ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಹೊರತಂದಿರುವ 9ನೇ ತರಗತಿಯ ನೂತನ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕರ್ನಾಟಕದ ವೀರ ರಾಣಿ ಅಬ್ಬಕ್ಕಳ ವೀರಗಾಥೆಯನ್ನು ಸೇರ್ಪಡೆಗೊಳಿಸಿರುವುದನ್ನು ಕದಂಬ ಸೈನ್ಯ ಸ್ವಾಗತಿಸುತ್ತದೆ.
ಕ್ರಿ.ಶ. 1525ರಿಂದ 1570ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲವನ್ನು ಆಳಿದ ವೀರ ರಾಣಿ ಅಬ್ಬಕ್ಕ ಚೌಟ ಪ್ರಬಲ ಪೋರ್ಚುಗೀಸ್ ನೌಕಾಪಡೆಯನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಿದ ಐತಿಹಾಸಿಕ ಸಾಹಸವನ್ನು ಪಠ್ಯದಲ್ಲಿ ಸೇರಿಸಲಾಗಿದೆ.

ಅದೇ ರೀತಿ ವಿಜಯನಗರ ಸಾಮ್ರಾಜ್ಯದ ಯುವರಾಜ ಕುಮಾರ ಕಂಪಣ ತಮಿಳುನಾಡಿನ ಮಧುರೈ ಸುಲ್ತಾನರ ವಿರುದ್ಧದ ಯುದ್ಧದಲ್ಲಿ ದೇವಿ ನೀಡಿದ್ದ ದಿವ್ಯ ಖಡ್ಗವನ್ನು ಬಳಸಿ ವಿಜಯ ಸಾಧಿಸಿದ್ದರು ಎಂಬ ಐತಿಹ್ಯವನ್ನು NCERT ತನ್ನ ನೂತನ ಪಠ್ಯಪುಸ್ತಕದಲ್ಲಿ ಸೇರಿಸಿರುವುದು ಶ್ಲಾಘನೀಯ.

ಹಾಗೆಯೇ ಕ್ರಿ.ಶ. 345ರಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಮತ್ತು ಕನ್ನಡಿಗರನ್ನು ಒಗ್ಗೂಡಿಸಿ ಪ್ರಥಮ ಬಾರಿಗೆ ಸಾಮ್ರಾಜ್ಯ ಸ್ಥಾಪನೆ ಮಾಡಿದ *ಕದಂಬ ಮಯೂರ ವರ್ಮ* ಮತ್ತು ದಕ್ಷಿಣ ಪಥೇಶ್ವರ *ಚಾಲುಕ್ಯ ಇಮ್ಮಡಿ ಪುಲಿಕೇಶಿ* ಅವರ ಇತಿಹಾಸವನ್ನು ಕೂಡ ಕೇಂದ್ರ NCERT ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದು
ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಅವರು ಕೋರಿದ್ದಾರೆ.
