ಕೆ.ಆರ್.ಪೇಟೆ:ಪ್ರಸ್ತುತ ದಿನಮಾನಗಳಲ್ಲಿ ಕಲಾ ಪೋಷಕರ ಪ್ರೋತ್ಸಾಹದಿಂದ ಮಾತ್ರ ಪೌರಾಣಿಕ ನಾಟಕಗಳು ಉಳಿಯಲು ಸಾಧ್ಯ ಎಂದು ಸಮಾಜ ಸೇವಕ ಆರ್ಟಿಓ ಮಲ್ಲಿಕಾರ್ಜುನ್ ತಿಳಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಡಾ.ರಾಜ್ ರಂಗ ಕಲಾವೇದಿಕೆ ವತಿಯಿಂದ 15 ದಿನಗಳ ಕಾಲ ನಡೆಯುತ್ತಿರುವ ನಾಟಕೋತ್ಸವದಲ್ಲಿ ಶ್ರೀ ಆನೆಗೋಳದಮ್ಮ ಕೃಪಾಪೋಷಿತ ನಾಟಕ ಮಂಡಳಿಯಿಂದ ಪ್ರದರ್ಶನಗೊಂಡ ಶ್ರೀ ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ ಎಂಬ ಸುಂದರ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಆಯೋಜಿಸಲಾಗಿರುವ ಈ ನಾಟಕೋತ್ಸವ ಕನ್ನಡ ಕಲೆ, ಸಂಸ್ಕೃತಿ ಹಾಗೂ ಪೌರಾಣಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಕ್ರಮವಾಗಿದೆ.15 ದಿನಗಳ ಕಾಲ ನಡೆಯುತ್ತಿರುವ ಈ ನಾಟಕೋತ್ಸವದಲ್ಲಿ ಪ್ರತಿದಿನವೂ ವಿವಿಧ ನಾಟಕ ಮಂಡಳಿಗಳು ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುತ್ತಿದ್ದು, ಕಲಾಭಿಮಾನಿಗಳಿಗೆ ರಸದೌತಣ ನೀಡುತ್ತಿವೆ.

ಪ್ರಸ್ತುತ ದಿನಮಾನಗಳಲ್ಲಿ ಕಲಾ ಪೋಷಕರ ಪ್ರೋತ್ಸಾಹದಿಂದ ಮಾತ್ರ ಪೌರಾಣಿಕ ನಾಟಕಗಳು ಉಳಿಯಲು ಸಾಧ್ಯ. ಕಲಾವಿದರಿಗೆ ಪ್ರೋತ್ಸಾಹ, ಪ್ರೇಕ್ಷಕರಿಗೆ ಬೆಂಬಲ ಸಿಕ್ಕಾಗ ಮಾತ್ರ ಇಂತಹ ಕಲೆಗಳು ಮುಂದಿನ ಪೀಳಿಗೆಗೂ ತಲುಪಲು ಸಾಧ್ಯವಾಗುತ್ತದೆ.ಜೊತೆಗೆ ರಾಜ್ ರಂಗ ಕಲಾ ವೇದಿಕೆ ಸತತವಾಗಿ ಮೂರನೇ ನಾಟಕೋತ್ಸವದಲ್ಲಿ ಎರಡನೇ ದಿನ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಈ ನಾಟಕ, ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಕುರುಕ್ಷೇತ್ರದ ಕಥೆಯ ಮೂಲಕ ಧರ್ಮದ ವಿಜಯ, ಸತ್ಯದ ಮಹತ್ವ ಹಾಗೂ ಧರ್ಮ ರಾಜ್ಯ ಸ್ಥಾಪನೆಯ ಸಂದೇಶವನ್ನು ಈ ನಾಟಕ ಸುಂದರವಾಗಿ ಪ್ರೇಕ್ಷಕರಿಗೆ ಪ್ರತಿಯೊಂದು ನಾಟಕದಲ್ಲೂ ಬರುವ ಉತ್ತಮ ಸಾರಾಂಶಗಳನ್ನು ಮೈಗೂಡಿಸಿಕೊಂಡು ಜೀವಿಸಬೇಕು. ನಾಟಕಗಳನ್ನು ಕೇವಲ ಮನರಂಜನೆಗಾಗಿ ನೋಡದೆ, ಅವುಗಳಲ್ಲಿನ ನೀತಿ, ಧರ್ಮ ಹಾಗೂ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಬೇಕು ಎಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಜಯಲಿಂಗೇಗೌಡ, ಹರಿಹರಪುರ ಮಾದೇವೇಗೌಡ,ಡಾ:ರಾಜ್ ರಂಗ ಕಲಾ ಸಂಘದ ಅಧ್ಯಕ್ಷರಾಗಿ ಮುದ್ದನಹಳ್ಳಿ ದೇವರಾಜು,ಸಂಘಟನಾ ಕಾರ್ಯದರ್ಶಿ ಹೊಸಹೊಳಲು ರಘು, ಗೌರವಾಧ್ಯಕ್ಷ ತಂದ್ರೆಕೊಪ್ಪಲು ಮಂಜುನಾಥ್, ಉಪಾಧ್ಯಕ್ಷ ವಿಠಲಪುರ ಸಣ್ಣತಮ್ಮೆಗೌಡ, ಪ್ರಧಾನ ಕಾರ್ಯದರ್ಶಿ ಕೂಡಲಕುಪ್ಪೆ ದೇವರಾಜು,ಖಜಾಂಚಿ ಮರಟಿಕೊಪ್ಪಲು ಮಂಜುನಾಥ್,ಆರ್ ಟಿ ಓ ಮಲ್ಲಿಕಾರ್ಜುನ್ ಅವರ ಆಪ್ತ ಸಹಾಯಕ ಗಂಜಿಗೆರೆ ಮಹೇಶ್,ಸೇರಿದಂತೆ ಕಲಾವಿದರು ಕಲಾ ಪೋಷಕರು ಇದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
