ಕೆ.ಆರ್.ಪೇಟೆ,ಅ.15: ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ರಾಜಕೀಯ ವಿವಾದಕ್ಕೆ ಎಳೆದು ತರಬಾರದು. ನಾವು ತಾಲೂಕಿನ ಯಾವುದೇ ಡೇರಿಗೆ ಅನ್ಯಾಯ ಮಾಡಿಲ್ಲ. ಅನ್ಯಾಯವಾಗಿದ್ದರೆ ದಾಖಲೆಗಳ ಸಹಿತ ಸಾಬೀತುಪಡಿಸಿ.
ಕೇವಲ ರಾಜಕೀಯ ಟೀಕೆಗಾಗಿ ನನ್ನನ್ನು ಅವಾಚ್ಯ ಶಬ್ದಗಳಿಂದ ತಮ್ಮ ಬೆಂಬಲಿಗರಿಂದ ಟೀಕಿಸುವುದು ಶಾಸಕರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಇದು ನಿಲ್ಲದಿದ್ದರೆ ನಾವೂ ಸಹ ಅದೇ ದಾಟಿಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಮನ್ಮುಲ್ ನಿರ್ದೇಶಕ ಡಾಲುರವಿ, ಶಾಸಕ ಎಚ್.ಟಿ.ಮಂಜು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಾಲು ಉತ್ಪಾದಕರು ಹಾಗೂ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು ಮೊನ್ನೆ ಹಾಲು ಶಿಥಲೀಕರಣದ ಮುಂದೆ ಜೆಡಿಎಸ್ ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರು ಆರೋಪಿಸಿದ್ದ ವಿಚಾರಗಳಿಗೆ ಸೂಕ್ತ ದಾಖಲೆ ಪ್ರದರ್ಶನ ಮಾಡಿ ಮಾತನಾಡಿದರು.

ಹಿಂದೆ ಶಾಸಕರೇ ಮನ್ಮುಲ್ ನಿರ್ದೇಶಕರಾಗಿದ್ದ ವೇಳೆ ಎಲ್ಲರೂ ಸೌಹಾರ್ದತೆಯಿಂದ ಕೆಲಸ ಮಾಡಿರಲಿಲ್ಲವೇ? ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಿಂದೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸುತ್ತಿದ್ದವು. ಆಗ ಡೇರಿಗಳ ವಿಚಾರದಲ್ಲಿ ಇಷ್ಟೊಂದು ರಾಜಕೀಯ ಸಂಘರ್ಷಗಳಿರಲಿಲ್ಲ. ನಾನು ಕಾಂಗ್ರೆಸ್ನಿಂದ, ನೀವು ಜೆಡಿಎಸ್ನಿಂದ ನಿರ್ದೇಶಕರಾಗಿದ್ದಾಗ ಯಾವ ಊರಿನ ಡೇರಿಯಲ್ಲಿ ಇಂತಹ ಸಮಸ್ಯೆ ಉಂಟಾಗಿತ್ತು? ಆಗಲೂ ಕ್ಷೇತ್ರದಲ್ಲಿ ಶಾಸಕರಿರಲಿಲ್ಲವೇ? ಅವರು ನಿಮ್ಮಂತೆಯೇ ವರ್ತಿಸುತ್ತಿದ್ದರೇ ಎಂದು ಡಾಲು ರವಿ ಪ್ರಶ್ನಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲೇನಹಳ್ಳಿ ಎಂ.ಮೋಹನ್, ರೈತ ಮೋರ್ಚಾ ಅಧ್ಯಕ್ಷ ಹೆಳವೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಲದೇವ್, ಹಾಗೂ ಕಿಕ್ಕೇರಿ ಮಧು ನನ್ನನ್ನು ಭಾರೀ ಲಘುವಾಗಿ ಮಾತನಾಡಿದ್ದಾರೆ. ಇವರೆಲ್ಲರಿಗೂ ಅದೇ ದಾಟಿಯಲ್ಲಿ ಉತ್ತರ ನೀಡುತ್ತೇನೆ ಎಂದರು.
ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ’ ನಾನು ಸಾವಿರಾರು ಜನರ ಮಧ್ಯೆ ಜೆಡಿಎಸ್ ಸೇರಿದ್ದೇನೆ. ಈಗಲೂ ಜೆಡಿಎಸ್ನಲ್ಲಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ನಾನು ಜೆಡಿಎಸ್ ಬಿಡುತ್ತೇನೆ ಎಂಬುದರ ಬಗ್ಗೆ ಯಾರೂ ಕನಸು ಕಾಣಬೇಡಿ ಎಂದು ಡಾಲು ರವಿ ಸ್ಪಷ್ಟಪಡಿಸಿದರು.
ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ಮಹಾದೇವೇಗೌಡ ಅವರು ಸುಮಾರು 5ವರ್ಷಗಳ ಕಾಲ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ವಡ್ಡರಹಳ್ಳಿ ಡೇರಿಯಿಂದ ಪೂರೈಕೆ ಮಾಡಿದ ಹಾಲಿನ ಹಣವನ್ನು ಸುಮಾರು 20ಲಕ್ಷಕ್ಕೂ ಹೆಚ್ಚು ಹಣವನ್ನು ತಮ್ಮ ವಯಕ್ತಿಕ ಖಾತೆಗೆ ಜಮಾ ಮಾಡಿಸಿಕೊಂಡು ಅವ್ಯವಹಾರ ಮಾಡಿದ್ದಾರೆ.
ಅದೇ ರೀತಿ ಐಕನಹಳ್ಳಿಕೊಪ್ಪಲು ಡೇರಿಯಲ್ಲೂ ಲಕ್ಷಾಂತರ ರೂ ಅವ್ಯವಹಾರ ನಡೆದಿದೆ. ಇಬ್ಬರೂ ಶಾಸಕರ ಕಟ್ಟಾ ಬೆಂಬಲಿಗರೇ ಆಗಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ನಾವು ಸರಿಯಿಲ್ಲ.
ಅದು ರೈತರ ಬೆವರಿನ ಹಣ ಲೋಪವಾಗದಂತೆ ತಡೆಯಲು ನಮ್ಮನ್ನು ಹಾಲು ಉತ್ಪಾದಕರು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ. ಅದನ್ನು ನಾನು ಮತ್ತು ಹರೀಶಣ್ಣ ಇಬ್ಬರೂ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಡೇರಿಗಳಲ್ಲಿ ಸೌಲಭ್ಯ ವಿತರಣೆಗೆ ನಮ್ಮ ಇಷ್ಟದಂತೆ ಎಲ್ಲಾ ಡೇರಿಗಳಿಗೂ ಆಧ್ಯತೆ ಮೇರೆಗೆ ನೀಡುತ್ತಿದ್ದೇವೆ. ಆದರೆ ಶಾಸಕರು ತಮ್ಮ ಅನುಧಾನವನ್ನು ತಾಲ್ಲೂಕಿನಲ್ಲಿ ಸರಿಯಾಗಿ ಹಾಕುತ್ತಿದ್ದಾರೆಯೇ? ಎಲ್ಲೆಲ್ಲಿ ಹಾಕುತ್ತಿದ್ದಾರೆ.
ಯಾವ ಊರುಗಳಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂಬುದು ಅಂಕಿ ಅಂಶಗಳ ಸಮೇತ ಮಾಹಿತಿ ಗೊತ್ತಿದೆ. ಆದರೆ ನಾವು ಶಾಸಕರ ಅನುಧಾನ ವಿತರಣೆಯಲ್ಲಿ ಹಸ್ತಕ್ಷೇಪ ಮಾಡಿರುವುದಿಲ್ಲ. ಆದರೆ ಶಾಸಕರು ಡೇರಿಗಳಲ್ಲಿ ತಮ್ಮ ರಾಜಕೀಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ತಮ್ಮ ಬೆಂಬಲಿತ ಡೇರಿಗಳ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆಗಳಲ್ಲಿ ನಮ್ಮಿಬ್ಬರ ಹೆಸರನ್ನು ಹಾಕಿಸದೇ ಅವಮಾನ ಮಾಡಿದ್ದಾರೆ. ಇದು ರಾಜಕೀಯ ಹಸ್ತಕ್ಷೇಪ ಅಲ್ಲವೇ ಎಂದು ಪ್ರಶ್ನಿಸಿದರು.
ಯಾವುದೇ ಡೇರಿಗೆ ಅನ್ಯಾಯವಾಗಿದ್ದರೆ ನಿರ್ದಿಷ್ಟವಾಗಿ ಆ ಸಂಘದ ಹೆಸರನ್ನು ಉಲ್ಲೇಖಿಸಿ, ಏನು ಅನ್ಯಾಯವಾಗಿದೆ ಎಂಬುದನ್ನು ಸಾಬೀತುಪಡಿಸಲಿ. ಆಧಾರ ರಹಿತ ಆರೋಪಗಳಿಂದ ಹಾಲು ಉತ್ಪಾದಕರಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಅವರು ಸವಾಲು ಹಾಕಿದರು.
