ಕೊರಟಗೆರೆ: ರಾಜ್ಯಾದ್ಯಂತ ವಕೀಲರ ಮೇಲೆ ನಡೆಯುತ್ತಿರುವ ಸರಣಿ ಹಲ್ಲೆ, ದೌರ್ಜನ್ಯ ಹಾಗೂ ಹತ್ಯೆ ಪ್ರಕರಣಗಳನ್ನು ಖಂಡಿಸಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಪಿ.ಎನ್. ಕೃಷ್ಣಮೂರ್ತಿ ಅವರು, ವಕೀಲರು ಸೇರಿದಂತೆ ಜನಸಾಮಾನ್ಯರ ನಡುವೆ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ನ್ಯಾಯಕ್ಕಾಗಿ ಹೋರಾಡುವ ವಕೀಲರಿಗೇ ಇಂದು ರಕ್ಷಣೆ ಇಲ್ಲದಂತಾಗಿದೆ. ವಕೀಲರ ಮೇಲಿನ ಹಲ್ಲೆ ಕೇವಲ ವ್ಯಕ್ತಿಯ ಮೇಲಿನ ದಾಳಿಯಲ್ಲ, ಅದು ನ್ಯಾಯಾಂಗ ವ್ಯವಸ್ಥೆ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಗೌರಿಬಿದನೂರು ಮತ್ತು ಬೆಂಗಳೂರಿನಲ್ಲಿ ನಡೆದ ಘಟನೆಗಳು ಇಡೀ ವಕೀಲ ಸಮುದಾಯವನ್ನು ಆತಂಕಕ್ಕೀಡು ಮಾಡಿವೆ. ಘಟನೆಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ವಕೀಲರ ಸುರಕ್ಷತಾ ಕಾಯ್ದೆಯನ್ನು ಬಲಪಡಿಸಿ, ವಕೀಲರಿಗೆ ಸೂಕ್ತ ಭದ್ರತೆ ಕಲ್ಪಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು, ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೂ ಹಲ್ಲೆ ಮತ್ತು ಬೆದರಿಕೆ ಪ್ರಕರಣಗಳು ಹೆಚ್ಚುತ್ತಿವೆ. ಜನರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ನ್ಯಾಯಯುತವಾಗಿ ಒದಗಿಸುವ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವವರಿಗೂ ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದರು.
ಸರ್ಕಾರ ಕೂಡಲೇ ವಕೀಲರ ಹಾಗೂ ಅಧಿಕಾರಿಗಳ ರಕ್ಷಣೆಗೆ ಮುಂದಾಗದಿದ್ದರೆ, ಮುಂದಿನ ದಿನಗಳಲ್ಲಿ ಕೊರಟಗೆರೆ ಹಾಗೂ ತುಮಕೂರು ಜಿಲ್ಲಾ ಮುಖಂಡರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪಿ.ಎನ್. ಕೃಷ್ಣಮೂರ್ತಿ ಎಚ್ಚರಿಕೆ ನೀಡಿದರು.
ವರದಿ: ನರಸಿಂಹಯ್ಯ ಹೊಸಕೋಟೆ
