ಚನ್ನರಾಯಪಟ್ಟಣ (ಹಿರೀಸಾವೆ): ರಾಜ್ಯದ ಹಲವು ಗ್ರಾಮಗಳಲ್ಲಿ ನಕಲಿ ಮದ್ಯ ಸೇವನೆಯಿಂದ ಹೃದಯಾಘಾತ, ಕಿಡ್ನಿ ಹಾಗೂ ಯಕೃತ್ತಿನ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳಿಂದ ಯುವಜನರು ಸಾವನ್ನಪ್ಪುತ್ತಿದ್ದಾರೆ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಆತಂಕ ವ್ಯಕ್ತಪಡಿಸಿದರು.
ಹಿರೀಸಾವೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ‘ಗಾಂಧೀ ವ್ಯಕ್ತಿ–ವಿಚಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಾದ್ಯಂತ ನಕಲಿ ಮದ್ಯ ಮಾರಾಟವಾಗುತ್ತಿದ್ದು, ಸಣ್ಣ ವಯಸ್ಸಿನ ಮಕ್ಕಳೂ ಮದ್ಯಪಾನಕ್ಕೆ ದಾಸರಾಗುತ್ತಿದ್ದಾರೆ. ಇದನ್ನು ತಡೆಗಟ್ಟುವಂತೆ ಅಬಕಾರಿ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಸಂಸ್ಕಾರವಿಲ್ಲದ ಅಧಿಕಾರಿಗಳಿಂದ ದೇಶದ ಆಡಳಿತ ನಡೆಯುತ್ತಿರುವುದು ದುರದೃಷ್ಟಕರ. ಶಿಕ್ಷಣ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಅರಿವಿಲ್ಲದ ಅಧಿಕಾರಿಗಳು ಆಯಾ ಇಲಾಖೆಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವುದು ದುರಂತ. ಐಎಎಸ್ ದೊಡ್ಡ ಹುದ್ದೆ ಎಂಬ ಭಾವನೆಯಿಂದ ಹೊರಬಂದು ಗಾಂಧೀಜಿಯವರ ಸಾಮಾಜಿಕ ನ್ಯಾಯದ ಆಶಯದಂತೆ ಕೆಲಸ ಮಾಡಬೇಕು ಎಂದರು.

ಮಕ್ಕಳಿಗೆ ಸಂಸ್ಕಾರ ಕಲಿಸುವ ಅಜ್ಜ–ಅಜ್ಜಿಯರಿಲ್ಲದ ಸಮಾಜ ನಿರ್ಮಾಣವಾಗುತ್ತಿದೆ. ಮದ್ಯಪಾನ ಸೇರಿದಂತೆ ವಿವಿಧ ವ್ಯಸನಗಳ ಜೊತೆಗೆ ಮೊಬೈಲ್ ವ್ಯಸನವೂ ಮನುಷ್ಯನನ್ನು ಏಕಾಂಗಿಯಾಗಿಸುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಹಂಪಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಎಚ್.ಡಿ. ಪ್ರಶಾಂತ್ ಮಾತನಾಡಿ, ಗಾಂಧೀಜಿಯನ್ನು ಕೇವಲ ವ್ಯಕ್ತಿಯಾಗಿ ನೋಡದೆ ತತ್ವವಾಗಿ ಪರಿಗಣಿಸಬೇಕು. ಅಧಿಕಾರದಲ್ಲಿರುವವರು ಗಾಂಧೀಜಿಯವರ ನಾಲ್ಕು ಪ್ರಮುಖ ಆಶಯಗಳನ್ನು ಅಳವಡಿಸಿಕೊಂಡರೆ ವಿಶ್ವದ ಹಲವು ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ. ವೂಡೇ ಪಿ. ಕೃಷ್ಣ ಮಾತನಾಡಿ, ಎಲ್ಲರನ್ನೂ ಪ್ರೀತಿಸಬೇಕು, ಯಾರನ್ನೂ ದ್ವೇಷಿಸಬಾರದು ಎಂಬ ಸಂದೇಶ ಸಾರಿದ ಗಾಂಧೀಜಿಯವರನ್ನು ಟೀಕಿಸುವ ಮೊದಲು ಅವರ ಬಗ್ಗೆ ಓದಿ, ಅರ್ಥಮಾಡಿಕೊಂಡು ನಂತರ ಪ್ರಶ್ನಿಸುವುದು ಸೂಕ್ತ ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಡಿ.ಎಸ್. ಪ್ರತಿಮಾ ಅವರು 2025–26ನೇ ಸಾಲಿನಲ್ಲಿ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಶ್ರೀಕಾಂತ್ ಮತ್ತು ವಿಕಾಸ್ ಅವರಿಗೆ ನಗದು ಬಹುಮಾನ ನೀಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಗಾಂಧೀ ಅಧ್ಯಯನ ಮತ್ತು ಚಿತ್ರಾವಳಿ ಕೇಂದ್ರವನ್ನು ಶರಣಪ್ಪ ಸಲಾದಪುರ ಉದ್ಘಾಟಿಸಿದರು.
ಕೋಶಾಧ್ಯಕ್ಷ ಎಚ್.ಪಿ. ದಿನೇಶ್, ಪ್ರೊ. ಶಿವರಾಜು, ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮಣಗೌಡ, ಬಿಇಒ ಸತೀಶ್, ಬೆಂಗಳೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಎಚ್. ಬಾಲಕೃಷ್ಣ, ವಕೀಲ ಎಚ್.ಬಿ. ವೆಂಕಟೇಶ್, ಎಂಜಿನಿಯರ್ ನರೇಂದ್ರ, ಉಪನ್ಯಾಸಕರಾದ ಡಾ. ಮಂಜುನಾಥ್, ಹರೀಶ್, ಆಶಾ, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಹಿರೀಸಾವೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಮಂಜುನಾಥ್ ಐ ಕೆ