ಹಾಲಿನ ಪುಡಿ ಹಗರಣದಲ್ಲಿ ತಪ್ಪಿತಸ್ಥರಾದರೆ ರಾಜೀನಾಮೆ:
ಹಾಲಿನ ಪುಡಿ ಹಗರಣದಲ್ಲಿ ನಾನು ತಪ್ಪಿತಸ್ಥ ಎಂಬುದನ್ನು ಸಾಬೀತುಪಡಿಸಿದರೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ. ರಾಜೀನಾಮೆ ನೀಡಿ ಹೊರಬರುತ್ತೇನೆ ಎಂದು ಘೋಷಿಸಿದ್ದಾರೆ.
*ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ* :ನಿಮ್ಮ ರಾಜಕೀಯ ಬೆದರಿಕೆಗಳಿಗೆ, ವಯಕ್ತಿಕ ಟೀಕೆಗಳಿಗೆ, ಹೆದರುವುದಿಲ್ಲ. ನಿಮ್ಮ ಬೆಂಬಲಿಗರನ್ನು ಹತೋಟಿಯಲ್ಲಿಟ್ಟುಕೊಳ್ಳಿ. ಇಲ್ಲವೇ ಇನ್ನೂ ಒಂದೂವರೆ ವರ್ಷವಿದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ, ನಿಮ್ಮ ಎದುರು ನಾನೇ ನಿಲ್ಲುತ್ತೇನೆ. ಗೆದ್ದು ನನ್ನ ಶಕ್ತಿ ಏನೆಂದು ತೋರಿಸುತ್ತೇನೆ ಎಂದು ಶಾಸಕ ಎಚ್.ಟಿ.ಮಂಜು ಅವರಿಗೆ ಡಾಲು ರವಿ ನೇರ ಸವಾಲು ಹಾಕಿದರು.
ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಮಾತನಾಡಿ, ಹಾಲು ಉತ್ಪಾದಕರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ನಡೆಸಿದ ಜೆಡಿಎಸ್ ಮುಖಂಡರು, ಉತ್ಪಾದಕರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಡಾಲು ರವಿ ಅವರನ್ನು ಟೀಕಿಸುವುದರಲ್ಲೇ ನಿರತರಾಗಿದ್ದೇಕೆ? ಡಾಲು ರವಿ ಅವರನ್ನು ಟೀಕಿಸುವುದೇ ನಿಮ್ಮ ಉದ್ದೇಶವಾಗಿದ್ದರೆ ಖಾಸಗಿ ವೇದಿಕೆಯಲ್ಲಿ ಟೀಕಿಸಬಹುದಿತ್ತಲ್ಲವೇ? ಅದಕ್ಕೆ ಮನ್ಮುಲ್ ಶಿಥಲೀಕರಣ ಕೇಂದ್ರವನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಶಾಸಕ ಎಚ್.ಟಿ.ಮಂಜು ಹಾಗೂ ಜೆಡಿಎಸ್ ಮುಖಂಡರನ್ನು ಪ್ರಶ್ನಿಸಿದರು.
ಹಾಲಿನ ಪುಡಿ ಕಲಬೆರಕೆಯಲ್ಲಿ ನಮ್ಮ ಪಾತ್ರವಿಲ್ಲ: ಹಾಲಿನ ಪುಡಿ ಕಲಬೆರಕೆ ಪ್ರಕರಣದಲ್ಲಿ ನನ್ನ ಹಾಗೂ ಡಾಲು ರವಿ ಅವರ ಪಾತ್ರವಿದೆ ಎಂದು ಆರೋಪಿಸುವವರಿಗೆ ಸವಾಲು ಹಾಕುತ್ತೇನೆ. ನನ್ನ ಮಕ್ಕಳಾಣೆಗೂ ಈ ಪ್ರಕರಣದಲ್ಲಿ ನಮ್ಮ ಪಾತ್ರವಿಲ್ಲ ಎಂದು ಹರೀಶ್ ಖಾರವಾಗಿ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಎಂ.ಪಿ.ಲೋಕೇಶ್, ಬ್ಯಾಂಕ್ ನಿರ್ದೇಶಕರಾದ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ, ಶೀಳನೆರೆ ರಾಮೇಗೌಡ, ಸಾರಂಗಿ ವಿಶ್ವನಾಥ್, ನಾಗೇಶ್, ಪರಮೇಶ್, ಸಾಧುಗೋನಹಳ್ಳಿ ಲೋಕೇಶ್ ಸೇರಿದಂತೆ ಸಾವಿರಾರು ಬೆಂಬಲಿಗರು ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
