ಶ್ಲೋಕ – 29
ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ ಶೃಣು ।
ಪ್ರೋಚ್ಯಮಾನಮಶೇಷೇಣ ಪೃಥಕ್ ತ್ವೇನ ಧನಂಜಯ ॥೨೯॥
ಬುದ್ಧೇಃ ಭೇದಮ್ ಧೃತೇಃ ಚ ಏವ ಗುಣತಃ ತ್ರಿವಿಧಮ್ ಶೃಣು ।
ಪ್ರೋಚ್ಯಮಾನಮ್ ಅಶೇಷೇಣ ಪೃಥಕ್ ತ್ವೇನ ಧನಂಜಯ –– ಧನಂಜಯ, ಬುದ್ಧಿ ಮತ್ತು ಧೈರ್ಯ ಕೂಡ ಗುಣದಿಂದ ಮೂರು ಬಗೆ. ಪೂರ್ತಿಯಾಗಿ ಅದರ ಪ್ರತ್ಯೇಕ ವಿವರಣೆಯನ್ನಾಲಿಸು.
ದೇಹ ಮತ್ತು ಇಂದ್ರಿಯಗಳು ಪೂರ್ಣಪ್ರಮಾಣದಲ್ಲಿ ವಿಕಸನ ಹೊಂದಿರುವುದು ಮಾನವರಲ್ಲಿ. ಅದಕ್ಕಾಗಿ ಮಾನವ ಶರೀರವನ್ನು ‘ಪುರ’ ಎನ್ನುತ್ತಾರೆ. ಈ ದೇಹದಲ್ಲಿರುವ ಜೀವನಿಗೆ(ಪುರುಷ) ಬುದ್ಧಿ ಮತ್ತು ಧೃತಿ ಬಹಳ ಮುಖ್ಯವಾದ ಅಂಶ. ನಾವು ನಮ್ಮ ಜೀವನದಲ್ಲಿ ಹೇಡಿಗಳಾಗದೆ ಬುದ್ಧಿವಂತರಾಗಿ ಬದುಕಬೇಕು. ಈ ಬುದ್ಧಿ ಮತ್ತು ಧೃತಿಯಲ್ಲಿ ಕೂಡ ಮೂರು ವಿಧ. ಸಾತ್ವಿಕ, ರಾಜಸ ಮತ್ತು ತಾಮಸ. ನಾವು ನಮ್ಮ ಜೀವನದಲ್ಲಿ ರಾಜಸ ಮತ್ತು ತಾಮಸವನ್ನು ಅನುಸರಿಸಬಾರದು. ಅದಕ್ಕಾಗಿ ಯಾವುದು ರಾಜಸ ಯಾವುದು ತಾಮಸ ಎನ್ನುವ ವಿಚಾರ ನಮಗೆ ತಿಳಿದಿರಬೇಕು. “ಬುದ್ಧಿ ಮತ್ತು ಧೃತಿಯಲ್ಲಿ ಮೂರು ಬಗೆಯನ್ನು ಪೂರ್ಣವಾಗಿ, ಬಿಡಿಬಿಡಿಯಾಗಿ ಹೇಳುತ್ತೇನೆ-ಅದನ್ನು ಗಮನವಿಟ್ಟು ಕೇಳು” ಎಂದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ. ನಾವು ಸಾತ್ವಿಕ ಧೃತಿಯನ್ನು ಗೆದ್ದು ಧನಂಜಯರಾಬೇಕು ಎನ್ನುವುದು ಕೃಷ್ಣನ ಈ ಸಂದೇಶದ ಮೂಲ ಉದ್ದೇಶ.
