ಚಾಮರಾಜನಗರ: ಅ 24 ಮುಂದಿನ ವರ್ಷ 2027 ರ ಜನವರಿ ಅಥವಾ ಫೆಬ್ರವರಿಯಲ್ಲಿ ಇಡೀ ಭಾರತದಲ್ಲಿ ಜನಗಣತಿ ನಡೆಯಲಿದ್ದು, ಧರ್ಮದ ಕಾಲಮ್ನಲ್ಲಿ ‘ಬೌದ್ಧ’ ಎಂದು ಮತ್ತು ಜಾತಿಯ ಕಾಲಮ್ನಲ್ಲಿ ತಮ್ಮ ಸಮುದಾಯದ ಹೆಸರನ್ನು ನಮೂದಿಸುವಂತೆ ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗ ಹಾಗೂ ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಭೀಮ್ ರಾವ್ ಯಶವಂತ್ ರಾವ್ ಅಂಬೇಡ್ಕರ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ವಿವಿಧ ಸಮುದಾಯಗಳ ಕೋಟ್ಯಂತರ ಜನರು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂಬರುವ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಿ ಎಂದರು.

ಚಾಮರಾಜನಗರ ಜಿಲ್ಲೆ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಇಲ್ಲಿ ಅಂಬೇಡ್ಕರ್ ಅನುಯಾಯಿಗಳಿಂದ ಪ್ರಾಬಲ್ಯ ಹೊಂದಿದೆ. ಚಾಮರಾಜನಗರವು 1000 ವರ್ಷಗಳ ಹಿಂದೆ ಮಹಾದೇವ ಎಂಬ ಬೌದ್ಧ ಬಿಕ್ಕುವಿನ ಇತಿಹಾಸವನ್ನು ಹೊಂದಿದೆ. ಅವರು ಬೌದ್ಧ ವಿದ್ವಾಂಸ ಮತ್ತು ಭಿಕ್ಷುವಾಗಿದ್ದು, ಅರಹಂಣ ಪದವಿಯನ್ನು ಪಡೆದಿದ್ದರು. ಹಾಗಾಗಿ ಇಲ್ಲಿ ಬೌದ್ಧ ದೇವಾಲಯ ಮತ್ತು ಕಾವೇರಿ ನದಿಯಿದೆ ಎಂದು ಹೇಳಿದರು.
ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು 1955 ರಲ್ಲಿ ಬೆಂಗಳೂರಿನ ಸದಾಶಿವ ನಗರದಲ್ಲಿ 5 ಎಕರೆ ಭೂಮಿಯನ್ನು ಬೌದ್ಧ ವಿಹಾರ ನಿರ್ಮಾಣಕ್ಕೆ ಸ್ಥಳ ನೀಡಿದ್ದರು. ಕರ್ನಾಟಕ ರಾಜ್ಯದಲ್ಲಿ, ಅದರಲ್ಲೂ ಚಾಮರಾಜನಗರದಲ್ಲಿ ಬೌದ್ಧ ಧರ್ಮವು ಹೆಚ್ಚು ಹರಡುತ್ತಿದೆ. 70 ವರ್ಷಗಳ ಹಿಂದೆ (ಅಕ್ಟೋಬರ್ 14, 1956 ರಂದು) ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ದೀಕ್ಷಾ ಭೂಮಿಯಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದಾಗ ಲಕ್ಷಾಂತರ ಜನರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದು ತಿಳಿಸಿದರು.

