹಿತವೂ ಆದ ಮಾತನ್ನು ಆಡುವುದು ಬಹಳ ಕಷ್ಟ. ಏಕೆಂದರೆ ಹೆಚ್ಚಿನ ಸಂದರ್ಭದಲ್ಲಿ ಪ್ರಿಯವಾದದ್ದು ಹಿತವಾಗಿರುವುದಿಲ್ಲ. ಇಂಥಹ ಸಂದರ್ಭದಲ್ಲಿ ಮೌನ ಲೇಸು. ಕೃಷ್ಣನ ಕಥೆಯನ್ನು ಓದುವಾಗ ಅನೇಕ ಕಡೆ ನಮಗೆ ಕೃಷ್ಣ ಸುಳ್ಳು ಹೇಳಿದಂತೆ, ಮೋಸ ಮಾಡಿದಂತೆ ಕಾಣಿಸುತ್ತದೆ. ಆದರೆ ಆ ಕ್ರಿಯೆಯ ಹಿಂದೆ ಇರುವ ಕಾರುಣ್ಯ, ಹಿತಚಿಂತನೆಯನ್ನು ಗಮನಿಸಿದಾಗ ನಮಗೆ ಅದು ಸುಳ್ಳಲ್ಲ ಎನ್ನುವುದು ತಿಳಿಯುತ್ತದೆ. ದೈನಂದಿನ ಜೀವನದಲ್ಲಿ ನಾವು ಮಾತನಾಡುವಾಗ ನಮಗೆ ಕೃಷ್ಣ ಈ ಶ್ಲೋಕದಲ್ಲಿ ಹೇಳಿದ ಸಂದೇಶದ ಎಚ್ಚರವಿರಬೇಕು. ಮಾತನಾಡದೆ ಮೌನವಾಗಿದ್ದರೂ ಸರಿ-ಆದರೆ ಏನೋ ಮಾತನಾಡಿ ಆನಂತರ ಪಶ್ಚಾತ್ತಾಪಪಟ್ಟರೆ ಉಪಯೋಗವಿಲ್ಲ. “ಆಡಿದ ಮಾತನ್ನು ಹಿಂದೆ ಪಡೆಯಲು ಸಾಧ್ಯವಿಲ್ಲ; ಘಾಸಿಯಾದ ಮನಸ್ಸನ್ನು ವಾಸಿಮಾಡುವ ಮದ್ದು ನಮ್ಮಲ್ಲಿಲ್ಲ”. ಆದ್ದರಿಂದ ಇನ್ನೊಬ್ಬರನ್ನು ನೋಯಿಸುವ ಮಾತನ್ನೆಂದೂ ಆಡಬೇಡ. ಹಾಳು ಹರಟೆಯಲ್ಲಿ ದಿನ ಕಳೆಯದೆ, ವೇದದ ಅರ್ಥಚಿಂತನೆ, ಗೀತಾಚಿಂತನೆ, ವಿಷ್ಣುಸಹಸ್ರನಾಮ ಪಠಣ, ಇತ್ಯಾದಿ ಸ್ವಾಧ್ಯಾಯದಲ್ಲಿ ನಿರತನಾಗುವುದು ಮಾತಿನ ತಪಸ್ಸು.
