ಬೆಂಗಳೂರು: ಇಂದಿನ ದಿನಮಾನಗಳಲ್ಲಿ ಯಾವುದೇ ಪ್ರಶಸ್ತಿ ಹಾಗೂ ಗೌರವಗಳು ಪಾರದರ್ಶಕತೆ ಮತ್ತು ಪ್ರಜಾಸತ್ತಾತ್ಮಕ ನೆಲೆಯಲ್ಲಿ ನೈಜ ಸಾಧಕರಿಗೆ ಸಲ್ಲಬೇಕು ಎಂದು ನಾಟಕಕಾರ ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಕೆ.ವೈ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಶೇಷಾದ್ರಿಪುರಂ ಸನ್ಮಾನ್ ಹೋಟೆಲ್ ಸಭಾಂಗಣದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.), ಸಿದ್ಧನಹಳ್ಳಿ ವತಿಯಿಂದ ಆಯೋಜಿಸಿದ್ದ ಸಾಹಿತಿ ರಾಂ.ಕೆ. ಹನುಮಂತಯ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಅರ್ಜಿ ಆಹ್ವಾನಿಸಿ ಪ್ರಶಸ್ತಿ ನೀಡುವ ಬದಲು, ಸಾಧಕರನ್ನು ಗುರುತಿಸಿ ಕರೆಸಿ ಗೌರವಿಸುತ್ತಿರುವ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ನ ಕಾರ್ಯ ಅಭಿನಂದನೀಯ ಎಂದರು.

ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ ಅನೇಕ ಸಾಧಕರು ಇದ್ದಾರೆ. ಆದರೆ ಪ್ರಶಸ್ತಿಗಾಗಿ ನಿರಂತರವಾಗಿ ಪ್ರಯತ್ನಿಸುವ ಹಾಗೂ ಪದೇಪದೇ ಪ್ರಶಸ್ತಿ ಪಡೆಯುವ ಪ್ರವೃತ್ತಿಯೂ ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ನೈಜ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯ ಡಾ. ನಾಗರಾಜ್ ಹೀರಾ ಅವರ ‘ಚಿನ್ನದ ನಾಡಿನ ಶರಣರು’, ಚಾಮರಾಜನಗರ ಜಿಲ್ಲೆಯ ದಿಲೀಪ್ ಎನ್.ಕೆ. ಅವರ ‘ತಿತ್ತಿಬ್ವಾಸನ ಟೈಟಾನ್ ವಾಚು’ ಕಥಾ ಸಂಕಲನ, ಹಾಸನ ಜಿಲ್ಲೆಯ ಶ್ರೀಮತಿ ಇಂದಿರಾ ನಾಡಿಗ್ ಅವರ ‘ಹಸಿಗನಸು’ ಕಾದಂಬರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಎ. ಲಕ್ಷ್ಮೀನಾಥ್ ಅವರ ‘ಹನಿ ಹನಿ ಕಾವ್ಯ’ ಸಂಕಲನಗಳಿಗೆ ರಾಂ.ಕೆ. ಹನುಮಂತಯ್ಯ ಪುಸ್ತಕ ದತ್ತಿ ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸ ತಂದಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿಕ್ಷಣ ತಜ್ಞೆ ಡಾ. ಗೀತಾ ರಾಮಾನುಜಂ ಅವರು ಸಮಾಜ ಸೇವಕ ಪಾನ್ಯಂ ನಟರಾಜ್ ಸಂಸ್ಕೃತಿ ದತ್ತಿ ಪ್ರಶಸ್ತಿಯನ್ನು ಕವಯಿತ್ರಿ ಸುಮಾ ಸತೀಶ್, ಗಾಯಕ ಆನಂದ ಮಾದಲಗೆರೆ ಹಾಗೂ ಅಭಿನವ ಪ್ರಕಾಶನದ ರವಿಕುಮಾರ್ ಅವರಿಗೆ ಪ್ರದಾನ ಮಾಡಿದರು.
ನಂತರ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣ ವ್ಯವಸ್ಥೆ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಬದುಕು ಮತ್ತು ಬರವಣಿಗೆಯಲ್ಲಿ ಪ್ರಾಮಾಣಿಕತೆಯೊಂದಿಗೆ ಸಮತೋಲನ ಕಾಯ್ದುಕೊಂಡಾಗ ಮಾತ್ರ ಬರೆದಂತೆ ಬದುಕಲು ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹಾಗೂ ದತ್ತಿ ದಾನಿ ಹನುಮಂತಯ್ಯ ಮಾತನಾಡಿ, ಜಾತಿ, ಧರ್ಮ, ಪಂಥಗಳ ಎಲ್ಲೆಗಳನ್ನು ಮೀರಿ ಸಂಸ್ಥೆಯ ಧ್ಯೇಯದಂತೆ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ದತ್ತಿ ಸ್ಥಾಪಿಸಲಾಗಿದೆ. ಹಣ, ಫಲ, ಫಲಕ ಹಾಗೂ ಶಾಲು ನೀಡಿ ಸಾಧಕರನ್ನು ಗೌರವಿಸುವ ಮೂಲಕ ದತ್ತಿಯ ಉದ್ದೇಶ ಈಡೇರಿರುವುದು ಸಂತಸ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ 78ನೇ ವಯಸ್ಸಿಗೆ ಕಾಲಿಟ್ಟಿರುವ ಸಮಾಜ ಸೇವಕ ಹಾಗೂ ಸಾಹಿತಿ ಪಾನ್ಯಂ ನಟರಾಜ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಸಾಮಾಜಿಕ ಸೇವೆಗಾಗಿ ಸಿದ್ಧನಹಳ್ಳಿ ಚಿಕ್ಕತಿಮ್ಮಯ್ಯ, ಯುವ ಮುಖಂಡ ಪವನ್ ಕುಮಾರ್ ಹಾಗೂ ಕಥೆಗಾರ ಜಯಶಂಕರ್ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಡಾ. ಎಸ್. ರಾಮಲಿಂಗೇಶ್ವರ್ (ಸಿಸಿರಾ) ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಲೇಖಕಿ ಶಾಂತಿ ವಾಸು, ಗಾಯಕಿ ಅಂಬುಜಾ ಬೀರೇಶ್, ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ನ ಇಂದಿರಾ ಕೃಷ್ಣಪ್ಪ, ಸಾಹಿತಿ ಕೆ.ಎಂ. ರೇವಣ್ಣ, ಬಸವಲಿಂಗ, ವಿಜಯ್ ಶಾಸ್ತ್ರಿ ಮಠ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