ಬಾಬಾಸಾಹೇಬರು ದೇಶದಲ್ಲಿ ಮಹಾ ಕ್ರಾಂತಿಯನ್ನು (ಧಮ್ಮ ಕ್ರಾಂತಿ) ಉಂಟುಮಾಡಿದರು. ಸಿದ್ಧಾರ್ಥ ಕಾಲೇಜುಗಳು, ಶಾಲೆಗಳನ್ನು ಮಹಾರಾಷ್ಟ್ರದಲ್ಲಿ ಆರಂಭಿಸಿದರು ಮತ್ತು ಪರಿಶಿಷ್ಟ ಜಾತಿ ಒಕ್ಕೂಟದಂತಹ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ಅನೇಕ ಶಾಸಕರನ್ನು ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಗೆಲ್ಲಿಸಿದರು. ಭಾರತದ ಇತಿಹಾಸದಲ್ಲಿ ಬ್ರಾಹ್ಮಣಿಸಂ ಮತ್ತು ಬೌದ್ಧ ಧರ್ಮದ ನಡುವೆ ಹೋರಾಟವಿತ್ತೇ ಹೊರತು ಬೇರೆೇನೂ ಇಲ್ಲ. ಶಾಲಾ ಮಟ್ಟದಲ್ಲಿ ಮುಸ್ಲಿಮರು 700 ವರ್ಷಗಳು ಮತ್ತು ಬ್ರಿಟಿಷರು 150 ವರ್ಷಗಳು ಆಳಿದರು ಎಂದು ಹೇಳಿಕೊಡಲಾಗುತ್ತದೆ. ಆದರೆ ಚಂದ್ರಗುಪ್ತ ಮೌರ್ಯರ ಕಾಲದಿಂದಲೂ ಸುಮಾರು 1200 ವರ್ಷಗಳ ಕಾಲ ಬೌದ್ಧ ರಾಜರು ಈ ದೇಶವನ್ನು ಆಳಿದ್ದಾರೆ ಎಂಬುದು ಈ ದೇಶದ ನಿಜವಾದ ಇತಿಹಾಸವಾಗಿದೆ ಎಂದು ಹೇಳಿದರು.

ತಕ್ಷಶಿಲಾ, ನಳಂದ, ವಿಕ್ರಮಶಿಲೆ ಮುಂತಾದ 19 ಬೌದ್ಧ ವಿಶ್ವವಿದ್ಯಾನಿಲಯಗಳು ಭಾರತದಲ್ಲಿದ್ದವು ಮತ್ತು ವಿದೇಶಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಕಲಿಯಲು ಬರುತ್ತಿದ್ದರು. ಅಶೋಕ ಚಕ್ರವರ್ತಿಯು 84,000 ಸ್ತೂಪಗಳನ್ನು, ಗುಹೆಗಳನ್ನು ಮತ್ತು ಬೌದ್ಧ ಸ್ಮಾರಕಗಳನ್ನು ನಿರ್ಮಿಸಿದ್ದನು. ಆದರೆ ದುರದೃಷ್ಟವಶಾತ್ ಅವೆಲ್ಲವೂ ಅನ್ಯ ಧರ್ಮದವರಿಂದ ವಶಪಡಿಸಲ್ಪಟ್ಟವು. ಕಾಲಕ್ರಮೇಣ ಅನೇಕ ಬೌದ್ಧ ಸ್ಮಾರಕಗಳು ತಮ್ಮ ಮೂಲ ಸ್ವರೂಪವನ್ನು ಪಡೆದುಕೊಂಡಿದೆ. ಇಂತಹ ಸಮ್ಮೇಳನಗಳ ಮೂಲಕ ಬೌದ್ಧ ಪರಂಪರೆಯ ಪುನರುಜ್ಜೀವನಕ್ಕೆ ಎಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ಆಕಾಶವೇ ಕಣ್ಣೀರಾದರೂ.. ಬೆಳಗಿದ ಧಮ್ಮ ಜ್ಯೋತಿ

