ಕೊರಟಗೆರೆ: ದಸರಾ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ಪಟ್ಟಣದ ಗೋಕುಲ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಸಾಂಪ್ರದಾಯಿಕ ಶಮಿ ಪೂಜೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ತಾಲ್ಲೂಕು ಆಡಳಿತ, ದಂಡಾಧಿಕಾರಿಗಳು ಹಾಗೂ ಧಾರ್ಮಿಕ ತಂಡಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹಾಗೂ ದಂಡಾಧಿಕಾರಿ ಶರತ್ ಕುಮಾರ್ ಅವರು ಸಾಂಪ್ರದಾಯಿಕ ಮುಹೂರ್ತದಲ್ಲಿ ಬನ್ನಿ ಮರದ ಬಳಿ ಪಟ್ಟದ ಕತ್ತಿಯನ್ನಿಟ್ಟು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಆಚರಣೆಗೆ ಧಾರ್ಮಿಕ ಮೆರುಗು ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಸಮಸ್ತ ಜನತೆಗೆ ದಸರಾ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದ ಶರತ್ ಕುಮಾರ್, ಬನ್ನಿ ಮರದ ಪೂಜೆಯಿಂದ ಕ್ಷೇತ್ರದ ಎಲ್ಲರಿಗೂ ದೇವರ ಕೃಪೆ ಹಾಗೂ ಆಶೀರ್ವಾದ ದೊರೆಯಲಿ ಎಂದು ಹಾರೈಸಿದರು. ಉತ್ತಮ ಮಳೆ-ಬೆಳೆಯಾಗಿ ಜನರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಂತೋಷ ನೆಲೆಸಲಿ ಎಂದು ಪ್ರಾರ್ಥಿಸಿದರು.

ವಿಜಯದಶಮಿಯ ಸಂಭ್ರಮಕ್ಕೆ ಶಮಿ ಪೂಜೆಯೊಂದಿಗೆ ತೆರೆ
ವಿಜಯದಶಮಿ ಹಬ್ಬದಲ್ಲಿ ಬನ್ನಿ ಮರಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಯಂತೆ ಬನ್ನಿ ಮರವನ್ನು ದೈವಸ್ವರೂಪವಾಗಿ ಪೂಜಿಸಲಾಗುತ್ತದೆ. ದಸರಾ ಹಬ್ಬದ ಕೊನೆಯ ದಿನವಾದ ವಿಜಯದಶಮಿಯಂದು ಬನ್ನಿ ಪೂಜೆ ನೆರವೇರಿಸುವುದು ನಾಡಿನ ಹಲವು ಭಾಗಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ಈ ಕುರಿತು ಮಾತನಾಡಿದ ಗೊಂದಿಹಳ್ಳಿ ರಂಗರಾಜು, ವಿಜಯದಶಮಿ ಬಂದಾಗ ಬನ್ನಿ ಮರವನ್ನು ಭಕ್ತಿಯಿಂದ ಸ್ಮರಿಸುವುದು ನಮ್ಮ ಸಂಪ್ರದಾಯದ ಭಾಗವಾಗಿದೆ. ದಸರಾ ಸಂಭ್ರಮಕ್ಕೆ ಬನ್ನಿ ಪೂಜೆಯ ಮೂಲಕ ಧಾರ್ಮಿಕವಾಗಿ ತೆರೆ ಬೀಳುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆಯ ಸಿಇಒ ಉಮೇಶ್ ಕೆ.ಎಸ್., ಬಸವರಾಜ್, ಆರ್ಐ ರಘು, ವಿಎ ಪವನ್, ಗೊಂದಿಹಳ್ಳಿ ರಂಗರಾಜು, ಮಂಜುನಾಥ್ ಟಿ.ಕೆ.ಎಂ., ಸುರೇಶ್ ಎನ್.ಯು., ಕರವೇ ಅಧ್ಯಕ್ಷ ನರಸಿಂಹರಾಜು ಎಲ್. ಸೇರಿದಂತೆ ತಾಲ್ಲೂಕು ಆಡಳಿತದ ಸಿಬ್ಬಂದಿ ಹಾಗೂ ಅನೇಕರು ಭಾಗವಹಿಸಿ ಪೂಜೆಯಲ್ಲಿ ಪಾಲ್ಗೊಂಡರು.
ವರದಿ: ನರಸಿಂಹಯ್ಯ ಹೊಸಕೋಟೆ
