ರಾಮನಾಥಪುರ: ಬೆಟ್ಟದಪುರದ ಸಲೀಲಾಖ್ಯ ಮಠ ಹಾಗೂ ಕನ್ನಡ ಮಠದಲ್ಲಿ ರಾಜಗುರುತಿಲಕ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111ನೇ ಜಯಂತಿ ಆಚರಣೆ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಠಿ ಕಾರ್ಯಕ್ರಮವನ್ನು ಅಕ್ಟೋಬರ್ 6ರಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಶ್ರೀ ಶಿವರಾತ್ರೇಶ್ವರ ಧಾರ್ಮಿಕ ದತ್ತಿಯಿಂದ ಬೆಳಿಗ್ಗೆ 6 ಗಂಟೆಯಿಂದ ಲಿಂಗಧಾರಣೆ ಕಾರ್ಯಕ್ರಮ ನಡೆಯಲಿದೆ ಎಂದು ಬೆಟ್ಟದಪುರ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಮಹಾಸ್ವಾಮೀಜಿ ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕ, ಬಸವ ಬಳಗ ಹಾಗೂ ವಿವಿಧ ವೀರಶೈವ ಲಿಂಗಾಯತ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ವೆಂಕಟೇಶ್ ಅವರನ್ನು ಬೆಟ್ಟದಪುರ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಮಹಾಸ್ವಾಮೀಜಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶ್ ಅವರು ಭೇಟಿ ಮಾಡಿ, ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಿದರು. ಇದಕ್ಕೆ ಶಾಸಕ ವೆಂಕಟೇಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಸಮ್ಮತಿಸಿದರು.
ಈ ಸಂದರ್ಭದಲ್ಲಿ ಮಹಾಸಭಾ ಅಧ್ಯಕ್ಷ ಪರಮೇಶ್, ಕತ್ತವಳ್ಳಿ ಹೊಲದಪ್ಪ, ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಕುಮಾರಸ್ವಾಮಿ ರಾಮನಾಥಪುರ
