ಹಾಸನ: ಹಾಸನಾಂಬೆ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ಸುಗಮವಾಗಿ ದೇವಿಯ ದರ್ಶನ ಪಡೆಯಲು ಪ್ರೋಟೋಕಾಲ್ ಹಾಗೂ ವಿಐಪಿ ದರ್ಶನಕ್ಕೆ ಪ್ರತ್ಯೇಕ ದ್ವಾರ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಧರ್ಮದರ್ಶನ ಹಾಗೂ ₹300 ಟಿಕೆಟ್ ಪಡೆದು ಬರುವ ಭಕ್ತರು ದೀರ್ಘಕಾಲ ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ದೇವಾಲಯದ ಮುಖ್ಯ ದ್ವಾರದ ಎಡ ಅಥವಾ ಬಲಭಾಗದಲ್ಲಿ ಒಬ್ಬೊಬ್ಬರೇ ಪ್ರವೇಶಿಸುವ ರೀತಿಯಲ್ಲಿ ಪ್ರತ್ಯೇಕ ದ್ವಾರ ನಿರ್ಮಿಸಿ, ಪ್ರೋಟೋಕಾಲ್ ಮತ್ತು ವಿಐಪಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದರೆ ಸಾಮಾನ್ಯ ಭಕ್ತರ ಸರತಿ ಸಾಲಿನ ಒತ್ತಡ ಕಡಿಮೆಯಾಗಬಹುದು. ಇದರಿಂದ ಧರ್ಮದರ್ಶನ ಹಾಗೂ ₹300 ಟಿಕೆಟ್ ಹೊಂದಿರುವ ಭಕ್ತರು ಸಕಾಲದಲ್ಲಿ ದೇವಿಯ ದರ್ಶನ ಪಡೆಯಲು ಅನುಕೂಲವಾಗಲಿದೆ ಎಂಬುದು ಭಕ್ತರ ಅಭಿಪ್ರಾಯವಾಗಿದೆ.

ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ದೇವಿಯ ದರ್ಶನಕ್ಕಾಗಿ ಆಗಮಿಸುವ ಭಕ್ತರು, ಬೆಳಗ್ಗೆ 11 ಗಂಟೆಯಾದರೂ ಕೆಇಬಿ ಕಚೇರಿ ಹಾಗೂ ಸಂತೇಪೇಟೆ ಸಮೀಪದಿಂದ ಕಿಲೋಮೀಟರ್ಗಟ್ಟಲೆ ಉದ್ದದ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರಿಂದ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಸುಸ್ತಾಗುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದೇವಸ್ಥಾನದ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಸಲಹೆ ನೀಡಿದ್ದಾರೆ.
ದೇವಾಲಯದ ಪ್ರಶಾಂತತೆ ಕಾಪಾಡಲು ಮನವಿ
ಇನ್ನೊಂದೆಡೆ, ದೇವಾಲಯದ ಗರ್ಭಗುಡಿ ಆವರಣದಲ್ಲಿ ದೊಡ್ಡ ಸ್ಪೀಕರ್ಗಳ ಮೂಲಕ ನಿರಂತರವಾಗಿ ಪ್ರಕಟಣೆಗಳನ್ನು ನೀಡುತ್ತಿರುವುದರಿಂದ ದೇವಾಲಯದ ಪ್ರಶಾಂತ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ ಎಂಬ ಅಸಮಾಧಾನವೂ ಭಕ್ತರಿಂದ ವ್ಯಕ್ತವಾಗಿದೆ.
ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಆಧ್ಯಾತ್ಮಿಕ ಅನುಭವ ಹಾಗೂ ಮನಃಶಾಂತಿ ದೊರೆಯಬೇಕು. ಆದರೆ ನಿರಂತರ ಧ್ವನಿವರ್ಧಕ ಪ್ರಕಟಣೆಗಳಿಂದ ದೇವಾಲಯದಲ್ಲಿ ಸಂತೆ ವಾತಾವರಣದ ಅನುಭವವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.
ಇದರ ಬದಲಾಗಿ ತಿರುಪತಿ ಹಾಗೂ ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಗಳಲ್ಲಿ ಇರುವಂತೆ ಮಧುರವಾದ ದೇವಿಯ ಸ್ತುತಿ, ಭಕ್ತಿಗೀತೆಗಳು ಅಥವಾ ಮಂತ್ರಗಳನ್ನು ಮಿತವಾದ ಧ್ವನಿಯಲ್ಲಿ ಪ್ರಸಾರ ಮಾಡಿದರೆ ಭಕ್ತರಿಗೆ ಹೆಚ್ಚು ನೆಮ್ಮದಿ ದೊರೆಯಲಿದೆ ಎಂದು ಸಲಹೆ ನೀಡಿದ್ದಾರೆ.
ದೇವಿಯ ದರ್ಶನ ಕೆಲವೇ ಸೆಕೆಂಡುಗಳದ್ದಾಗಿದ್ದರೂ, ಆ ಕ್ಷಣ ಭಕ್ತರ ಮನಸ್ಸಿನಲ್ಲಿ ಭಕ್ತಿ, ಶಾಂತಿ ಹಾಗೂ ಸಂತೃಪ್ತಿಯನ್ನು ಮೂಡಿಸುವಂತಿರಬೇಕು. ಹೀಗಾಗಿ ಸರತಿ ಸಾಲಿನ ನಿರ್ವಹಣೆ ಮತ್ತು ದೇವಾಲಯದ ಆಧ್ಯಾತ್ಮಿಕ ವಾತಾವರಣ ಕಾಪಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂಬುದು ಭಕ್ತರ ಆಶಯವಾಗಿದೆ.
