IPL 2025- ಎರಡು ಬಲಿಷ್ಠ ತಂಡಗಳು ಹೈವೋಲ್ಟೇಜ್ ಕಾಳಗಕ್ಕೆ ಸಜ್ಜಾಗಿವೆ. ಕಿಕ್ಕಿರಿದು ತುಂಬುವ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲು ಆರ್ಸಿಬಿ ಹಾಗೂ ಸಿಎಸ್ಕೆ (RCB vs CSK) ತಯಾರಿ ನಡೆಸಿವೆ. ಈ ಎರಡು ತಂಡಗಳ ಪಂದ್ಯ ಚೆನ್ನೈ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಆರ್ಸಿಬಿ ತನ್ನ 17 ವರ್ಷಗಳ ಗೆಲುವಿನ ಬರವನ್ನು ನೀಗಿಸಿಕೊಳ್ಳಲು ಪ್ರಯತ್ನಿಸಿದರೆ, ಇತ್ತ ಸಿಎಸ್ಕೆ ಕೂಡ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಎದುರು ನೋಡುತ್ತಿದೆ. ವಾಸ್ತವವಾಗಿ ಆರ್ಸಿಬಿ ತಂಡವು ಇದುವರೆಗೆ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್ಕೆ ತಂಡವನ್ನು ಒಮ್ಮೆ ಮಾತ್ರ ಸೋಲಿಸಿದೆ. 2008 ರಲ್ಲಿ ನಡೆದಿದ್ದ ಮೊದಲ ಐಪಿಎಲ್ನಲ್ಲಿ ಆರ್ಸಿಬಿ, ಸಿಎಸ್ಕೆ ತಂಡವನ್ನು ಅವರ ತವರು ನೆಲದಲ್ಲಿ ಸೋಲಿಸಿತ್ತು. ಅದನ್ನು ಹೊರತುಪಡಿಸಿ, ಆರ್ಸಿಬಿಗೆ ಚೆನ್ನೈ ನಲ್ಲಿ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ.
ಚೆಪಾಕ್ ಚೆನ್ನೈನ ಭದ್ರಕೋಟೆ
ಆರ್ಸಿಬಿಯ ಗೆಲುವಿನ ಕನಸನ್ನು ನನಸಾಗಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಚೆನ್ನೈ ತಂಡ ಯಾವಾಗಲೂ ತನ್ನ ತವರು ಮೈದಾನದಲ್ಲಿ ಮೇಲುಗೈ ಸಾಧಿಸಿದೆ. ವಿಶೇಷವಾಗಿ ಸ್ಪಿನ್ನರ್ಗಳಿಗೆ ಸಾಕಷ್ಟು ಸಹಾಯ ಸಿಗುವ ಪಿಚ್ನಲ್ಲಿ ಸಿಎಸ್ಕೆ ತಂಡವನ್ನು ಮಣಿಸುವುದು ಸುಲಭದ ಮಾತಲ್ಲ. ಸಿಎಸ್ಕೆ ತಂಡದಲ್ಲಿ ರವೀಂದ್ರ ಜಡೇಜಾ ಅವರಂತಹ ಅನುಭವಿ ಬೌಲರ್ಗಳಿದ್ದು, ಕಳೆದ ವರ್ಷದ ಹರಾಜಿನಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಖರೀದಿಸಲಾಗಿದೆ. ಇವರೊಂದಿಗೆ ಅಫ್ಘಾನಿಸ್ತಾನದ ಎಡಗೈ ವೇಗಿ ನೂರ್ ಅಹ್ಮದ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು, ಈ ಮೂವರು ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದರು. ಈ ಸ್ಪಿನ್ನರ್ಗಳು ಮುಂಬೈ ವಿರುದ್ಧ 11 ಓವರ್ಗಳಲ್ಲಿ ಕೇವಲ 70 ರನ್ಗಳಿಗೆ 5 ವಿಕೆಟ್ಗಳನ್ನು ಪಡೆದರು.
ಈ ಪಂದ್ಯದಲ್ಲೂ ಪಿಚ್ ಇದೇ ರೀತಿ ವರ್ತಿಸುವ ನಿರೀಕ್ಷೆಯಿದೆ. ಹೀಗಾಗಿ ಆರ್ಸಿಬಿ ಬ್ಯಾಟ್ಸ್ಮನ್ಗಳು, ವಿಶೇಷವಾಗಿ ಕೊಹ್ಲಿ, ಅನುಭವಿ ಸಿಎಸ್ಕೆ ಬೌಲರ್ಗಳ ವಿರುದ್ಧ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಬೇಕಾಗುತ್ತದೆ. ಈ ಮೈದಾನದಲ್ಲಿ ಆಕ್ರಮಣಶೀಲತೆ ಮಾತ್ರ ಕೆಲಸ ಮಾಡುವುದಿಲ್ಲ, ಬದಲಿಗೆ ಸ್ಪಿನ್ನರ್ಗಳನ್ನು ಬುದ್ಧಿವಂತಿಕೆಯಿಂದ ಎದುರಿಸಬೇಕಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಕೊಹ್ಲಿ ಸ್ಪಿನ್ ವಿರುದ್ಧ ತಮ್ಮ ಆಟವನ್ನು ಬಹಳಷ್ಟು ಸುಧಾರಿಸಿಕೊಂಡಿದ್ದಾರೆ. ವಿಶೇಷವಾಗಿ ಸ್ವೀಪ್ ಮತ್ತು ಸ್ಲಾಗ್ ಸ್ವೀಪ್ ಹೊಡೆತಗಳ ಮೂಲಕ ಸ್ಪಿನ್ನರ್ ವಿರುದ್ಧ ರನ್ಗಳಿಸುವ ಕೊಹ್ಲಿ ಈ ಪಂದ್ಯದಲ್ಲೂ ಅದೇ ತಂತ್ರವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