ಚಾಮರಾಜನಗರ, ಅ.24: ಜಿಟಿ ಜಿಟಿ ಮಳೆಯ ನಡುವೆ ಚಾಮರಾಜನಗರ ಎಚ್ಚರವಾಯಿತು, ಆಕಾಶವೇ ಕಣ್ಣೀರಾದರೂ. ಈ ನೆಲದ ಧಮ್ಮ ಜ್ಯೋತಿ ಆರಲಿಲ್ಲ!
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ಕೇವಲ ಸಮ್ಮೇಳನವಾಗಿ ಉಳಿಯದೇ, ಇದು ಶತಮಾನಗಳ ಮೌನಕ್ಕೆ ಸಿಕ್ಕ ಉತ್ತರ ವಾಯಿತು. ಕರುಣೆ, ಮೈತ್ರಿ, ಸಮಾನತೆಯನ್ನು ಸಾರಿತು. ಬುದ್ಧಂ, ಧಮ್ಮಂ ಎಂಬುದು ಲಕ್ಷ ದನಿಗಳ ಒಂದೇ ಘೋಷಣೆಯಾಗಿತ್ತು. ಸುಮಾರು ಹತ್ತು ನಿಮಿಷಗಳ ಕಾಲ ಸಂಗೀತದೊಂದಿಗೆ ನೂರಾರು ಹಾಡುಗಾರರು ಪಠಿಸಿದ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳಿಗೆ ಸಾವಿರಾರು ಜನರು ತಲೆದೂಗಿದರು. ದೇಶ ಹಾಗೂ ರಾಜ್ಯದ ಮೂಲೆ ಮೂಲೆಯಿಂದ ಬಂದ ಬೌದ್ಧ ಬಂಧುಗಳು ಸಮ್ಮೇಳನಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಸಚಿವ ಸಿ.ಪುಟ್ಟರಂಗಶೆಟ್ಟಿ, ಸಮ್ಮೇಳನ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎ.ಆರ್.ಕೃಷ್ಣಮೂರ್ತಿ, ಗೌರವಾಧ್ಯಕ್ಷ ಮನೋರಖ್ಖಿತ ಭಂತೇಜಿ, ಸ್ವಾಗತ ಸಮಿತಿ ಸಂಚಾಲಕ ವೆಂಕಟರಮಣಸ್ವಾಮಿ(ಪಾಪು), ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜ್, ಆರ್.ನರೇಂದ್ರ, ಎ.ಆರ್.ಬಾಲರಾಜ್, ಮುಖಂಡರಾದ ಅಯ್ಯನಪುರ ಶಿವಕುಮಾರ್, ಎನ್.ನಾಗಯ್ಯ, ಪಿ.ಮರಿಸ್ವಾಮಿ, ಎಸ್ಸಿ ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರಯ್ಯ, ಆರ್.ಮಹದೇವ್ ಹಾಗೂ ಇತರರು ಹಾಜರಿದ್ದರು.
ಕಾರ್ಯಕ್ರಮದ ಮೊದಲಿಗೆ ಸಚಿವ ಪುಟ್ಟರಂಗಶೆಟ್ಟಿ ಡಾ,ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ

ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ಆಯೋಜಿಸಿರುವ ಎರಡು ದಿನಗಳ ಕಾಲ ಅಂತಾರಾಷ್ಟೀಯ ಬೌದ್ದ ಮಹಾಸಮ್ಮೇಳನದ ಅಂಗವಾಗಿ ಮೊದಲ ದಿನ ರಾಮಸಮುದ್ರದ ಡಾ,ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪಶುಸಂಗೋಪನೆ, ರೇಷ್ಮೆ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.
ಅಂತಾರಾಷ್ಟೀಯ ಬೌದ್ದ ಮಹಾಸಮ್ಮೇಳನದ ಅಧ್ಯಕ್ಷರು ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ, ಕೊಲಂಬೋ ವಿಶ್ವವಿದ್ಯಾನಿಲಯ ಶೀಲವಂಶ ಮಹಾಥೇರೋ ಬಂತೇಜಿ, ಕೊಳ್ಳೇಗಾಲದ ಜೇತವನ ಬೌದ್ದ ವಿಹಾರದ ಮನೋರಖಿತ ಬಂತೇಜಿ, ಜ್ಞಾನ ಪ್ರಕಾಶ್ ಸ್ವಾಮೀಜಿ, ಬೌದ್ದ ಬಿಕ್ಕುಗಳು ವೆಂಕಟರಮಣಸ್ವಾಮಿ(ಪಾಪು) ಹಾಜರಿದ್ದರು.
– ಶ್ರೀ ಸಾಯಿ ಎಸ್ ಮಂಜು
