ಶ್ಲೋಕ – 10
ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ ।
ತ್ಯಾಗೀ ಸತ್ತ್ವಸಮಾವಿಷ್ಟೋ ಮೇಧಾವೀ ಛಿನ್ನಸಂಶಯಃ ॥೧೦॥
ನ ದ್ವೇಷ್ಟಿ ಅಕುಶಲಮ್ ಕರ್ಮ ಕುಶಲೇ ನ ಅನುಷಜ್ಜತೇ ।
ತ್ಯಾಗೀ ಸತ್ತ್ವಸಮಾವಿಷ್ಟಃ ಮೇಧಾವೀ ಛಿನ್ನಸಂಶಯಃ – ಮುದ ನೀಡದ ಕರ್ಮದ ಬಗ್ಗೆ ಹಗೆಯೂ ಇಲ್ಲ, ಮುದ ನೀಡುವ ಕರ್ಮದ ಬಗ್ಗೆ ಅತಿಯಾದ ನಂಟೂ ಇಲ್ಲ. ಇಂಥವನು ಸಾತ್ವಿಕ-ತ್ಯಾಗಿ. ಅವನು ತಿಳಿದವನು ಮತ್ತು ಸಂದೇಹವಳಿದವನು.
ಈ ಶ್ಲೋಕ ಒಬ್ಬ ಸಾತ್ವಿಕ ತ್ಯಾಗಿ ಯಾವ ರೀತಿ ತನ್ನ ಕರ್ಮಗಳನ್ನು ನೋಡುತ್ತಾನೆ ಎನ್ನುವುದನ್ನು ಹೇಳುತ್ತದೆ. ನಾವು ಮಾಡಿದ ಹಿಂದಿನ ಯಾವುದೋ ಒಂದು ಕರ್ಮದಿಂದ ಇಂದು ಕೆಟ್ಟ ಪರಿಣಾಮ ಆಗುತ್ತಿದ್ದರೆ, ಅಥವಾ ಹಿಂದೆ ಮಾಡಿದ ಇನ್ಯಾವುದೋ ಕರ್ಮದಿಂದ ಒಳ್ಳೆಯದು ಆಗುತ್ತಿದ್ದರೆ, ಸಾತ್ವಿಕ ತ್ಯಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆತ ಒಳ್ಳೆಯದಾಯಿತು ಎಂದು ಹಾರಾಡುವುದಿಲ್ಲ, ಕೆಟ್ಟದ್ದಾಯಿತು ಎಂದು ಕುಸಿಯುವುದಿಲ್ಲ. ಈತ ದುಃಖಕಾರವಾದ ಕರ್ಮವನ್ನು ದ್ವೇಷಿಸುವುದೂ ಇಲ್ಲ. ಔಷಧಿ ಹೇಗೆ ಕಹಿ ಇರುತ್ತದೋ ಹಾಗೇ ಸತ್ಕರ್ಮ ಕಿಂಚಿತ್ ದುಃಖಕರವಾದಾಗ ಅದರ ಬಗ್ಗೆ ಆತ ಚಿಂತೆ ಮಾಡುವುದಿಲ್ಲ. ಸಾತ್ವಿಕ ತ್ಯಾಗಿಯ ಮನಸ್ಸು ಸತ್ತ್ವಗುಣದಲ್ಲಿ ತುಂಬಿರುತ್ತದೆ. ಅವನಿಗೆ ತಾಮಸ-ರಾಜಸ ಚಿಂತೆಗಳೇ ಬರುವುದಿಲ್ಲ. ಬಲಜ್ಞಾನಗಳಿಂದ ಪರಿಪೂರ್ಣನಾದ ಭಗವಂತನಲ್ಲಿ ಎಲ್ಲವನ್ನು ಅರ್ಪಿಸಿ ಆತ ಕರ್ಮ ಮಾಡುತ್ತಿರುತ್ತಾನೆ. ಇದರಿಂದ ಆತನ ಮನಸ್ಸು ಪೂರ್ಣವಾಗಿ ಭಗವಂತನಲ್ಲಿ ಸಮಾವಿಷ್ಟವಾಗಿರುತ್ತದೆ. ಮೇಧಾವಿಯಾಗಿರುವ ಈತನಿಗೆ ತನ್ನ ಬದುಕಿನ ಪ್ರತೀ ನಡೆಯ ಎಚ್ಚರವಿರುತ್ತದೆ. ಭಗವಂತನಲ್ಲಿ ನೆಲೆಗೊಂಡ ಇಂಥವರ ಮನಸ್ಸಿಗೆ ಎಂದೂ ಯಾವ ಗೊಂದಲವೂ ಸುಳಿಯುವುದಿಲ್ಲ. ಇಂಥವರ ಜೀವನದ ನಡೆ ನೋಡಲು ಸಾಮಾನ್ಯವಾಗಿರುತ್ತದೆ ಆದರೆ ಅವರ ಕ್ರಿಯೆಯ ಹಿಂದಿನ ಅನುಸಂಧಾನ ಮಾತ್ರ ಭಿನ್ನವಾಗಿರುತ್ತದೆ. ಇವರು “ಭಗವಂತ ನೀನು ಮಾಡಿಸುತಿದ್ದಿ-ನಾನು ಮಾಡುತ್ತಿದ್ದೇನೆ” ಎನ್ನುವ ಅನುಸಂಧಾನದಿಂದ ತಮ್ಮ ಕರ್ಮವನ್ನು ಮಾಡುತ್ತಿರುತ್ತಾರೆ.
