ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ಹೋಬಳಿ ಕೇಂದ್ರದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅರುವನಹಳ್ಳಿ ಎ.ಆರ್. ಜೀವನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಅಶೋಕ್ ಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎ.ಆರ್. ಜೀವನ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಅವರನ್ನು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಘೋಷಿಸಿದರು.

ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ, ಜೆಡಿಎಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ದುಡಿಯುವವರಿಗೆ ಪಕ್ಷದಲ್ಲಿ ಅಧಿಕಾರ ಹಾಗೂ ಮನ್ನಣೆ ದೊರೆಯುತ್ತದೆ ಎಂಬುದಕ್ಕೆ ಜೀವನ್ ಅವರ ಆಯ್ಕೆಯೇ ಸಾಕ್ಷಿಯಾಗಿದೆ. ಪಕ್ಷಕ್ಕಾಗಿ ಶ್ರಮಿಸುತ್ತಿರುವ ಯುವಕರಿಗೆ ಜೆಡಿಎಸ್ ಸದಾ ಪ್ರೋತ್ಸಾಹ ನೀಡುತ್ತದೆ. ಯುವ ಉತ್ಸಾಹಿ ಜೀವನ್ ಅವರು ಎಲ್ಲಾ ನಿರ್ದೇಶಕರ ಸಲಹೆ ಮತ್ತು ಸಹಕಾರ ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸಿ, ಸೊಸೈಟಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ ಎಂದು ಶುಭ ಹಾರೈಸಿದರು.

ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಲು ಶ್ರವಣಬೆಳಗೊಳ ಹೋಬಳಿಯ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸಿದ್ದರು. ಪಕ್ಷಭೇದ ಮರೆತು ವಿವಿಧ ಪಕ್ಷಗಳ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೂವಿನ ಹಾರ ಹಾಗೂ ಶಾಲು ಹೊದಿಸಿ ಜೀವನ್ ಅವರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಟಿಎಪಿಎಂಎಸ್ ಅಧ್ಯಕ್ಷ ತೋಟಿ ನಾಗರಾಜ್, ಬ್ಯಾಂಕಿನ ವಿಸ್ತರಣಾಧಿಕಾರಿ ಅಭಿಲಾಷ್, ಸೊಸೈಟಿಯ ನಿರ್ದೇಶಕರಾದ ಶರತ್ ಕುಮಾರ್, ಅಶೋಕ್ ಕುಮಾರ್, ಪುಟ್ಟರಾಜು, ಧರ್ಮರಾಜು, ನಾಗರಾಜು, ಕೊತ್ತನಗಟ್ಟೆ ವೆಂಕಟೇಶ್, ಕಮಲಮ್ಮ, ಶೋಭಾ, ಪ್ರದೀಪ್, ಕುಮಾರ್, ಮಂಜೇಗೌಡ ಸೇರಿದಂತೆ ಇತರ ನಿರ್ದೇಶಕರು ಹಾಗೂ ಕಾರ್ಯದರ್ಶಿ ಮಂಜೇಗೌಡ ಉಪಸ್ಥಿತರಿದ್ದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಚಿಕ್ಕಬೆಳತಿ ಪ್ರವೀಣ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಗದೀಶ್, ಕಬ್ಬಾಳ್ ರಮೇಶ್, ವಡ್ಡರಹಳ್ಳಿ ರಾಜಣ್ಣ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
– ಮಂಜುನಾಥ್ ಐ.ಕೆ
