ನವದೆಹಲಿ, ಅ. 22: ಪೊಲೀಸರ ಹೆಚ್ಚುವರಿ ಬಂಧನದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಿದೆ. ಸಾರ್ವಜನಿಕ ಶಾಂತಿ ಕಾಪಾಡುವುದು ಹಾಗೂ ಕಾನೂನನ್ನು ಗೌರವಿಸುವುದಾಗಿ ಲಿಖಿತ ಭರವಸೆ ನೀಡಿದ ಬಳಿಕ ಇಬ್ಬರೂ ಬಿಡುಗಡೆಯಾಗಿದ್ದಾರೆ.
ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪೊಲೀಸರ ಮೂರು ದಿನಗಳ ಹೆಚ್ಚುವರಿ ಬಂಧನದ ಕೋರಿಕೆಯನ್ನು ತಿರಸ್ಕರಿಸಿ, ತಲಾ ₹50,000 ವೈಯಕ್ತಿಕ ಬಾಂಡ್ ಹಾಗೂ ಶ್ಯೂರಿಟಿ ಬಾಂಡ್ಗಳ ಮೇಲೆ ಬಿಡುಗಡೆಗೆ ಆದೇಶಿಸಿದೆ. ನ್ಯಾಯಾಲಯದ ಘನತೆಗೆ ಧಕ್ಕೆಯಾಗುವ ರೀತಿಯಲ್ಲಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರೂ ಬೇಷರತ್ ಕ್ಷಮೆಯಾಚಿಸಿ, ಭವಿಷ್ಯದಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಜಂತರ್ ಮಂತರ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸುವ ವಿಚಾರವಾಗಿಯೂ ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿದ್ದಾರೆ. ಕಾನೂನು ಪ್ರಕ್ರಿಯೆಯ ಮೂಲಕ ಪ್ರತಿಭಟನೆಗೆ ಸಂಬಂಧಿಸಿದ ನಿರ್ಬಂಧಗಳನ್ನು ತೆರವುಗೊಳಿಸುವವರೆಗೆ ಅಲ್ಲಿ ಪ್ರತಿಭಟನೆಗೆ ಕರೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಭವಿಷ್ಯದ ಪ್ರತಿಭಟನೆಗಳು ಸಂವಿಧಾನದ ಚೌಕಟ್ಟಿನೊಳಗೆ ನಡೆಯಲಿವೆ ಎಂಬ ಭರವಸೆಯನ್ನೂ ನೀಡಿದ್ದಾರೆ.
ಬಂಧನಕ್ಕೆ ಕಾರಣವೇನು?
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆಗೂ ಮುನ್ನ ಅಕ್ಟೋಬರ್ 10ರಂದು ಸೌರವ್ ದಾಸ್, ಅಶುತೋಷ್ ರಾಂಕಾ ಹಾಗೂ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಮುಚ್ಚಳಿಕೆ ನೀಡಿದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು.
ಅಕ್ಟೋಬರ್ 13ರಂದು ದಾಸ್ ಮತ್ತು ರಾಂಕಾ ಅವರು ಪ್ರತಿಭಟನೆಗೆ ನಿರ್ಬಂಧವಿದ್ದ ಜಂತರ್ ಮಂತರ್ನ ಗೇಟ್ ಹತ್ತಿ ಒಳನುಗ್ಗಲು ಯತ್ನಿಸಿ, ರಾಷ್ಟ್ರಧ್ವಜ ಹಾರಿಸಿ ಘೋಷಣೆ ಕೂಗಿದ ಆರೋಪದ ಮೇಲೆ ಮತ್ತೆ ಬಂಧನಕ್ಕೊಳಗಾಗಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಬಂಧನ ಅವಧಿ ವಿಸ್ತರಣೆಯನ್ನು ಪ್ರಶ್ನಿಸಿ ಇಬ್ಬರೂ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ನಂತರ ತಮ್ಮ ಅರ್ಜಿಯನ್ನು ಹಿಂಪಡೆದಿದ್ದರು ಎಂದು ವರದಿಯಾಗಿದೆ.
ನ್ಯಾಯಾಲಯವು ಪೊಲೀಸರ ಹೆಚ್ಚುವರಿ ಬಂಧನದ ಮನವಿಯನ್ನು ತಿರಸ್ಕರಿಸಿದ್ದು, ಬಾಂಡ್ಗಳ ಪರಿಶೀಲನಾ ವರದಿ ಸಲ್ಲಿಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ನಿಗದಿಪಡಿಸಲಾಗಿದೆ. ಇಬ್ಬರೂ ಮುಂದಿನ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ನಿರ್ದೇಶಿಸಿದೆ.
