ತುಮಕೂರು: ರಾಜ್ಯದಲ್ಲಿ ವಕೀಲರ ಮೇಲೆ ಹೆಚ್ಚುತ್ತಿರುವ ಹಲ್ಲೆ, ಹತ್ಯೆ ಹಾಗೂ ಹತ್ಯಾಯತ್ನದ ಪ್ರಕರಣಗಳನ್ನು ತಡೆಗಟ್ಟಬೇಕು. ವಕೀಲರ ಸುರಕ್ಷತೆಗಾಗಿ ವಕೀಲರ ರಕ್ಷಣಾ ಕಾಯ್ದೆಯನ್ನು ಬಲಪಡಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್. ಕೆಂಪರಾಜಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಆರಂಭಿಸಿದ ವಕೀಲರು, ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಗೆ ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್. ಕೆಂಪರಾಜಯ್ಯ, ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಸರಣಿ ಹತ್ಯೆಗಳು ಹಾಗೂ ಮಾರಣಾಂತಿಕ ಹತ್ಯಾಯತ್ನಗಳು ನಡೆಯುತ್ತಿರುವುದು ವಕೀಲರ ಸಮುದಾಯದಲ್ಲಿ ತೀವ್ರ ಆತಂಕ ಮತ್ತು ಅಭದ್ರತೆಯನ್ನು ಉಂಟುಮಾಡಿದೆ. ನ್ಯಾಯದ ಪರವಾಗಿ ಕಾರ್ಯನಿರ್ವಹಿಸುವ ವಕೀಲರ ಮೇಲೆಯೇ ಹಲ್ಲೆಗಳು ನಡೆಯುತ್ತಿರುವುದು ಖಂಡನೀಯ. ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ವಕೀಲರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ಬೆಂಗಳೂರಿನ ವೈಟ್ಫೀಲ್ಡ್ನ ವಕೀಲ ಮಂಜುನಾಥ್ ಹಾಗೂ ಅನ್ನಪೂರ್ಣೇಶ್ವರಿ ನಗರದ ವಕೀಲ ರಾಮ್ ಅವರ ಹತ್ಯೆ ಮತ್ತು ಗೌರಿಬಿದನೂರಿನ ವಕೀಲ ವೆಂಕಟರಮಣ ಸಣ್ಣಕ್ಕಿ ಅವರ ಮೇಲಿನ ಕೊಲೆ ಯತ್ನದ ಘಟನೆಗಳು ವಕೀಲರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರು ಕೂಡಲೇ ಮಧ್ಯಪ್ರವೇಶಿಸಿ ವಕೀಲರ ರಕ್ಷಣೆಗೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಹೇಶ್ (ಹಿರೇಹಳ್ಳಿ ಮಹೇಶ್) ಮಾತನಾಡಿ, ವಕೀಲರು ಯಾವುದೇ ಭಯವಿಲ್ಲದೆ ತಮ್ಮ ವೃತ್ತಿಯನ್ನು ನಿರ್ವಹಿಸಲು ಪೂರಕವಾದ ವಾತಾವರಣವನ್ನು ಸರ್ಕಾರ ನಿರ್ಮಿಸಬೇಕು. ವಕೀಲರ ಮೇಲಿನ ದೌರ್ಜನ್ಯ ಮತ್ತು ಹಲ್ಲೆಗಳನ್ನು ತಡೆಗಟ್ಟಲು ವಕೀಲರ ರಕ್ಷಣಾ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕರ್ತವ್ಯ ನಿರತ ವಕೀಲರಿಗೆ ಅಗತ್ಯ ಪೊಲೀಸ್ ರಕ್ಷಣೆ ಹಾಗೂ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಹತ್ಯೆಗೀಡಾದ ವಕೀಲರ ಕುಟುಂಬಗಳಿಗೆ ತಕ್ಷಣ ಸೂಕ್ತ ಪರಿಹಾರ ಘೋಷಿಸಬೇಕು. ಹತ್ಯೆ ಮತ್ತು ಹತ್ಯಾಯತ್ನ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು. ನ್ಯಾಯದ ಪರವಾಗಿ ಧ್ವನಿ ಎತ್ತುವ ವಕೀಲರಿಗೇ ಸೂಕ್ತ ರಕ್ಷಣೆ ಇಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಎಲ್. ರವಿಗೌಡ, ಜಂಟಿ ಕಾರ್ಯದರ್ಶಿ ಟಿ.ಎಂ. ಧನಂಜಯ, ಖಜಾಂಚಿ ಬಿ.ಎಂ. ಸಿಂಧೂ, ಕಾರ್ಯಕಾರಿ ಮಂಡಳಿ ನಿರ್ದೇಶಕರಾದ ಡಿ.ಎ. ಜಗದೀಶ್, ಕೆ.ವಿ. ಶ್ರೀನಿವಾಸಮೂರ್ತಿ, ಎಸ್. ಸುರೇಶ್, ಪಿ. ಗೋವಿಂದರಾಜು, ವಿ.ಕೆ. ಶ್ರೀನಿವಾಸಮೂರ್ತಿ, ಸಿ.ಆರ್. ಪದ್ಮಶ್ರೀ, ಜೆ.ಎಸ್. ಸೇವಾಪ್ರಿಯಾ ಸೇರಿದಂತೆ ನೂರಾರು ಹಿರಿಯ, ಕಿರಿಯ ಹಾಗೂ ಮಹಿಳಾ ವಕೀಲರು ಭಾಗವಹಿಸಿದ್ದರು.
ನಂತರ ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.
ವರದಿ : ಕೆ ಬಿ ಚಂದ್ರಚೂಡ್
