ಕೊರಟಗೆರೆ:- ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಅರಿಯಲು ಕೇಂದ್ರ ಬರ ಅಧ್ಯಯನ ತಂಡವು ಶನಿವಾರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕ್ಷೇತ್ರಮಟ್ಟದಲ್ಲಿ ಪರಿಶೀಲನೆ ನಡೆಸಿತು.

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು, ಐಎಎಸ್ ಅವರ ನೇತೃತ್ವದ ತಂಡವು ತಾಲ್ಲೂಕಿನ ಕಂಬದಹಳ್ಳಿ ಹಾಗೂ ಟಿ ಗೊಲ್ಲಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿ, ಮಳೆ ಕೊರತೆಯಿಂದಾಗಿರುವ ಪರಿಣಾಮ ಹಾಗೂ ರೈತರ ಸಂಕಷ್ಟದ ಕುರಿತು ಮಾಹಿತಿ ಸಂಗ್ರಹಿಸಿತು.

ಕಂಬದಹಳ್ಳಿ ಗ್ರಾಮದ ರೈತ ರಂಗನಾಥಪ್ಪ ಅವರ ಜಮೀನಿಗೆ ಭೇಟಿ ನೀಡಿದ ತಂಡವು ರಾಗಿ, ಶೇಂಗಾ ಹಾಗೂ ಮುಸುಕಿನ ಜೋಳದ ಬೆಳೆಗಳನ್ನು ಪರಿಶೀಲಿಸಿತು. ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿರುವುದು, ಕೆಲವು ಕಡೆ ಬೆಳೆಗಳು ಬಾಡಿ ನೆಲಕಚ್ಚಿರುವುದನ್ನು ಅಧಿಕಾರಿಗಳು ಸ್ಥಳದಲ್ಲೇ ವೀಕ್ಷಿಸಿದರು. ಬೆಳೆ ಹಾನಿಯ ಪ್ರಮಾಣ ಹಾಗೂ ರೈತರಿಗೆ ಉಂಟಾಗಿರುವ ನಷ್ಟದ ಕುರಿತು ರೈತರಿಂದ ಮಾಹಿತಿ ಪಡೆದರು.

ಬಳಿಕ ಟಿ.ಗೊಲ್ಲಹಳ್ಳಿ ಸಮೀಪದ ಮುತ್ತರಾಯನ ಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಭೇಟಿ ನೀಡಿದ ತಂಡವು ವಿಬಿ–ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿತು. ಕಾಮಗಾರಿಯಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರಿಂದ ಕೆಲಸದ ಸ್ಥಿತಿ, ಉದ್ಯೋಗದ ಲಭ್ಯತೆ ಹಾಗೂ ಯೋಜನೆಯಿಂದ ದೊರೆಯುತ್ತಿರುವ ಪ್ರಯೋಜನಗಳ ಕುರಿತು ಮಾಹಿತಿ ಪಡೆಯಿತು.
ರೈತರ ಅಹವಾಲು ಆಲಿಕೆ
ಕ್ಷೇತ್ರ ಪರಿಶೀಲನೆಯ ಸಂದರ್ಭದಲ್ಲಿ ರೈತರು ಕೇಂದ್ರ ತಂಡದ ಮುಂದೆ ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಎದುರಾಗಿರುವ ಸಂಕಷ್ಟ, ಬೆಳೆ ಹಾನಿ, ಉತ್ಪಾದನೆ ಕುಸಿತ ಹಾಗೂ ಆರ್ಥಿಕ ನಷ್ಟದ ಕುರಿತು ವಿವರಿಸಿದರು. ರೈತರ ಅಹವಾಲುಗಳನ್ನು ತಂಡ ದಾಖಲಿಸಿಕೊಂಡಿತು.
ಕೇಂದ್ರ ಬರ ಅಧ್ಯಯನ ತಂಡದಲ್ಲಿ ಲೆಫ್ಟಿನೆಂಟ್ ಕರ್ನಲ್ ಅಮರಿಂದರ್ ಸಿಂಗ್, ನೀತಿ ಆಯೋಗ, ಸಂಸದ್ ಮಾರ್ಗ, ನವದೆಹಲಿ ಹಾಗೂ ಡಾ. ಜೆ. ಹರ್ಷ, ನಿರ್ದೇಶಕ (ಮೋನ್), ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತಹಶೀಲ್ದಾರ್ ಕೆ. ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕೇಂದ್ರ ತಂಡದೊಂದಿಗೆ ಸ್ಥಳ ಪರಿಶೀಲನೆಯಲ್ಲಿ ಹಾಜರಿದ್ದರು.
ಜಿಲ್ಲೆಯಲ್ಲಿ 1.92 ಲಕ್ಷ ಎಕರೆ ಬೆಳೆ ಹಾನಿ: ಶುಭ ಕಲ್ಯಾಣ್
ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದಾಗಿ ವ್ಯಾಪಕ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಸುಮಾರು 1.92 ಲಕ್ಷ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 6 ಲಕ್ಷ ರೈತರಿದ್ದು, 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಹಾಗೂ ಶೇಂಗಾ ಬೆಳೆ ಬೆಳೆಯಲಾಗಿದೆ. ಮುಂಗಾರು ಅವಧಿಯಲ್ಲಿ 348 ಮಿ.ಮೀ. ಮಳೆಯಾಗಬೇಕಾಗಿದ್ದರೂ ಈ ಬಾರಿ ಕೇವಲ 148 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಸುಮಾರು ಶೇ 40ರಷ್ಟು ಮಳೆ ಕೊರತೆಯಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ 10 ತಾಲ್ಲೂಕುಗಳಲ್ಲಿಯೂ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರವಾಗಿ ಬಾಧಿತವಾಗಿವೆ. ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಪರಿಹಾರವಾಗಿ ₹150 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಗೆ ಆಗಮಿಸಿದ್ದು, ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಕ್ಷೇತ್ರಮಟ್ಟದಲ್ಲಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸುತ್ತಿದೆ. ರೈತರಿಂದ ನೇರವಾಗಿ ಮಾಹಿತಿ ಪಡೆದು ಬೆಳೆ ಹಾನಿ ಹಾಗೂ ಮಳೆ ಕೊರತೆಯಿಂದ ಉಂಟಾಗಿರುವ ಪರಿಣಾಮಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಕೇಂದ್ರ ತಂಡದ ಪರಿಶೀಲನೆ ಮತ್ತು ವರದಿಯ ಆಧಾರದ ಮೇಲೆ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಮುಂದಿನ ಕ್ರಮಗಳನ್ನು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳುವ ನಿರೀಕ್ಷೆಯಿದೆ.
